janadhvani

Kannada Online News Paper

ಮರೆಯಾದರೂ ಮರೆಯಲಾಗದ ಆಪ್ತಮಿತ್ರ ಸಿರಾಜ್ ಬನ್ನೂರು

ಮದರಸ ಜೀವನದಿಂದಲೇ ಪ್ರತಿಯೊಂದು ಹೆಜ್ಜೆಗಳಲ್ಲೂ ಒಟ್ಟಾಗಿ ಮುನ್ನುಗ್ಗುತ್ತಿದ್ದ ನಾವು. ಜೀವನದ ಕಷ್ಟ-ಸುಖಗಳಲ್ಲಿ, ಏಳು-ಬೀಳುಗಳಲ್ಲಿ ಜೊತೆಯಾಗಿದ್ದುಕೊಂಡು ಜೀವನ ನಡೆಸುತ್ತಿದ್ದೆವು. ವಿಧ್ಯಾರ್ಥಿ ಜೀವನದಿಂದಲೇ ನಾಯಕತ್ವ ಗುಣ ಮೈಗೂಡಿಸಿಕೊಂಡಿದ್ದ ಸಿರಾಜ್, ಬುಸ್ತಾನುಲ್ ಉಲೂಂ ಮದರಸ ಬನ್ನೂರು ವಿಧ್ಯಾರ್ಥಿಯಾಗಿದ್ದಾಗ SBS ನ ಅಧ್ಯಕ್ಷನಾಗಿ ಚುನಾಯಿತನಾಗಿ ಸೇವೆ ಸಲ್ಲಿಸಿದ್ದು ಇತಿಹಾಸ. ನಂತರದ ದಿನಗಳಲ್ಲಿ ನಾವು SSF ನಲ್ಲಿ ಬಹಳ ಉತ್ಸಾಹದಿಂದ ಕಾರ್ಯಾಚರಿಸುತ್ತಿದ್ದೆವು.

ಬಹಳ ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ಸಿರಾಜ್ ಎಲ್ಲರಿಗೂ ಅಚ್ಚುಮೆಚ್ಚು. ಬಹುತೇಕ ಸುನ್ನೀ ಕಾರ್ಯಕ್ರಮಗಳಲ್ಲೂ ಜೊತೆಯಾಗಿ ಹಾಜರಾಗುತ್ತಿದ್ದ ನಮಗೆ ಮರ್ಕಝುಲ್ ಹುದಾ ಕುಂಬ್ರಾದ ಶೈಕ್ಷಣಿಕ ಸಮಾರಂಭ ಕೊನೆಯ ಕಾರ್ಯಕ್ರಮ ಎಂಬೂದನ್ನು ನೆನೆದುಕೊಳ್ಳುತ್ತಿದ್ದೇನೆ.
ತನ್ನ ಮನೆ ಮಂಗಳೂರಿಗೆ ಸ್ಥಳಾಂತರವಾಗಿದ್ದರೂ ಬನ್ನೂರು ಹಾಗೂ ನಮ್ಮೊಂದಿಗಿನ ಸಂಪರ್ಕ ಕಡಿಮೆಯಾಗಿರಲಿಲ್ಲ.
ವರ್ಷಗಳ ಇತಿಹಾಸವಿರುವ ನಮ್ಮ ಗೆಳೆತನಕ್ಕೆ ಒಂದು ತಿಂಗಳ ಹಿಂದೆ ಆಘಾತವೊಂದು ಬಂದೊದಗಿತು.

