janadhvani

Kannada Online News Paper

ಇಶ್ರತ್​ ಜಹಾನ್​ ನಕಲಿ ಎನ್​ಕೌಂಟರ್​:ಆರೋಪಿತ ಅಧಿಕಾರಿಗಳಿಗೆ ಕ್ಲೀನ್​ ಚಿಟ್​

ನವದೆಹಲಿ: ಇಶ್ರತ್​ ಜಹಾನ್​ ನಕಲಿ ಎನ್​ಕೌಂಟರ್​ ಪ್ರಕರಣ ಸಂಬಂಧ ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ ತೀರ್ಪು ನೀಡಿದ್ದು, ಪೊಲೀಸ್​ ಅಧಿಕಾರಿಗಳಾದ ಡಿಜಿ ವಂಜಾರಾ ಮತ್ತು ಎನ್​ಕೆ ಅಮಿನ್​ರನ್ನು ಖುಲಾಸೆಗೊಳಿಸಿದೆ. ಜತೆಗೆ ಅವರ ವಿರುದ್ಧ ಇದ್ದ ಎಲ್ಲಾ ಆರೋಪಗಳಿಂದ ದೋಷಮುಕ್ತ ಗೊಳಿಸಿದೆ. ಏಪ್ರಿಲ್​ 30ರಂದು ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತ್ತು.

ನಕಲಿ ಎನ್​ಕೌಂಟರ್​ ಆರೋಪದಡಿ ವಿಚಾರಣೆ ಎದುರಿಸುತ್ತಿದ್ದ ಮಾಜಿ ಪೊಲೀಸ್​ ಆಫೀಸರ್​ಗಳಾದ ಡಿ.ಜಿ.ವಂಜಾರಾ, ಎನ್​.ಕೆ.ಅಮಿನ್​ ಅವರು ಬಿಡುಗಡೆ ಕೋರಿ ಸಲ್ಲಿಸಿದ್ದ ಮನವಿಯನ್ನು ಈ ಹಿಂದೆ ಗುಜರಾತ್​ನ ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು.

2004ರಲ್ಲಿ ಅಹಮದಾಬಾದ್​ನಲ್ಲಿ ಇಶ್ರತ್​ ಜಹಾನ್​ ಸೇರಿ ನಾಲ್ವರನ್ನು ಪೊಲೀಸ್​ ಅಧಿಕಾರಿಗಳು ಕೊಲೆ ಮಾಡಿ ನಂತರ ಎನ್​ಕೌಂಟರ್ ಎಂಬಂತೆ ಬಿಂಬಿಸಿದ್ದರು ಎಂಬ ಗಂಭೀರ ಆರೋಪಕ್ಕೆ ಗುರಿಯಾಗಿದ್ದರು. ಅಲ್ಲದೆ, ಆ ನಾಲ್ವರಿಗೂ ಉಗ್ರರ ನಂಟು ಇದ್ದು ಆಗ ಗುಜರಾತ್​ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯನ್ನು ಕೊಲ್ಲಲು ಪ್ಲಾನ್ ಮಾಡಿದ್ದರಿಂದ ಎನ್​ಕೌಂಟರ್​ ಮಾಡಿದ್ದೇವೆ ಎಂದು ಹೇಳಿದ್ದರು. ಆದರೆ, ಇಶ್ರತ್​ ತಾಯಿ ವಂಜಾರಾ ಮತ್ತು ತಂಡದ ಈ ಆರೋಪವನ್ನು ಅಲ್ಲಗಳೆದಿದ್ದರು. ನಂತರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.

ಪೊಲೀಸ್​ ಅಧಿಕಾರಿಗಳಾದ ಡಿ.ಜಿ.ವಂಜಾರಾ, ಎನ್​.ಕೆ.ಅಮಿನ್​ ಹಾಗೂ ಪಿ.ಪಿ. ಪಾಂಡೆ ಅವರು ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದರು. ಪಿ.ಪಿ.ಪಾಂಡೆ ವಿರುದ್ಧ ಯಾವುದೇ ಸಾಕ್ಷಿ ಸಿಗದ ಕಾರಣ 2018ರ ಫೆಬ್ರವರಿಯಲ್ಲಿ ಅವರನ್ನು ಆರೋಪ ಮುಕ್ತಗೊಳಿಸಲಾಗಿತ್ತು. ಆದರೆ, ವಂಜಾರಾ, ಅಮೀನ್​ ವಿರುದ್ಧ ತನಿಖೆ ಜಾರಿಯಲ್ಲಿತ್ತು.

ಈ ಎನ್​ಕೌಂಟರ್​ ನಕಲಿಯಲ್ಲ. ನಮ್ಮ ವಿರುದ್ಧ ಸಿಬಿಐ ಕೋರ್ಟ್​ಗೆ ಸಲ್ಲಿಸಿದ ದಾಖಲೆಗಳು ಸುಳ್ಳು ಎಂದು ನಿವೃತ್ತ ಎಸ್​ಪಿ ಅಮಿನ್​ ಮನವಿಯಲ್ಲಿ ತಿಳಿಸಿದ್ದರು. ಅಲ್ಲದೆ, ನಿವೃತ್ತ ಡಿಜಿ ಪಿ.ಪಿ.ಪಾಂಡೆಯವರನ್ನು ಯಾವ ಆಧಾರದ ಮೇಲೆ ವಿಚಾರಣೆ ಮಕ್ತಗೊಳಿಸಿದ್ದಿರೋ ಅದೇ ರೀತಿ ನನ್ನನ್ನೂ ಬಿಡುಗಡೆ ಮಾಡಿ. ನಾನೂ ಅವರಂತೆ ಕಾರ್ಯ ನಿರ್ವಹಿಸಿದ್ದೇನೆ ಎಂದು ನಿವೃತ್ತ ಡೆಪ್ಯೂಟಿ ಐಜಿ ವಂಜಾರಾ ಮನವಿ ಸಲ್ಲಿಸಿದ್ದರು.

ಆದರೆ, ಇಶ್ರತ್​ ಜಹಾನ್​ ಅವರ ತಾಯಿ ಹಾಗೂ ಸಿಬಿಐ ಇವರಿಬ್ಬರ ಮನವಿಗೆ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಈ ಕೊಲೆ ನಡೆದಿದ್ದು ಪೊಲೀಸ್​ ಹಾಗೂ ಗಣ್ಯರ ಪಿತೂರಿಯಿಂದ. ಈ ಕೊಲೆಯಲ್ಲಿ ವಂಜಾರಾ ಅವರೇ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಜೆ.ಕೆ.ಪಾಂಡ್ಯಾ, ಪೊಲೀಸ್​ ಆಫಿಸರ್​ಗಳ ಮನವಿ ತಿರಸ್ಕರಿಸಿದ್ದರು. ಆದರೆ ಇದೀಗ ಎರಡೂ ಅಧಿಕಾರಿಗಳಿಗೆ ನ್ಯಾಯಾಲಯದಿಂದ ಕ್ಲೀನ್​ ಚಿಟ್​ ಸಿಕ್ಕಿದೆ.

error: Content is protected !! Not allowed copy content from janadhvani.com