ದುಬೈ: ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿ ರಾಷ್ಟ್ರಕ್ಕಾದ ಆಘಾತಕ್ಕೆ ನಡುಕ ವ್ಯಕ್ತಪಡಿಸಿ ಶ್ರೀಲಂಕಾದ ಅಧ್ಯಕ್ಷರಾದ ಮೈತ್ರಿಪಾಲ ಸಿರಿಸೇನರಿಗೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಬರೆದ ಪತ್ರವನ್ನು ಯುಎಇ ಶ್ರೀಲಂಕನ್ ಎಂಬಸ್ಸಿಯಲ್ಲಿ ರಾಯಬಾರಿ ಅಹಮ್ಮದ್ ಎಲ್ಎಸ್ ಖಾನ್ ಅವರಿಗೆ ಹಸ್ತಾಂತರಿಸಲಾಯ್ತು.
ಶಾಂತ ವಾತಾವರಣದಲ್ಲಿ ಬದುಕುತ್ತಿದ್ದ ಜನ ಜೀವನಕ್ಕೆ ಕೊಡಲಿಯೇಟು ನೀಡುವ ಉದ್ದೇಶದಿಂದ ಭಯೋತ್ಪಾದಕರು ನಡೆಸಿದ ದಾಳಿಯ ವಾರ್ತೆ ತಿಳಿದಂದಿನಿಂದ ಅತ್ಯಂತ ಹತ್ತಿರದ ರಾಷ್ಟ್ರದ ಪ್ರಜೆ ಎಂಬ ನೆಲೆಯಲ್ಲಿ ಭಾರೀ ನೋವುಂಟಾಗಿದ್ದು, ಧಾರ್ಮಿಕ, ಸಾಂಸ್ಕೃತಿಕ ವೇದಿಕೆಗಳಲ್ಲಿ ಭಯೋತ್ಪಾದಕರ ವಿರುದ್ಧ ಧ್ವನಿ ಎತ್ತಿದ್ದೇನೆ ಹಾಗೂ ಸ್ಪೋಟದಲ್ಲಿ ಬಲಿಯಾದವರಿಗಾಗಿ ಪ್ರತ್ಯೇಕ ಪ್ರಾರ್ಥನಾ ಸಂಗಮವನ್ನು ಸಂಘಟಿಸೆದ್ದೇನೆ ಎಂದು ಗ್ರ್ಯಾಂಡ್ ಮುಪ್ತಿ ಪತ್ರದಲ್ಲಿ ತಿಳಿಸಿದ್ದಾರೆ.
ಭಯೋತ್ಪಾದಕರು ವಿಶ್ವಕ್ಕೇ ಬೆದರಿಕೆಯಾಗಿದ್ದಾರೆ, ಅವರು ದಯೆಗೆ ಅರ್ಹರಲ್ಲ, ಶ್ರೀಲಂಕಾದ ಕ್ರೈಸ್ತ ಧರ್ಮದ ಅನುಯಾಯಿಗಳನ್ನು ಹಾಗೂ ಪ್ರವಾಸಿಗಳನ್ನು ಗುರಿಯಾಗಿಸಿ ನಡೆಸಿದ ಆಕ್ರಮಣವು ಅತ್ಯಂತ ಖಂಡನೀಯವಾಗಿದೆ, ಸ್ಪೋಟದ ರುವಾರಿಗಳೆಲ್ಲರಿಗೂ ಅತ್ಯಂತ ಕಠಿಣವಾದ ಶಿಕ್ಷೆ ಲಭಿಸಬೇಕಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದರು.
