ಮುಂಬೈ,ಮೇ 10: ರಾಜಧಾನಿ, ದುರೊಂತೋ ಮತ್ತು ಶತಾಬ್ಧಿಯಂತಹ ಪ್ರತಿಷ್ಠಿತ ರೈಲುಗಳಲ್ಲಿ ಮಹಿಳೆಯರು ಹಾಗೂ ಅಂಗವಿಕಲ ಪ್ರಯಾಣಿಕರಿಗೆ ‘ಹೆಚ್ಚುವರಿ ಬೋಗಿ’ ಮೀಸಲಿಡಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ, ಇಂತಹ ರೈಲುಗಳ ಓಡಾಟಕ್ಕಾಗಿ ಜರ್ಮನಿಯ ‘ಲಿಂಕ್ ಹಾಫ್‌ಮನ್ ಬಾಷ್’ (ಎಲ್‌ಎಚ್‌ಬಿ) ಕಂಪನಿ ತಯಾರಿಕೆಯ ಮೇಲ್ದರ್ಜೆಯ ಪವರ್ ಕಾರ್ (ಸುಧಾರಿತ ವಿದ್ಯುತ್ ಇಂಜಿನ್) ಹೊಂದಲು ಯೋಜಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ಪ್ರಸ್ತುತ ಏರ್ ಕಂಡೀಷನ್ ಸೌಲಭ್ಯ ಹೊಂದಿದ 2 ಇಂಜಿನ್ ಹಾಗೂ ಇಡೀ ರೈಲಿಗೆ ವಿದ್ಯುತ್ ಪೂರೈಕೆ ಸೌಲಭ್ಯ ಹೊಂದಿದ ಎಲ್‌ಎಚ್‌ಬಿ ರೈಲುಗಳು ಓಡುತ್ತಿವೆ. ಆದರೆ, ಸುಧಾರಿತ ವಿದ್ಯುತ್ ರೈಲಿಗೆ 2 ಇಂಜಿನ್‌ಗಳ ಬದಲು ಒಂದೇ ಇಂಜಿನ್ ಸಾಕು. ಇದರಿಂದಾಗಿ ಮತ್ತೊಂದು ಕೋಚ್‌ನ ಸ್ಥಳದಲ್ಲಿ ಮಹಿಳೆಯರು ಹಾಗೂ ಅಂಗವಿಕಲರಿಗೆ ಮೀಸಲಾದ ಬೋಗಿ ಅಳವಡಿಸಲಾಗುವುದು; ಪೂರ್ಣ ಏರ್ ಕಂಡೀಷನ್ ರೈಲಿಗೆ ಇಂತಹ ಒಂದು ಎ.ಸಿ. ರಹಿತ ಬೋಗಿ ಅಳವಡಿಸುವುದರಿಂದ ಆ ಬೋಗಿಯ ಪ್ರಯಾಣ ದರವೂ ಕಡಿಮೆಯಾಗಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಪ್ರಸ್ತುತ ‘ರಾಜಧಾನಿ, ದುರಂತೋ ಮತ್ತು ಶತಾಬ್ಧಿ’ ರೈಲುಗಳೆಲ್ಲವೂ ಎಲ್‌ಎಚ್‌ಬಿ ತಂತ್ರಜ್ಞಾನದ ರೈಲುಗಳೇ ಆಗಿವೆ. ಇವುಗಳಲ್ಲಿ 2 ಕೋಚ್‌ಗಳು ಇರುತ್ತವೆ. ಒಂದು ವೇಳೆ ಯಾವುದಾದರೂ ಕೋಚ್ ‘ಕೈಕೊಟ್ಟರೆ’ ಮತ್ತೊಂದನ್ನು ಬಳಸಿ ರೈಲು ಓಡಿಸಬಹುದೆಂಬ ಮುಂಜಾಗ್ರತೆಗಾಗಿ ಮಾತ್ರ 2ನೆಯದು ಇರುತ್ತದೆ. ಆದರೆ ಉದ್ದೇಶಿತ ಸುಧಾರಿತ ವಿದ್ಯುತ್ ಕೋಚ್‌ನಲ್ಲಿ ಮತ್ತೊಂದು ‘ಬೆಂಬಲಿತ ಸಿಸ್ಟಂ’ನ್ನು ಜತೆಗೇ ಅಳವಡಿಸಿರುವುದರಿಂದ ಮತ್ತೊಂದು ಕೋಚ್‌ನ ಅಗತ್ಯವಿರುವುದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಡಿಸಿವೆ.