janadhvani

Kannada Online News Paper

2014ರ ಫಲಿತಾಂಶದ ದಾಖಲೆಯನ್ನು ಮುರಿದು ಮತ್ತೆ ಎನ್ಡಿಎ ಅಧಿಕಾರಕ್ಕೆ

ನವದೆಹಲಿ:ದೇಶದ 17ನೇ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಎನ್ಡಿಎ ಮೈತ್ರಿ ಕೂಟ ಪೂರ್ಣ ಬಹುಮತ ಪಡೆದು ವಿಜಯಪತಾಕೆ ಹಾರಿಸಿದೆ.

ದೇಶದಲ್ಲಿ ಮುಂದಿನ 5 ವರ್ಷ ಚೌಕಿದಾರ್ ಮೋದಿ ಮತ್ತೊಮ್ಮೆ ಅಧಿಕಾರ ನಡೆಸಲಿದ್ದಾರೆ. ಬಹುಮತಕ್ಕೆ 272 ಸೀಟ್ಗಳು ಬೇಕಾಗಿದ್ದು, ಈ ಬಾರಿ ಎನ್ಡಿಎ 350 ಸೀಟ್ಗಳನ್ನ ಗಳಿಸಿದೆ. ಅದರಲ್ಲಿ ಬಿಜೆಪಿಯೊಂದೇ 302 ಸೀಟ್ಗಳನ್ನ ಗೆದ್ದಿದೆ. ಈ ಮೂಲಕ ಎನ್ಡಿಎ ತನ್ನ 2014ರ ಫಲಿತಾಂಶದ ದಾಖಲೆಯನ್ನು ಮುರಿದಿದೆ.

2014ರಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಕೂಟ 336 ಸೀಟ್ಗಳನ್ನ ಗಳಿಸಿತ್ತು. ಅದರಲ್ಲಿ ಬಿಜೆಪಿಯೊಂದೇ 282 ಸೀಟ್ಗಳನ್ನ ತನ್ನದಾಗಿಸಿಕೊಂಡಿತ್ತು. ಇನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಒಟ್ಟಾರೆ 59 ಸೀಟ್ಗಳನ್ನ ಗೆದ್ದರೆ, ಅದರಲ್ಲಿ ಕಾಂಗ್ರೆಸ್ 44 ಸೀಟ್ಗಳನ್ನ ಗಳಿಸಿತ್ತು. 16ನೇ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ಖಾಲಿ ಉಳಿದಿತ್ತು. ಯಾಕಂದ್ರೆ ವಿರೋಧ ಪಕ್ಷ ಎಂದು ಪರಿಗಣಿಸಲು ಒಟ್ಟು ಸೀಟ್ಗಳಲ್ಲಿ(545) ಕನಿಷ್ಠ ಶೇ. 10 ರಷ್ಟು ಸೀಟ್ಗಳನ್ನ(55) ಆ ಪಕ್ಷ ಗಳಿಸಿರಬೇಕು. ಆದ್ರೆ ಕಾಂಗ್ರೆಸ್ ಕೇವಲ 44 ಸೀಟ್ಗಳನ್ನ ಮಾತ್ರ ಗಳಿಸಿತ್ತು. ಹೀಗಾಗಿ ಲೋಕಸಭೆಯ ಕಾಂಗ್ರೆಸ್ ನಾಯಕರನ್ನಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನ ಆಯ್ಕೆ ಮಾಡಲಾಗಿತ್ತು.

1984ರ ಚುನಾವಣೆ ನಂತರ ಮೊದಲ ಬಾರಿಗೆ 2014ರಲ್ಲಿ ಪಕ್ಷವೊಂದು ಸಂಪೂರ್ಣ ಬಹುಮತ ಪಡೆದು ದಾಖಲೆ ಬರೆದ ಕೀರ್ತಿ ಬಿಜೆಪಿಯದ್ದಾಗಿತ್ತು. ಅಂದ್ಹಾಗೆ ಇಂದಿರಾಗಾಂಧಿ ನಿಧನದ ನಂತರ 1984ರಲ್ಲಿ ಬಂದ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 514 ಸೀಟ್ಗಳಲ್ಲಿ ಬರೋಬ್ಬರಿ 404 ಸೀಟ್ಗಳನ್ನ ಗೆದ್ದು ಬೀಗಿತ್ತು. ಅಸ್ಸಾಂ ಹಾಗೂ ಪಂಜಾಬ್ ಚುನಾವಣೆ 1985ರವರೆಗೆ ವಿಳಂಬವಾಗಿತ್ತು. ನಂತರ ಅಲ್ಲಿ ನಡೆದ ಚುನಾವಣೆಯಲ್ಲೂ ಕಾಂಗ್ರೆಸ್ 10 ಸೀಟ್ಗಳನ್ನ ಗೆದ್ದು, ಒಟ್ಟು 414 ಸೀಟ್ಗಳನ್ನ ತನ್ನದಾಗಿಸಿಕೊಂಡಿತ್ತು. ಇನ್ನು ಎನ್.ಟಿ ರಾಮರಾವ್ ಅವರ ತೆಲುಗು ದೇಶಂ ಪಾರ್ಟಿ ಆಗ 30 ಸೀಟ್ಗಳನ್ನ ಗೆದ್ದು ಎರಡನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.