janadhvani

Kannada Online News Paper

ದುಬೈ ಹೋಲಿ ಖುರ್ಆನ್ ಅವಾರ್ಡ್- ಇಂದು ಡಾ। ಅಬ್ದುಲ್ ರಶೀದ್ ಝೈನಿ ಉಪನ್ಯಾಸ

ಈ ವರದಿಯ ಧ್ವನಿಯನ್ನು ಆಲಿಸಿ


ದುಬೈ:ದುಬೈ ಇಪ್ಪತ್ತಮೂರನೇ ಅಂತರಾಷ್ಟ್ರೀಯ ಹೋಲಿ ಕುರ್ಆನ್ ಅವಾರ್ಡ್ ಪ್ರಯುಕ್ತ ನಡೆಸಲ್ಪಡುವ ರಂಝಾನ್ ಪ್ರಭಾಷಣ ಕಾರ್ಯಕ್ರಮದಲ್ಲಿ ದುಬೈ ಮರ್ಕಝು ಸ್ಸಖಾಫತುಲ್ ಇಸ್ಲಾಮಿಯ್ಯ ಪ್ರತಿನಿಧಿಯಾಗಿ ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯರಾದ ಎ.ಪಿ ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ ಮತ್ತು ಕರ್ನಾಟಕ ರಾಜ್ಯ ಎಸ್.ವೈ.ಎಸ್ ಪ್ರಧಾನ ಕಾರ್ಯದರ್ಶಿ ಡಾ। ಎಂ.ಎಸ್.ಎಂ ಅಬ್ದುಲ್ ರಶೀದ್ ಝೈನಿ ಕಕ್ಕಿಂಜೆ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮವು ಮೇ 10 ನೇ ಶುಕ್ರವಾರ ದುಬೈ ಊದ್ ಮೆಹ್ತಾ ರಸ್ತೆಯ ಅಲ್ ಜದ್ದಾಫ್ ನಲ್ಲಿರುವ ಅಲ್ ವಸಲ್ ಕ್ಲಬ್ ನಲ್ಲಿ ರಾತ್ರಿ ಒಂಭತ್ತು ಗಂಟೆಗೆ ನಡೆಯಲಿದೆ. ಕಳೆದ ವರ್ಷಗಳಂತೆ ಈ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ವಿಶ್ವಾಸಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕುರ್ಆನ್ ಅವತೀರ್ಣಗೊಳಿಸಿದ ಪವಿತ್ರ ರಂಝಾನಿನಲ್ಲಿ ಕುರ್ಆನಿನ ಸಂದೇಶವನ್ನು ಜನರಿಗೆ ತಲುಪಿಸಲು ಮತ್ತು ಕುರ್ಆನ್ ಅಧ್ಯಯನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ದುಬೈ ಸರಕಾರವು ಕಳೆದ ಇಪ್ಪತ್ತಮೂರು ವರ್ಷಗಳಿಂದ ಆಯೋಜಿಸುತ್ತಾ ಬಂದಿರುವ ಯೋಜನೆಗಳಲ್ಲಿ ಅತ್ಯಂತ ಮಹತ್ವಪೂರ್ಣವಾದ ಕಾರ್ಯಕ್ರಮವಾಗಿದೆ ಅಂತರಾಷ್ಟ್ರೀಯ ಹೋಲಿ ಕುರ್ಆನ್ ಅವಾರ್ಡ್. ಕೇರಳದಲ್ಲಿ ಅತ್ಯಂತ ಪ್ರಭಾವಿ ಪಂಡಿತರೂ, ಸುನ್ನೀ ಪ್ರಭಾಷಣ ರಂಗದಲ್ಲಿ ಅತ್ಯಂತ ಬೇಡಿಕೆಯಿರುವ ಪ್ರಭಾಷಕರಾಗಿದ್ದಾರೆ.

