janadhvani

Kannada Online News Paper

ರಮಝಾನಿನ ರಾತ್ರಿ ನಮಾಝ್ ‘ತರಾವೀಹ್’ 20 ರಕಅತ್ – ದುಬೈ ಗ್ರಾಂಡ್ ಮುಫ್ತಿ

ಈ ವರದಿಯ ಧ್ವನಿಯನ್ನು ಆಲಿಸಿ


ದುಬೈ: ರಮಝಾನಿನ ವಿಶೇಷ ರಾತ್ರಿ ನಮಾಝ್ ಆಗಿರುವ ತರಾವೀಹ್, ಇಪ್ಪತ್ತು ರಕ‌ಅತ್ ಎಂಬುದು ಪ್ರವಾದಿ ಶಿಷ್ಯರಾದ ಸ್ವಹಾಬತ್ ಮತ್ತು ಇಸ್ಲಾಮಿನ ಪ್ರಖ್ಯಾತ ನಾಲ್ಕು ಕರ್ಮಶಾಸ್ತ್ರ ಮದ್ಹಬ್‌ಗಳ ಮಾರ್ಗವಾಗಿದೆ ಎಂದು ದುಬೈ ಧಾರ್ಮಿಕ ಖಾತೆಯ ಗ್ರಾಂಡ್ ಮುಫ್ತಿ, ಪ್ರಮುಖ ಧಾರ್ಮಿಕ ಪಂಡಿತರೂ ಆದ ಡಾ. ಅಹ್ಮದ್ ಬಿನ್ ಅಬ್ದುಲ್ ಅಝೀಝ್ ಅಲ್ ಹದ್ದಾದ್ ಹೇಳಿದ್ದಾರೆ.

ದುಬೈಯಿಂದ ಪ್ರಕಟಗೊಳ್ಳುವ ‘ಇಮಾರತುಲ್ ಯೌಮ್’ ಅರೆಬಿಕ್ ಪತ್ರಿಕೆಗೆ ಅನುಮತಿಸಲಾದ ಕಾಲಂನಲ್ಲಿ ದುಬೈ ಗ್ರಾಂಡ್ ಮುಫ್ತಿ ತರಾವೀಹ್ ನ ರಕ‌ಅತ್‌ಗಳ ಸಂಖ್ಯೆಯನ್ನು ಬಹಿರಂಗ ಪಡಿಸಿದ್ದಾರೆ. ಈ ವಿಷಯದಲ್ಲಿ ಸ್ವಹಾಬೀಗಳು ನಿಗದಿಪಡಿಸಿರುವುದೇನೆಂದರೆ ತರಾವೀಹ್ ಇಪ್ಪತ್ತು ರಕ‌ಅತ್ ಮತ್ತು ನಂತರ ವಿತ್ರ್ ನಮಾಝ್ ಆಗಿದೆ. ಇಸ್ಲಾಮಿನ ಅಂಗೀಕೃತ ಮದ್ಹಬ್‌ಗಳಾದ ಹನಫೀ, ಶಾಫಿಈ, ಹಂಬಲೀಯ ಎಲ್ಲಾ ಪಂಡಿತರು ಮತ್ತು ಮಾಲಿಕೀ ಮದ್ಹಬ್‌ನ ಹೆಚ್ಚಿನ ಪಂಡಿತರು ಇದೇ ಅಭಿಪ್ರಾಯ ಹೊಂದಿದವರಾಗಿದ್ದಾರೆ ಎಂದ ಗ್ರಾಂಡ್ ಮುಫ್ತಿ, ಈ ವಿಷಯದಲ್ಲಿ ಮುಸ್ಲಿಮ್ ಪಂಡಿತ ವಲಯದ ಏಕೀಕೃತ (ಇಜ್ಮಾ‌ಅ್) ಅಭಿಪ್ರಾಯ ಇರುವುದಾಗಿ ಕೆಲವರು ಅಭಿಪ್ರಾಯ ಮಂಡಿಸಿರುವುದಾಗಿ ತನ್ನ ಕಾಲಂನಲ್ಲಿ ವ್ಯಕ್ತಪಡಿಸಿದ್ದಾರೆ.

