janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


ಬೆಂಗಳೂರು: ರಾಜ್ಯದಲ್ಲಿ  2019-20ನೇ ಸಾಲಿನ ವಿದ್ಯುತ್ ದರ ಪರಿಷ್ಕರಣೆ ಪ್ರಕಟವಾಗಿದ್ದು, ಅದರಂತೆ ಬೆಸ್ಕಾಂ, ಮೆಸ್ಕಾಂ, ಸೆಸ್ಕಾಂ, ಹೆಸ್ಕಾಂ, ಜೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರ 33 ಪೈಸೆ ಏರಿಕೆ ಮಾಡಲಾಗಿದೆ. ಏಪ್ರಿಲ್ 1 ರಿಂದ ಪೂರ್ವಾನ್ವಯವಾಗುವಂತೆ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭುದಯಾಳ್ ಮೀನಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಸ್ಕಾಂ ಪ್ರತಿ ಯೂನಿಟ್​ಗೆ 1.01 ರೂ. ಏರಿಕೆ ಮಾಡುವಂತೆ ಕೆಇಆರ್​ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕೆಇಆರ್​ಸಿ ಯೂನಿಟ್​ಗೆ 33 ಪೈಸೆ ಏರಿಕೆ ಮಾಡಲು ಒಪ್ಪಿಗೆ ನೀಡಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ ಒಂದು ಯೂನಿಟ್ ವಿದ್ಯುತ್​ಗೆ 1.38, ಸೆಸ್ಕಾಂ ಯೂನಿಟ್ ಗೆ ಸರಾಸರಿ 1 ರೂ., ಹೆಸ್ಕಾಂ 1.63 ರೂ. ಗೆ, ಹಾಗೂ ಜೆಸ್ಕಾಂ 1.27 ಪೈಸೆ ಏರಿಕೆ ಮಾಡುವಂತೆ ಕೆಇಆರ್​ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಎಲ್ಲ ಐದು ವಿದ್ಯುತ್ ಸರಬರಾಜು ಕಂಪನಿಯಲ್ಲಿ ಪ್ರತಿ ಯೂನಿಟ್​ಗೆ ಸರಾಸರಿ ವಿದ್ಯುತ್​ ದರವನ್ನು 33 ಪೈಸೆಗೆ ಏರಿಕೆಗೆ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.

ಎಲ್ಲಾ 5 ಎಸ್ಕಾಂಗಳಿಂದ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಎಸ್ಕಾಂಗಳು ಯೋಜಿತ ಆದಾಯದಲ್ಲಿ 7,217 ಕೋಟಿ ರೂ. ಕೊರತೆ ಬರುತ್ತದೆ ಎಂದು ಪ್ರಸ್ತಾಪಿಸಿತ್ತು. ಹಾಗಾಗಿ 1 ರೂ. ನಿಂದ 1.67 ರೂ. ಏರಿಕೆಗೆ ಕೋರಲಾಗಿತ್ತು. ವಿಚಾರಣೆ ನಡೆಸಿ ಸರಾಸರಿ ಯೂನಿಟ್ ಗೆ 33 ಪೈಸೆ ಏರಿಕೆಗೆ ಒಪ್ಪಿಗೆ ಕೊಡಲಾಗಿದೆ ಎಂದು ಹೇಳಿದರು.

ಎಲೆಕ್ಟ್ರಿಕ್ ಮೋಟಾರು ವಾಹನ ದರ ಯೂನಿಟ್​ಗೆ 5 ರೂ. ನಿಗದಿ ಮಾಡಲಾಗಿದೆ. ಐಪಿ ಪಂಪ್ ಸೆಟ್ ರಾಜ್ಯದಲ್ಲಿ 10 ಎಚ್​ಪಿಗಿಂತ ಕಡಿಮೆ ಸಾಮರ್ಥ್ಯದ 28 ಲಕ್ಷ ಪಂಪ್ ಸೆಟ್ ಗಳಿವೆ. ರಾಜ್ಯ ಸರ್ಕಾರ 2019-20 ನೇ ಸಾಲಿನ ಬಜೆಟ್​ನಲ್ಲಿ 11,250 ಕೋಟಿ ರೂ. ಎಸ್ಕಾಂಗಳಿಗೆ ಸಬ್ಸಿಡಿ ಪಾವತಿಗೆ ಹಣ ತೆಗೆದಿರಿಸಿದೆ. ಆದರೆ ಎಸ್ಕಾಂಗಳಿಗೆ ಒಟ್ಟು 11,780 ಕೋಟಿ ರೂ. ಸಬ್ಸಿಡಿ ಪಾವತಿಸಬೇಕಿದೆ. ಹೀಗಾಗಿ ಕೊರತೆ ಕಂಡು ಬಂದಿದೆ. ಕೆಪಿಟಿಸಿಎಲ್ ಪ್ರಸರಣ ನಷ್ಠ ಶೇ.3.16 ನಷ್ಟಿದೆ. ಸರಬರಾಜು ನಷ್ಠ ಶೇ.12.5 ರಷ್ಟಿದೆ. ನಮ್ಮ ಮೆಟ್ರೋಗೆ ಪ್ರತಿ ಯೂನಿಟ್ ವಿದ್ಯುತ್ ದರ 5.20 ರಿಯಾಯಿತಿ ದರ ನಿಗದಿಪಡಿಸಲಾಗಿದೆ. ಉಷ್ಣವಿದ್ಯುತ್ ಸ್ಥಾವರದಿಂದ ವಿದ್ಯುತ್ ಖರೀದಿ ದರ ಏರಿಕೆ, ಉತ್ಪಾದನಾ ವೆಚ್ಚ ಏರಿಕೆ, ಸಿಬ್ಬಂದಿ ವೇತನ ಏರಿಕೆ ಮತ್ತಿತರ ಕಾರಣಗಳಿಂದ ವಿದ್ಯುತ್ ದರ ಏರಿಕೆ ಮಾಡಲು ಕಾರಣ ಎಂದು ಶಂಭುದಯಾಳ್ ಮೀನಾ ತಿಳಿಸಿದರು.

error: Content is protected !! Not allowed copy content from janadhvani.com