ಇನ್ನಾಲಿಲ್ಲಾಹ್..!! ಸಿರಾಜ್ ಅಪಘಾತ ಸಂಭವಿಸಿ ಮಂಗಳೂರಿನ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿದ್ದಾನೆ ಎನ್ನುವ ಸುದ್ದಿ. ಈ ಸುದ್ದಿ ಕೇಳುತ್ತಿದ್ದಂತೆ ಆಘಾತಗೊಂಡ ಸ್ನೇಹಿತ ವರ್ಗಕ್ಕೆ ಅದು ಅರಗಿಸಿಕೊಳ್ಳಲಾಗದ ಕಹಿ ಸತ್ಯವಾಗಿತ್ತು.
ಆದರೆ ಅಲ್ಲಾಹನ ತೀರ್ಪು ಅದಾಗಿತ್ತು. ಅಂದು ಕೋಮಾ ಸ್ಥಿತಿಗೆ ಹೋದ ಸಿರಾಜ್ ಮತ್ತೆ ಮಾತನಾಡಿಯೇ ಇಲ್ಲ. ಅಪಘಾತ ಸಂಭವಿಸುವ ಕೆಲ ದಿನಗಳ ಹಿಂದೆಯಷ್ಟೇ ನಮ್ಮನ್ನು ಭೇಟಿಯಾಗಿ ಮಾತುಕತೆ ನಡೆಸಿ ನಗು-ನಗುತ್ತಾ ಪರಸ್ಪರ ಸಂತೋಷ ಹಂಚಿಕೊಂಡ ಜೀವವು ಸ್ಥಬ್ಧವಾಗಿ ಮಲಗಿರೂದನ್ನು ಕಂಡಾಗ ನಿಸ್ಸಹಾಯಿಗಳಾಗಿ ನಿಲ್ಲಬೇಕಾಗಿ ಬಂತು.
ಗೆಳೆಯನ ಈ ಶೋಚನೀಯ ಸ್ಥಿತಿಯನ್ನು ಕಂಡು ಮಿಡಿಯುವ ಹೃದಯದೊಂದಿಗೆ, ಅಲ್ಲಾಹನ ಮೇಲಿನ ಭರವಸೆಯಲ್ಲಿ , ಸಿರಾಜ್ ಸಹಜ ಸ್ಥಿತಿಗೆ ಮರಳಬೇಕೆನ್ನುವ ಆಸೆಯಿಂದ 40 ದಿನಗಳ ಕಾಲ ಸ್ವಲಾತ್ ಹೇಳಿ ಕಣ್ಣೀರು ಹಾಕಿ ಅಲ್ಲಾಹನಲ್ಲಿ ಪ್ರಾರ್ಥಿಸಿದ ಸ್ನೇಹಿತ ವರ್ಗಕ್ಕೆ ರಮಲಾನ್ 15 ಕರಾಳ ದಿನವಾಗಿತ್ತು. ಸಿರಾಜ್ ಇಹಲೋಕ ತ್ಯಜಿಸಿದ ಅನ್ನುವ ಸುದ್ದಿ ಕೇಳಿ ಬಂದಿತು. ಕಣ್ಣುಗಳು ತುಂಬಿ ಬಂದವು.

ಇನ್ನಾಲಿಲ್ಲಾಹ್..!!
ಅರಗಿಸಿಕೊಳ್ಳಲಾಗದ ಮನಸ್ಸಿನೊಂದಿಗೆ ಆಸ್ಪತ್ರೆಗೆ ಭೇಟಿನೀಡಿ ನಮ್ಮ ಹೃದಯದ ಮಿಡಿತವಾಗಿದ್ದ ಸಿರಾಜ್ ನ ಮಯ್ಯಿತ್ ದರ್ಶಿಸಿದೆವು.