ಇಮಾಮ್ ಮಾಲಿಕ್, ಬೈಹಕೀ ಮುಂತಾದವರ ಅಭಿಪ್ರಾಯದಂತೆ, ಎರಡನೇ ಖಲೀಫ ಉಮರ್ (ರ) ಅವರ ಆಡಳಿತಾವಧಿಯಲ್ಲಿ ಸ್ವಹಾಬೀ ವರ್ಯರಾದ ಉಬಯ್ಯ್ ಬಿನ್ ಕ‌ಅಬ್‌ರ ನಾಯಕತ್ವದಲ್ಲಿ ಮದೀನಾದ ಮಸೀದಿಯಲ್ಲಿ ನಿರ್ವಹಿಸಲಾಗುತ್ತಿದ್ದ ತರಾವೀಹ್ ನಮಾಝಿಗೆ ಇಪ್ಪತ್ತು ರಕ‌ಅತ್ ಇರುತ್ತಿದ್ದವು ಎನ್ನುವ ಹದೀಸ್ ಇದಕ್ಕೆ ಪೂರಕ ಆಧಾರವಾಗಿದೆ ಎಂದು ಡಾ.ಅಲ್ ಹದ್ದಾದ್ ಬೆಟ್ಟು ಮಾಡಿದ್ದಾರೆ. ಎರಡನೇ ಖಲೀಫಾ ಜಾರಿಗೆ ತಂದ ರೀತಿಯನ್ನು ಆ ಕಾಲದ ಯಾವುದೇ ಸ್ಬಹಾಬಿಗಳಾಗಲಿ, ನಂತರ ಬಂದ ಧಾರ್ಮಿಕ ಪಂಡಿತರಾಗಲಿ ಕಡೆಗಣಿಸದೆ ಅಂಗೀಕಾರ ನೀಡಿರುವರು ಎಂಬುದು ಇಸ್ಲಾಮಿನ ಬಲುದೊಡ್ಡ ಪುರಾವೆಯಾಗಿದೆ. ಉತ್ತರ ಅಥವಾ ದಕ್ಷಿಣದಲ್ಲೂ ಇದೇ ಮಾದರಿಯನ್ನು ಮುಂದುವರಿಸಲಾಗುತ್ತಿದೆ ಎಂದು ಅಹ್ಮದ್ ಅಲ್ ಹದ್ದಾದ್ ವ್ಯಕ್ತಪಡಿಸಿದ್ದಾರೆ.

ತರಾವೀಹ್ ‌ನ ರಕ‌ಅತ್ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದವರಿದ್ದಾರೆ. ಇಪ್ಪತ್ತಕ್ಕಿಂತ ಹೆಚ್ಚು ಅಥವಾ ಕಡಿಮೆ ಎನ್ನುವ ಅಭಿಪ್ರಾಯ ಹೊಂದಿದವರೂ ಇದ್ದಾರೆ. ಆದರೆ, ಎಂಟು ರಕ‌ಅತ್‌ಗಿಂತ ಹೆಚ್ಚಿನವು ಸುನ್ನತ್‌ಗೆ ವಿರುದ್ದ ಎನ್ನಲಾಗದು.

ರಮಝಾನ್ ಅಥವಾ ಇನ್ನಿತರ ರಾತ್ರಿ ನಮಾಝ್‌ಗಳಲ್ಲಿ ಪ್ರವಾದಿ ಅವರು ಹನ್ನೊಂದು ರಕ‌ಅತ್ ‌ಗಿಂತ ಹೆಚ್ಚು ನಿರ್ವಹಿಸಿಲ್ಲ ಎನ್ನುವ ಆಯಿಶಾ (ರ) ರಿಂದ ವರದಿಯಾದ ಹದೀಸ್ ತರಾವೀಹ್ ‌ಗೆ ಸಂಬಂಧಿಸಿದ್ದಲ್ಲ. ಅವರು ತರಾವೀಹ್ ಅನ್ನೇ ಪ್ರತಿಪಾದಿಸಿದ್ದರೆ ಸ್ವೀಕಾರಾರ್ಹವೂ, ಪ್ರಖ್ಯಾತವೂ ಆದ ಆ ಹದೀಸ್‌ನ ಆಶಯದ ವಿರುದ್ದ ಸ್ವಹಾಬಿಗಳು ವರ್ತಿಸುತ್ತಿರಲಿಲ್ಲ ಮಾತ್ರವಲ್ಲ ಇಮಾಮರುಗಳು ಏಕಾಭಿಪ್ರಾಯ ಹೊಂದುತ್ತಿರಲೂ ಇಲ್ಲ ಎಂದು ಗ್ರಾಂಡ್ ಮುಫ್ತಿ ಹೇಳಿದರು.

error: Content is protected !! Not allowed copy content from janadhvani.com