ಎ.ಪಿ ಮಹಮ್ಮದ್ ಮುಸ್ಲಿಯಾರ್ ಕಾಂತಪುರಂ. ಅಧ್ಯಯನ, ಭಾಷಣ, ಬರಹ, ದಅವಾ ಹಾಗೂ ಸಾಂತ್ವಾನ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿರುವ ಪ್ರಭಾಷಕರು ಬಹುಸಂಖ್ಯೆಯ ಶಿಷ್ಯಸಮೂಹವನ್ನೇ ಸಮುದಾಯಕ್ಕರ್ಪಿಸಿದ್ದಾರೆ.

ಕೇರಳ ಮತ್ತು ಕರ್ನಾಟಕದಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿರುವ ಡಾ। ಅಬ್ದುಲ್ ರಶೀದ್ ಝೈನಿ ಕಕ್ಕಿಂಜೆ ಹಲವಾರು ಪುಸ್ತಕಗಳ ಕರ್ತೃ ಮತ್ತು ಸಂಘಟನಾ ವಲಯದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಷನ್ ಅಂತರಾಷ್ಟ್ರೀಯ ಕೌನ್ಸಿಲ್ ನಲ್ಲಿ ಸಂಘಟನಾ ವಿಭಾಗದ ಅಧ್ಯಕ್ಷರಾಗಿದ್ದಾರೆ.

ಕರ್ನಾಟಕದ ಪ್ರತಿಷ್ಠಿತ ಸಂಸ್ಥೆ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಇದರ ಜನರಲ್ ಸೆಕ್ರೆಟರಿ ಆಗಿ ಸೇವೆಸಲ್ಲಿಸುತ್ತಿದ್ದಾರೆ. ಪ್ರಭಾವಿ ನಾಯಕರೂ, ಬರಹಗಾರರೂ, ಚಿಂತಕರೂ ಮೇಧಾವಿಯೂ ಆಗಿರುವ ಡಾ। ಅಬ್ದುಲ್ ರಶೀದ್ ಝೈನಿಯವರು ತನ್ನ ಅಗಾಧವಾದ ಪಾಂಡಿತ್ಯದ ಮೂಲಕ ಜನಮನಸ್ಸುಗಳನ್ನು ತನ್ನೆಡೆಗೆ ಸೆಳೆಯಬಲ್ಲ ಅಪ್ರತಿಮ ಬಹುಭಾಷಾ ಪ್ರಬಾಷಕರಾಗಿದ್ಧಾರೆ.

ರಂಝಾನ್ ಪ್ರಭಾಷಣ ಕಾರ್ಯಕ್ರಮವನ್ನು ಯಶಸ್ವೀಗೊಳಿಸಲು ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳು ಸಂಘಟಕರು ನಡೆಸುತ್ತಿದ್ದು ಮೀಡಿಯಾ ಮುಖಾಂತರ ಜನರನ್ನು ನೇರವಾಗಿ ಸಂಪರ್ಕಿಸಿ ಕಾರ್ಯಕ್ರಮಕ್ಕೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಪ್ರವಾಸಿ ಮಹಿಳೆಯರಿಗೆ ವಿಶೇಷ ಸ್ಥಳವಕಾಶವನ್ನು ಏರ್ಪಡಿಸಲಾಗಿದೆ. ವಿವಿಧ ಎಮಿರೇಟ್ಸ್ ಗಳಿಂದ ಬರುವ ವಿಶ್ವಾಸಿಗಳಿಗೆ ವಿಶೇಷ ಬಸ್ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ಕಾರ್ಯಾಕ್ರಮದ ಯಶಸ್ವಿಗಾಗಿ ಪ್ರತಿಯೊಬ್ಬ ಕನ್ನಡಿಗನೂ ಕೈಜೋಡಿಸಬೇಕೆಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ಯು.ಎ.ಇ ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದೆ.

ವಿ.ಸೂ: ದುಬೈ ಸೌತ್ & ನೊರ್ತ್, ಶಾರ್ಜಾ, ಅಜ್ಮಾನ್, ಅಲ್ ಐನ್, ಅಬುದಾಬಿಯಿಂದ ಬರುವವರಿಗೆ ಕೆ.ಸಿ.ಎಫ್ ವಿಶೇಷ ಬಸ್ ಸೌಕರ್ಯ ಏರ್ಪಡಿಸಿದೆ

error: Content is protected !! Not allowed copy content from janadhvani.com