ಯಾ ಅಲ್ಲಾಹ್..!!
ತಡೆದುಕೊಳ್ಳಲಾಗದ ದುಃಖದೊಂದಿಗೆ
ನಮ್ಮ ವಾಟ್ಸಾಪ್ ಗ್ರೂಪ್ಗಳಲ್ಲಿ ವಿಷಯ ಹಂಚಿದಾಗ ಅಲ್-ಹಂದುಲಿಲ್ಲಾಹ್ ತಹ್ಲೀಲ್, ಖತಮುಲ್ ಕುರಾನ್ ಗಳ ಮಹಾಪೂರವೇ ಹರಿದು ಬರಲು ಪ್ರಾರಂಭವಾದವು.
ಸಿರಾಜ್ ನ ಮಯ್ಯಿತ್ ಬನ್ನೂರು ತಲುಪುವ ಮೊದಲೇ ಬಹಳಷ್ಟು ತಹ್ಲೀಲ್ ಖತಮುಲ್ ಕುರಾನ್ ಗಳು ಆತನ ಖಾತೆ ಸೇರಿತ್ತು. ಬನ್ನೂರು ಪರಿಸರ ಜನಜಂಗುಳಿಯಿಂದ ಕೂಡಿತ್ತು.
8ಗಂಟೆ ಸುಮಾರಿಗೆ ಮಯ್ಯಿತ್ ಬನ್ನೂರು ತಲುಪಿದಾಗ ಎಲ್ಲರೂ ಸಾಲಾಗಿ ಹೋಗಿ ಮಯ್ಯಿತ್ ದರ್ಶಿಸಿದರು. ದರ್ಶಿಸಿದ ಬಹುತೇಕ ಜನರ ಬಾಯಲ್ಲೂ ಒಳ್ಳೆಯ ಅಭಿಪ್ರಾಯಗಳು ಕೇಳವಾಗ ಮನಸ್ಸಿಗೇನೊ ತೃಪ್ತಿ.
ತರಾವೀಹ್ ನಮಾಝಿನ ಕೊನೆಯ ಗಳಿಗೆಯಲ್ಲಿ ಮಯ್ಯಿತ್ ಮಸ್ಜಿದ್ ತಲುಪಿದಾಗ ಸುಬುಹಾನಲ್ಲಾಹ್..!!
ಮಸೀದಿ ಜನರಿಂದ ತುಂಬಿ ತುಳುಕುತ್ತಿತ್ತು.
ನಿಜವಾಗಿಯೂ ಸಿರಾಜ್ ಒಬ್ಬ ಭಾಗ್ಯಶಾಲಿಯೇ ಸರಿ ಎಂದು ಕೆಲವರು ಗುಣುಗುತ್ತಿದ್ದರು.ರಮಲಾನಿನ ಪುಣ್ಯ ರಾತ್ರಿಯಲಿ ಜನರಿಂದ ತುಂಬಿಕೊಂಡ್ಡಿದ್ದ ಮಸ್ಜಿದ್ ನ ಒಳಬಾಗದಲ್ಲಿ ಸಿರಾಜ್ ನ ಮಯ್ಯಿತ್ ನಮಾಝ್ ನೆರವೇರಿತು.

ಊರಿನ ಹಿರಿಯರು, ಕುಟುಂಬಸ್ಥರು, ಸ್ನೇಹಿತರು ಪಾಲ್ಗೊಂಡಿದ್ದ ದಫನ್ ಕಾರ್ಯದಲ್ಲಿ ಬಹುತೇಕ ಜನರ ಕಣ್ಣಿನಲ್ಲಿ ಕಣ್ಣೀರು ತುಂಬಿ ಬರುತ್ತಿತ್ತು. ದಫನ್ ಕಾರ್ಯ ಮುಗಿದು ಎಲ್ಲರೂ ಹಿಂದಿರುಗಿದಾಗ,
ಆತನ ಸ್ನೇಹಿತರು ಅಲ್ಲಿಂದ ಕದಲಲಿಲ್ಲ!. ನೊಂದ ಮನಸ್ಸಿನೊಂದಿಗೆ ಒಂದು ಖತಮ್ ಕುರಾನ್ ತಮ್ಮ ಆಪ್ತಮಿತ್ರನಿಗೆ ಸಮರ್ಪಿಸಿ ಕಣ್ಣೀರಿನೊಂದಿಗೆ ಸಿರಾಜ್ ನ ಪರಲೋಕ ಮೋಕ್ಷಕ್ಕಾಗಿ ದುಆ ಮಾಡಿದರು. ತಹ್ಲೀಲ್ ಸಮರ್ಪಿಸಿದರು.

ಈ ಯೌವ್ವನ ಸಮಯದಲ್ಲೇ ನಮ್ಮನ್ನು ಬಿಟ್ಟು ಯಾತ್ರೆಯಾದ ಸಿರಾಜ್ ನಿಗೆ ನಿಮ್ಮೆಲ್ಲರ ದುಆ ಸದಾ ಇರಲಿ. ಆತನ ಕುಟುಂಬಕ್ಕೆ ಅಲ್ಲಾಹು ಕ್ಷಮೆ ಕರುಣಿಸಲಿ
ಸಿರಾಜ್ ನೊಂದಿಗೆ ಅಲ್ಲಾಹನು ನಮ್ಮನ್ನೂ ಜನ್ನಾತಿನಲ್ಲಿ ಒಗ್ಗೂಡಿಸಲಿ – ಆಮೀನ್.

– ಮುಹಮ್ಮದ್ ಝುಬೈರ್

error: Content is protected !! Not allowed copy content from janadhvani.com