ನವದೆಹಲಿ: ಹಲವು ರೀತಿಯ ಬದಲಾವಣೆಗಳ ನಂತರ ಇದೀಗ ವಾಟ್ಸಪ್ ಭದ್ರತಾ ವೈಶಿಷ್ಟ್ಯಗಳನ್ನು ಬಲಪಡಿಸಲು ಮುಂದಾಗಿದ್ದು, ಗೌಪ್ಯತೆ ಅದರಲ್ಲೂ ವಿಶೇಷವಾಗಿ ಸುಳ್ಳು ಸುದ್ದಿಗಳು ಹಾಗೂ ತಪ್ಪು ಮಾಹಿತಿ ಕುರಿತು ನಿಗಾವಹಿಸಿದೆ.
ದೇಶಾದ್ಯಂತ ಪ್ರತಿ ತಿಂಗಳು ಸುಮಾರು 20 ಕೋಟಿಗೂ ಅಧಿಕ ಆಕ್ಟಿವ್ ಬಳಕೆದಾರರನ್ನು ಹೊಂದಿರುವ ವಾಟ್ಸಪ್, ದೇಶದಲ್ಲೇ ಅತ್ಯಂತ ಜನಪ್ರಿಯ ಹಾಗೂ ಹೆಚ್ಚು ಬಳಕೆಯಲ್ಲಿರುವ ಆಪ್ ಆಗಿದೆ. ಬಳಕೆದಾರರ ಅಗತ್ಯತೆಗನುಗಣವಾಗಿ ವಾಟ್ಸಪ್‍ನ ವೈಶಿಷ್ಟ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಸ್ಟಿಕ್ಕರ್ಸ್, ವಿಡಿಯೋ ಕಾಲಿಂಗ್ ಸೇರಿದಂತೆ ವಿವಿಧ ಬಗೆಯ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಇದೀಗ ಭದ್ರತೆ, ಗೌಪ್ಯತೆ, ಸುಳ್ಳು ಸುದ್ದಿ ಹರಡುವಿಕೆ ಹಾಗೂ ತಪ್ಪು ಮಾಹಿತಿ ಹಂಚಿಕೊಳ್ಳುವಿಕೆ ಕುರಿತು ತೀವ್ರ ನಿಗಾ ವಹಿಸಿದೆ.
ಇತ್ತೀಚೆಗೆ ಫಾರ್ವರ್ಡೆಡ್ ಲೇಬಲ್, ಫ್ಯಾಕ್ಟ್ ಚೆಕ್‍ನಿಂದ ಅನುಮಾನಾಸ್ಪದ ಲಿಂಕ್ ಪತ್ತೆ ಹಚ್ಚುವುದು ಸೇರಿದಂತೆ ಭದ್ರತೆಯ ಕುರಿತು ವಿವಿಧ ವೈಶಿಷ್ಟ್ಯಗಳನ್ನು ಸೇರಿಸಿದೆ. ಅಲ್ಲದೆ, ಸ್ಪ್ಯಾಮ್ ಮತ್ತು ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಿ ತೆಗೆಯುವ ವೇಳೆ ಪ್ರತಿ ತಿಂಗಳು ಸುಮಾರು 2 ಲಕ್ಷ ಅಕೌಂಟ್ ಗಳನ್ನು ಬ್ಯಾನ್ ಮಾಡಲಾಗಿದೆ ಎಂದು ತಿಳಿಸಿದೆ.
ವಾಟ್ಸಪ್‍ನ ಪ್ರಮುಖ ಗೌಪ್ಯತೆ ಮತ್ತು ಭದ್ರತೆ ವೈಶಿಷ್ಟ್ಯಗಳು:
ಟು ಸ್ಟೆಪ್ ವೆರಿಫಿಕೇಷನ್
ಆರು ಪಿನ್ ಸಂಖ್ಯೆಗಳ ಮೂಲಕ ನಿಮ್ಮ ಅಕೌಂಟ್‍ನ್ನು ವೈರಿಫೈ ಮಾಡಿಕೊಳ್ಳಬಹುದಾಗಿದೆ. ಹೇಗೆ ಎಂಬುದು ಇಲ್ಲಿದೆ.
ಟು ಸ್ಟಪ್ ವೆರಿಫಿಕೇಷನ್ – ಸೆಟ್ಟಿಂಗ್ಸ್> ಅಕೌಂಟ್> ಟು ಸ್ಟೆಪ್ ವೆರಿಫಿಕೇಷನ್ > ಎನೇಬಲ್
ರಿಪೋರ್ಟಿಂಗ್ ಬ್ಲಾಕಿಂಗ್
ನಿಮಗೆ ಅಪರಿಚಿತ ನಂಬರ್‍ನಿಂದ ಸ್ಪ್ಯಾಮ್ ಮೆಸೇಜ್ ಬಂದಲ್ಲಿ ಆ ಚಾಟ್ ತೆರೆದು, ಸೆಂಡರ್ ನೇಮ್ ಇಲ್ಲವೇ ನಂಬರ್, ಗ್ರೂಪ್ ಆಗಿದ್ದರೆ ಗ್ರೂಪ್ ಹೆಸರಿನ ಮೇಲೆ ಕ್ಲಿಕ್ ಮಾಡಿ ಪ್ರೊಫೈಲ್ ತೆರೆಯಿರಿ. ಕೆಳಗಡೆಗೆ ಸ್ಕ್ರಾಲ್ ಮಾಡಿ ಅಲ್ಲಿ ರಿಪೋರ್ಟ್ ಕಾಂಟ್ಯಾಕ್ಟ್ ಇಲ್ಲವೆ ರಿಪೋರ್ಟ್ ಗ್ರೂಪ್ ಮೇಲೆ ಕ್ಲಿಕ್ ಮಾಡಿ. ಇಲ್ಲವೇ ಬ್ಲಾಕ್ ಮಾಡುವ ಮೂಲಕ ಸಹ ನೀವು ಸ್ಪ್ಯಾಮ್ ಮೆಸೇಜ್‍ನಿಂದ ದೂರ ಇರಬಹುದು. ಇಲ್ಲವೆ ಗ್ರೂಪ್‍ನಿಂದ ಎಕ್ಸಿಟ್ ಸಹ ಆಗಬಹುದು.
ಸುಳ್ಳು ಸುದ್ದಿ ಮತ್ತು ವಿಡಿಯೋಗಳು ಹರಿದಾಡಿ ಗಲಾಟೆ ಸಂಭವಿಸಿದ ಪ್ರಕರಣಗಳು ಕಳೆದ ವರ್ಷ ಭಾರತದಲ್ಲಿ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಸುಳ್ಳು ಸುದ್ದಿಗಳನ್ನು ತಡೆಯಲು ಕಠಿಣ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಈ ಸಂಬಂಧ ದೂರು ನೀಡಲು ಒಬ್ಬರು ಅಧಿಕಾರಿಯನ್ನು ನೇಮಿಸಬೇಕೆಂಂದು ವಾಟ್ಸಪ್ ಕಂಪನಿಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ವಾಟ್ಸಪ್ ಕಂಪನಿ ಮೊದಲ ಬಾರಿಗೆ ಗ್ರೀವೇನ್ಸ್ ಆಫೀಸರ್(ಕುಂದುಕೊರತೆ ಅಧಿಕಾರಿ)ನ್ನು ನೇಮಿಸಿದೆ. ಈ ಅಧಿಕಾರಿಗೆ ನಿಮ್ಮ ಕುಂದು ಕೊರತೆಗಳ ಕುರಿತು ನೇರವಾಗಿ ದೂರು ನೀಡಬಹುದಾಗಿದೆ. ಅಧಿಕಾರಿಗೆ ನೀವು ಇ-ಮೇಲ್ ಮೂಲಕ ಇಲ್ಲವೆ ದೂರು ಪ್ರತಿಯಲ್ಲಿ ನಿಮ್ಮ ಎಲೆಕ್ಟ್ರಿಕ್ ಸಿಗ್ನೇಚರ್ ಮಾಡಿರುವ ಪ್ರತಿ ಮೂಲಕ ದೂರು ನೀಡಬಹುದು. ನಿಮ್ಮ ಖಾತೆ ಬಗ್ಗೆ ತಿಳಿಯಬೇಕಾದಲ್ಲಿ ನಿಮ್ಮ ಮೊಬೈಲ್ ನಂಬರ್ (+91 ಸೇರಿಸಿ) ಮೂಲಕ ಪಡೆಯಬಹುದು. ಪೋಸ್ಟ್ ಮೂಲಕ ಸಹ ಅಧಿಕಾರಿಯನ್ನು ಸಂಪರ್ಕಿಸಬಹುದು.
ರಿಕ್ವೆಸ್ಟ್ ಅಕೌಂಟ್ ಇನ್ಫೋ
ವಾಟ್ಸಪ್ ಬಳಕೆದಾರರು ನಿಮ್ಮ ಖಾತೆಯ ಡಾಟಾವನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು ಹಾಗೂ ಬೇರೊಬ್ಬರಿಗೆ ಕಳುಹಿಸಬಹುದಾಗಿದೆ. ನೀವು ಮನವಿ ಮಾಡಿ ಮೂರು ದಿನಗಳ ನಂತರ ವಾಟ್ಸಪ್ ನಿಮ್ಮ ಎಲ್ಲ ರೀತಿಯ ಡಾಟಾವನ್ನು ನೀಡುತ್ತದೆ. ಸೆಟ್ಟಿಂಗ್ಸ್> ಅಕೌಂಟ್> ರಿಕ್ವೆಸ್ಟ್ ಅಕೌಂಟ್ ಇನ್ಫೋ. ಮನವಿ ಮಾಡಿದ ಮೇಲೆ ಡೌನ್‍ಲೋಡ್ ಮಾಡಿಕೊಳ್ಳಲು ಸಿದ್ಧವಾದ ನಂತರ ನಿಮಗೆ ಸಂದೇಶ ರವಾನೆಯಾಗುತ್ತದೆ. ನಂತರ ಸೆಟ್ಟಿಂಗ್ಸ್> ಅಕೌಂಟ್> ರಿಕ್ವೆಸ್ಟ್ ಅಕೌಂಟ್ ಇನ್ಫೋ> ಡೌನ್‍ಲೋಡ್ ರಿಪೋರ್ಟ್ ಕ್ಲಿಕ್ ಮಾಡಿದ ನಂತರ ಜಿಪ್ ಫೈಲ್‍ನ್ನು ಡೌನ್‍ಲೋಡ್ ಮಾಡಬಹುದಾಗಿದೆ.