ಬಿಜೆಪಿಗೆ ನಿರಾಸೆ: ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದ ಅತೃಪ್ತ ಶಾಸಕರು

ಒಂದು ಹಂತದಲ್ಲಿ ತಾರಕಕ್ಕೇರಿದ ಬಂಡಾಯಗಾರರ ಹೋರಾಟ ಅಷ್ಟೇ ವೇಗದಲ್ಲಿ ತಣ್ಣಗಾಗಿದೆ. ರಮೇಶ್‌ ಜಾರಕಿಹೊಳಿ ಜೊತೆ ಗುರುತಿಸಿಕೊಂಡಿದ್ದ ಮಹೇಶ್ ಕುಮಟಳ್ಳಿ ಈಗ ಉಲ್ಟಾ ಹೊಡೆದಿದ್ದಾರೆ. ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಅಂತಿದ್ದಾರೆ.

ಇಷ್ಟು ದಿನ ಮೈತ್ರಿ ಸರ್ಕಾರ ಕೆಡವೇ ಬಿಡ್ತೀವಿ ಅಂತ ಹಾರಾಡ್ತಿದ್ದ ಕಾಂಗ್ರೆಸ್‌ನ ಬಂಡಾಯಗಾರರು ಈಗ ಫುಲ್‌ ಸೈಲೆಂಟ್‌ ಆಗಿದ್ದಾರೆ. ಕಳೆದ 4-5 ದಿನಗಳಿಂದ ಬೆಂಗಳೂರಿನಲ್ಲಿದ್ದ ರಮೇಶ್ ಜಾರಕಿಹೊಳಿ ನಿನ್ನೆ ಬಂದ ದಾರಿಗೆ ಸುಂಕವಿಲ್ಲ ಅಂತ ಬೆಂಗಳೂರು ಬಿಟ್ಟು ಊರಿಗೆ ಹೋಗಿದ್ದಾರೆ. ಇದರ ಬೆನ್ನಲ್ಲೇ ಈಗ ಮತ್ತೊಬ್ಬ ಅತೃಪ್ತ ಶಾಸಕ ಉಲ್ಟಾ ಹೊಡೆದಿದ್ದಾರೆ.

ಅಥಣಿ ಶಾಸಕ ಮಹೇಶ್‌ ಕುಮಟಳ್ಳಿ. ರಮೇಶ್‌ ಜಾರಕಿಹೊಳಿ ಜೊತೆ ಸೇರಿಕೊಂಡು ಸರ್ಕಾರ ಕೆಡವಲು ಹೊರಟ್ಟಿದ್ದರು. ಆದ್ರೆ, ಈಗ ಯಾಕೋ ಉಲ್ಟಾ ಮಾತಾಡ್ತಿದ್ದಾರೆ. ರಮೇಶ್ ಜಾರಕಿಹೊಳಿ ಬಿಟ್ಟು ಡಿಕೆಶಿ ಕಡೆ ವಾಲಿದ್ದಾರೆ. ಕುಂದಗೋಳ ಕ್ಷೇತ್ರದ ಕಮಡೋಳ್ಳಿ ಗ್ರಾಮದಲ್ಲಿ ಡಿ.ಕೆ.ಶಿವಕುಮಾರ್ ಜೊತೆ ಪ್ರಚಾರ ನಡೆಸಿ, ಮೈತ್ರಿ ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ ಎಂದಿರೋದು ಬೇರೆಯದೇ ಮುನ್ಸೂಚನೆ ಕೊಟ್ಟಿದೆ.

ಪಕ್ಷ ಅಂದ್ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಸಹಜ ಎಂದಿರುವ ಅವರು, ನಾನು ಪಕ್ಷ ತೊರೆಯುವ ಮಾತೇ ಇಲ್ಲ ಅಂತ ಕಡ್ಡಿತುಂಡು ಮಾಡಿದಂತೆ ಹೇಳ್ತಿದ್ದಾರೆ. ಯಾರೂ ಪಕ್ಷ ಬಿಡಲ್ಲ. ರಮೇಶ್ ಜಾರಕಿಹೊಳಿ ಕೂಡ ಪಕ್ಷದಲ್ಲಿಯೇ ಇರುತ್ತಾರೆ ಅಂತ ಅಚ್ಚರಿ ಸ್ಟೇಟ್‌ಮೆಂಟ್‌ ಕೊಟ್ಟಿದ್ದಾರೆ ಕುಮಟಳ್ಳಿ.

ಬೆಂಗಳೂರಿನಲ್ಲಿ ಮಾತನಾಡಿರೋ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕೂಡ ಇದನ್ನೇ ಹೇಳಿದ್ದಾರೆ. ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಸುಭದ್ರವಾಗಿದೆ ಎಂದಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆ ನಡುವೆ ಇಂದು ವಿಧಾನಸೌಧದಲ್ಲಿ ದಿಢೀರ್‌ ಅಂತ ಪ್ರತ್ಯಕ್ಷವಾಗಿದ್ದಾರೆ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ. ಕಾಂಗ್ರೆಸ್‌ ಅತೃಪ್ತ ಶಾಸಕರ ಜೊತೆ ಇವರು ಕೂಡ ಗುರುತಿಸಿಕೊಂಡಿದ್ದರು. ಆದರೆ, ಕೆಲ ದಿನಗಳಿಂದ ರಮೇಶ್ ಜಾರಕಿಹೊಳಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಸಂಪುಟ ಸಭೆ ನಡೆಯುವ ಸಂದರ್ಭದಲ್ಲೇ ಶಕ್ತಿಸೌಧದಲ್ಲಿ ಕಾಣಿಸಿಕೊಂಡಿರೋದು ಮತ್ತೊಂದು ಬೆಳವಣಿಗೆ.

ಒಂದೆಡೆ ಮಹೇಶ್ ಕುಮಟಳ್ಳಿ ಪಥ ಬದಲಿಸಿರೋದು, ಮತ್ತೊಂದೆಡೆ ವಿಧಾನಸೌಧದಲ್ಲಿ ನಾಗೇಂದ್ರ ಪ್ರತ್ಯಕ್ಷವಾಗಿರೋದು ಆಪರೇಷ್‌ ಕಮಲ ಬಹುತೇಕ ವಿಫಲವಾಗೋ ಮುನ್ಸೂಚನೆ ಇರಬಹುದಾ..? ಎಂಬ ಪ್ರಶ್ನೆ ಹುಟ್ಟುಹಾಕಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!