janadhvani

Kannada Online News Paper

ಮೊದಲು ರಾಜೀನಾಮೆ ಇತ್ಯರ್ಥವಾಗಲಿ, ನಂತರ ವಿಶ್ವಾಸ ಮತ- ಕೃಷ್ಣಭೈರೇಗೌಡ

ಬೆಂಗಳೂರು (ಜುಲೈ.22); ಅತೃಪ್ತರ ರಾಜೀನಾಮೆ ಅಂಗೀಕಾರ ವಿಚಾರವಾಗಿ ಈವರೆಗೆ ಯಾವುದೇ ತೀರ್ಮಾನವಾಗದ ಕಾರಣ ಬಹುಮತ ಯಾಚನೆ ಎಂಬುದು ತ್ರಿಶಂಕು ಸ್ಥಿತಿಯಲ್ಲಿದೆ. ಹೀಗಾಗಿ ಇದಕ್ಕೆ ಸ್ಪೀಕರ್ ಶೀಘ್ರವಾಗಿ ಒಂದು ಪರಿಹಾರ ನೀಡಬೇಕು ಅಲ್ಲಿಯವರೆಗೆ ಬಹುಮತ ಯಾಚನೆಯನ್ನು ಮುಂದೂಡಬೇಕು ಎಂದು ಸಚಿವ ಕೃಷ್ಣಭೈರೇಗೌಡ ಮನವಿ ಮಾಡಿದ್ದಾರೆ.

ಸೋಮವಾರದ ಅಧಿವೇಶನದಲ್ಲಿ ತಮಿಳುನಾಡಿನಲ್ಲಿ 2017ರಲ್ಲಿ ಉಂಟಾದ ರಾಜಕೀಯ ಪ್ರಕ್ಷುಬ್ಧ ವಾತಾವರಣ ಹಾಗೂ 11 ಶಾಸಕರನ್ನು ಅನೂರ್ಜಿತಗೊಳಿಸಿದ ಸ್ಪೀಕರ್​ ತೀರ್ಮಾನವನ್ನು ಉಲ್ಲೇಖಿಸಿ ಮಾತನಾಡಿದ ಕೃಷ್ಣಭೈರೇಗೌಡ, “2017ರಲ್ಲಿ ವಿಪ್ ಉಲ್ಲಂಘಿಸಿದ ಆಡಳಿತ ಪಕ್ಷದ 11 ಶಾಸಕರನ್ನು ಅಲ್ಲಿನ ಸ್ಪೀಕರ್ ಅನೂರ್ಜಿತಗೊಳಿಸಿದ್ದರು. ಸ್ಪೀಕರ್ ನಿರ್ಣಯವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಇಂದು ರಾಜ್ಯದಲ್ಲೂ ಸಹ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ.

ಆಡಳಿತ ಮೈತ್ರಿ ಪಕ್ಷಗಳ 15ಕ್ಕೂ ಹೆಚ್ಚು ಶಾಸಕರು ಇಂದು ಆಪರೇಷನ್ ಕಮಲಕ್ಕೆ ಬಲಿಯಾಗಿ ಮುಂಬೈನಲ್ಲಿ ಕುಳಿತಿದ್ದಾರೆ. ಇವರೆಲ್ಲರೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಇವರ ವಿರುದ್ಧ ಮೈತ್ರಿ ಪಕ್ಷದ ನಾಯಕರು ವಿಪ್ ಉಲ್ಲಂಘನೆ ದೂರು ನೀಡಿದ್ದಾರೆ. ಸದನದಲ್ಲಿ ಇವರ ಹಾಜರಿ ಇಲ್ಲದೆ ಬಹುಮತ ಯಾಚನೆ ನಡೆಯುವುದು ಸರಿಯಲ್ಲ. ಹೀಗಾಗಿ ಸ್ಪೀಕರ್ ಮೊದಲು ಇವರ ರಾಜೀನಾಮೆ ಅರ್ಜಿಯ ಕುರಿತು ವಿಚಾರಣೆ ನಡೆಸಿ. ವಿಪ್ ಉಲ್ಲಂಘನೆ ಕುರಿತು ವಿಚಾರಣೆ ನಡೆಸಿ ಕ್ರಮ ಜರುಗಿಸಿ. ಈ ತ್ರಿಶಂಕು ಸ್ಥಿತಿಯನ್ನು ತೊಲಗಿಸಿ ನಂತರ ವಿಶ್ವಾಸಮತ ಯಾಚನೆಗೆ ಅವಕಾಶ ನೀಡಿ” ಎಂದು ಅವರು ಮನವಿ ಮಾಡಿದ್ದಾರೆ.