janadhvani

Kannada Online News Paper

ಮೋದಿ ವಿರುದ್ಧ ಸ್ಪರ್ಧಿಸಲಿದ್ದ ತೇಜ್ ಬಹಾದೂರ್ ನಾಮಪತ್ರ ತಿರಸ್ಕೃತ

ವಾರಣಾಸಿ: ಪ್ರಧಾನಿ ಮೋದಿ ವಿರುದ್ಧ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಬಿಎಸ್​ಎಫ್​ ಯೋಧ ತೇಜ್ ಬಹಾದೂರ್​​ ಯಾದವ್​ ಸಲ್ಲಿಸಿದ್ದ ನಾಮಪತ್ರ ಅಮಾನ್ಯಗೊಂಡಿದೆ.

ಈ ಹಿಂದೆ ಉಮೇದುವಾರಿಕೆ ಸಲ್ಲಿಸುವಾಗ ನಾನು ಸರ್ಕಾರಿ ಉದ್ಯೋಗದಿಂದ ವಜಾಗೊಂಡಿದ್ದೇನೆ ಅಂತ ತೇಜ್ ಬಹಾದೂರ್​​ ಯಾದವ್ ನಮೂದಿಸಿದ್ದರು. ಆದ್ರೆ, ಎರಡನೇ ಬಾರಿ ನಾಮಪತ್ರ ಸಲ್ಲಿಸುವಾಗ ಈ ಮಾಹಿತಿಯನ್ನ ನೀಡದೆ ಹಾಗೆ ಬಿಟ್ಟಿದ್ದರು. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಮೇ 1ರಂದು ಬೆಳಗ್ಗೆ 11 ಗಂಟೆಯೊಳಗೆ ತಿಳಿಸಿ ಅಂತ ಚುನಾವಣಾ ಆಯೋಗ ತೇಜ್​ ಬಹಾದೂರ್​​​ಗೆ ನೋಟಿಸ್ ನೀಡಿತ್ತು. ಆದ್ರೆ ತೇಜ್ ಬಹಾದೂರ್ ಸಕಾಲದಲ್ಲಿ ನೋಟಿಸ್​​ಗೆ ಉತ್ತರ ನೀಡಿಲ್ಲ. ಹಾಗಾಗಿ ಚುನಾವಣಾ ಆಯೋಗ ಅವರ ನಾಮಪತ್ರವನ್ನು ಅಮಾನ್ಯಗೊಳಿಸಿದೆ. ಆದ್ರೆ, ತಮ್ಮ ನಾಮಪತ್ರ ತಿರಸ್ಕೃತಗೊಂಡಿರೋ ಹಿನ್ನೆಲೆ ತೇಜ್ ಬಹಾದೂರ್​​ ಸುಪ್ರೀಂ ಕೋರ್ಟ್​ ಮೆಟ್ಟಿಲೇರಲು ತೀರ್ಮಾನಿಸಿದ್ದಾರೆ. ಇನ್ನು, ಭ್ರಷ್ಟಾಚಾರ ಹಾಗೂ ಅಪ್ರಮಾಣಿಕತೆಯ ಆರೋಪದಡಿ ಕೆಲಸದಿಂದ ವಜಾಗೊಂಡಿರುವ ರಾಜ್ಯ ಅಥವಾ ಕೇಂದ್ರ ಸರ್ಕಾರದ ಉದ್ಯೋಗಿಗಳನ್ನ 5 ವರ್ಷಗಳ ಕಾಲ ಪ್ರಚಾರದಿಂದ ಅನರ್ಹಗೊಳಿಸಬಹುದು.

ಮೊದಲಿಗೆ ತೇಜ್​ ಬಹಾದೂರ್​ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ರು. ಆದ್ರೆ ಸಮಾಜವಾದಿ ಪಕ್ಷ ಕೊನೆ ಘಳಿಗೆಯಲ್ಲಿ ವಾರಣಾಸಿ ಕ್ಷೇತ್ರದ ತನ್ನ ಅಭ್ಯರ್ಥಿಯನ್ನು ಬದಲಾಯಿಸಿ ತೇಜ್​ ಬಹಾದೂರ್​ ಅವರಿಗೆ ಟಿಕೆಟ್​ ನೀಡಿತ್ತು.

ಅಂದಹಾಗೆ, ತೇಜ್​ ಬಹಾದೂರ್ 2017ರಲ್ಲಿ ಹಿಮಪ್ರದೇಶದಲ್ಲಿರುವ ಭಾರತೀಯ ಸೇನೆಯ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿದೆ ಅಂತ ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಯಬಿಟ್ಟಿದ್ದರು. ಈ ವಿಡಿಯೋ ಕೇಂದ್ರ ಸರ್ಕಾರಕ್ಕೆ ತೀವ್ರ ಮುಜುಗರವುಂಟು ಮಾಡಿತ್ತು. ನಂತರ ತೇಜ್​ ಯಾದವ್​​ರನ್ನ ಸುಳ್ಳು ಆರೋಪ ಹರಡಿದ ಹಿನ್ನೆಲೆ ಕರ್ತವ್ಯದಿಂದ ವಜಾ ಮಾಡಿ ಆದೇಶ ಹೊರಡಿಸಲಾಗಿತ್ತು

error: Content is protected !! Not allowed copy content from janadhvani.com