ದೋಹಾ: ಕತರ್‌ನ ಸಾರಿಗೆ ವಲಯದಲ್ಲಿ ಇತಿಹಾಸ ರಚಿಸುತ್ತಾ ದೋಹಾ ಮೆಟ್ರೋ ಓಡಾಟ ಆರಂಭಿಸಿದೆ. ಅಲ್ ಖಸ್ಸರ್‌ನಿಂದ ಅಲ್ ವಕ್ರ ವರೆಗೆ ಹದಿಮೂರು ನಿಲ್ದಾಣ ಗಳ ಮೂಲಕ ಪ್ರಥಮ ಹಂತದಲ್ಲಿ ಮೆಟ್ರೋ ಚಲಿಸಲಿದ್ದು, ಈ ನಿಲ್ದಾಣಗಳೆಲ್ಲವೂ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರುವುದು ದೊಹಾ ಮೆಟ್ರೋದ ವಿಶೇಷವಾಗಿದೆ.
ಬೆಳಗ್ಗೆ ಎಂಟು ಗಂಟೆಗೆ ಅಲ್ ಖಸ್ಸಾರ್‌ನಿಂದಲೂ ಎದುರು ದಿಸೆಯಲ್ಲಿ ವಕ್ರಾದಿಂದಲೂ ಏಕ ಸಮಯದಲ್ಲಿ ಓಡಾಟ ಪ್ರಾರಂಭಿಸುವ ಮೆಟ್ರೊ, ರೆಡ್ ಲೈನ್‌ನ ಹದಿಮೂರು ನಿಲ್ದಾಣಗಳನ್ನು ಹಾದು ಚಲಿಸಲಿದೆ.
ಈ ಎಲ್ಲಾ ನಿಲ್ದಾಣಗಳನ್ನು ಅತ್ಯಾಧುನಿಕ ಗುಣಮಟ್ಟದಲ್ಲಿ, ನವೀನ ಮಾದರಿಯಲ್ಲಿ ನಿರ್ಮಿಸಲಾಗಿದ್ದು, ಆ ಪೈಕಿ ಮುಶೈರಿಬ್ ನಿಲ್ದಾಣವು ಮಧ್ಯ ಏಷ್ಯಾದ ಅತೀ ದೊಡ್ಡ ರೈಲು ನಿಲ್ದಾಣವಾಗಿದ್ದು, ಜಗತ್ತಿನ ಏಳನೇ ಅತೀ ದೊಡ್ಡ ನಿಲ್ದಾಣವಾಗಿ ಗುರುತಿಸಿಕೊಂಡಿದೆ. ವಿವಿಧ ಮೂರು ಯಾತ್ರಾ ಕಾರ್ಡುಗಳನ್ನು ಬಳಸಿ ಈ ಮೆಟ್ರೊ ಮೂಲಕ ಯಾತ್ರೆ ಹೊರಡ ಬಹುದು.
ಎಲ್ಲಾ ನಿಲ್ದಾಣಗಳಲ್ಲೂ ಅಳವಡಿಸಲಾದ ವೆನ್ಡಿಂಗ್ ಯಂತ್ರದ ಮೂಲಕ ಲಭಿಸುವ ಲಿಮಿಟೆಡ್ ಕಾರ್ಡುಗಳ ಮೂಲಕ ಒಂದು ಯಾತ್ರೆ ಅಥವಾ ಒಂದು ದಿನದ ಯಾತ್ರೆ ಮಾಡಬಹುದಾಗಿದೆ. ಒಂದು ಯಾತ್ರೆಯ ಚೀಟಿಗೆ ಎರಡು ರಿಯಾಲ್ ಮತ್ತು ಒಂದು ದಿನದ ಯಾತ್ರೆಗೆ ಆರು ರಿಯಾಲ್ ಪಾವತಿಸಬೇಕಾಗಿದೆ.
ಐದು ವರ್ಷ ವಾಯಿದೆ ಇರುವ ಸ್ಟಾಂಡರ್ಡ್ ಟಾಪ್ ಅಪ್ ಕಾರ್ಡ್‌ಗಳನ್ನು ಅಲ್ಮೀರಾ, ಲುಲು, ಕಾರಿಫೋರ್ ಮಾಲ್‌ಗಳಲ್ಲಿ ಪಡೆಯಬಹುದಾಗಿದೆ. ಹತ್ತು ರಿಯಾಲ್ ಬೆಲೆ ಇರುವ ಈ ಕಾರ್ಡ್‌ಗಳ ಮೂಲಕ ಯಾತ್ರೆ ಮಾಡಲು ರೀಚಾರ್ಜ್ ಮಾಡ ಬೇಕು. ಒಂದು ಯಾತ್ರೆಗೆ ಎರಡು ರಿಯಾಲ್ ಮತ್ತು ದಿನ ಪೂರ್ತಿ ಯಾತ್ರೆಗೆ ಆರು ರಿಯಾಲ್ ರೀಚಾರ್ಜ್ ಮಾಡಬೇಕಾಗುತ್ತದೆ.
ಉನ್ನತ ಸೌಕರ್ಯಗಳನ್ನು ಹೊಂದಿರುವ ಗೋಲ್ಡ್ ಕೋಚ್‌ನಲ್ಲಿ ಯಾತ್ರೆ ಮಾಡಲು ನೂರು ರಿಯಾಲ್ ಮುಖ ಬೆಲೆಯ ಗೋಲ್ಡ್ ಕಾರ್ಡನ್ನು ಖರೀದಿಸಬೇಕು. ಪ್ರಥಮ ಹಂತದಲ್ಲಿ ರವಿವಾರದಿಂದ ಗುರುವಾರದ ವರೆಗೆ ಬೆಳಗ್ಗೆ ಎಂಟರಿಂದ ರಾತ್ರಿ ಹನ್ನೊಂದು ಗಂಟೆಯ ವರೆಗೆ ಓಡಾಟ ಲಭ್ಯವಿದೆ. ಐದು ವರ್ಷಕ್ಕಿಂದ ಮೇಲ್ಪಟ್ಟ ಎಲ್ಲರಿಗೂ ಯಾತ್ರಾ ಕಾರ್ಡ್ ಕಡ್ಡಾಯವಾಗಿದೆ. ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಉಚಿತವಾಗಿ ಯಾತ್ರೆ ಮಾಡಬಹುದಾಗಿದೆ.