ಸ್ಫೋಟದ ಹಿನ್ನಲೆಯಲ್ಲಿ ಕೆಲವಡೆ ಮುಸ್ಲಿಮರ ಮನೆ, ಮಸೀದಿ, ಧಾರ್ಮಿಕ ಕೇಂದ್ರ ಹಾಗೂ ವ್ಯಾಪಾರ ಕೇಂದ್ರಗಳನ್ನು ಗುರಿಯಾಗಿಸಿ ಸಂಕುಚಿತರ ನೇತೃತ್ವದಲ್ಲಿ ಗುಂಪು ದಾಳಿ ನಡೆಸಲಾಗುತ್ತಿದೆ ಎಂಬ ಕೆಲವು ದಿನಗಳಿಂದ ಕೇಳಿ ಬರುತ್ತಿರುವ ವಾರ್ತೆಯು ಭೀತಿಯನ್ನುಂಟು ಮಾಡಿದೆ, ರಾಷ್ಟ್ರದಲ್ಲಿ ಸಂಘರ್ಷವನ್ನು ಸೃಷ್ಟಿಸಲು ಮುಂದಾಗುವವರ ವಿರುದ್ಧ ಸರಕಾರವು ಕಠಿಣ ಕ್ರಮ ಕೈಗೊಳ್ಳಬೇಕಿದೆ, ಅಮಾಯಕರ ಪ್ರಾಣ, ಆಸ್ತಿಪಾಸ್ತಿಗೆ ಹಾನಿಯಾಗದಂತೆ ಸೂಕ್ತ ಭದ್ರತೆಯನ್ನು ಒದಗಿಸಬೇಕೆಂದು ಗ್ರ್ಯಾಂಡ್ ಮುಪ್ತಿ ಪತ್ರದಲ್ಲಿ ಆಗ್ರಹಿಸಿದರು.
ಇಂಡಿಯನ್ ಗ್ರ್ಯಾಂಡ್ ಮುಫ್ತಿಯ ಸಂದರ್ಶನ ಹಾಗೂ ಸಂದೇಶವು ಅತಿಯಾದ ಆಹ್ಲಾದವನ್ನುಂಟು ಮಾಡಿದೆ, ಶ್ರೀಲಂಕಾ ಸರ್ಕಾರವು ಪರಿಣಾಮಕಾರಿ ಮಧ್ಯಸ್ಥಿಕೆಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಶ್ರೀಲಂಕನ್ ಅಂಬಾಸಿಡರ್ ಅಹಮ್ಮದ್ ಎಲ್ಎಸ್ ಖಾನ್ ಹೇಳಿದರು.
ಗ್ರ್ಯಾಂಡ್ ಮುಫ್ತಿಯ ಪತ್ರವನ್ನು ಶೀಘ್ರದಲ್ಲೇ ಅಧ್ಯಕ್ಷರಿಗೆ ತಲುಪಿಸುತ್ತೇನೆ, ಭಯೋತ್ಪಾದಕರೊಂದಿಗೆ ನಂಟಿರುವ ಎಲ್ಲಾ ವ್ಯಕ್ತಿಗಳನ್ನು ಪತ್ತೆಹಚ್ಚಿ ರಾಷ್ಟ್ರದ ಭದ್ರತೆಯನ್ನು ಬಲಪಡಿಸುವ ಕಾರ್ಯವನ್ನು ಶ್ರೀಲಂಕಾ ಸರಕಾರ ಮಾಡುತ್ತಿದೆ, ಏತನ್ಮಧ್ಯೆ ಸಂಘರ್ಷವನ್ನುಂಟು ಮಾಡಲು ಯತ್ನಿಸುತ್ತಿರುವ ಗಲಭೆಕೋರರನ್ನು ಹತೋಟಿಗೆ ತರಲು ಸರಕಾರವು ಮುಂದಡಿಯಿಟ್ಟಿದೆ. ಮುಸ್ಲಿಮರನ್ನೂಳಗೊಂಡಂತೆ ಎಲ್ಲರಿಗೂ ಸುರಕ್ಷತೆಯನ್ನು ಏರ್ಪಡಿಸುವೆವು, ಜಾಮಿಯಾ ಮರ್ಕಝ್ ಹಾಗೂ ಗ್ರಾಂಡ್ ಮುಫ್ತಿಯ ಫತ್ವಾ ಬೋರ್ಡಿನ ಕಾರ್ಯಚಟುವಟಿಕೆಯನ್ನು ಶ್ರೀಲಂಕಾದಲ್ಲಿ ವ್ಯಾಪಕಗೊಳಿಸಲು ಸಹಕರಿಸುವೆವು ಎಂದು ಅಂಬಾಸಿಡರ್ ತಿಳಿಸಿದರು.
ಮೂಲ: dubaivartha.com
ಕನ್ನಡಕ್ಕೆ: ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