janadhvani

Kannada Online News Paper

ವಾರಾಣಸಿಯಿಂದ ಮೋದಿ ವಿರುದ್ಧ ಸ್ಪರ್ಧಿಸುವ ಯೋಧ ತೇಜ್‌ ಬಹದ್ಧೂರ್‌ ರಿಗೆ ನೋಟಿಸ್‌

ನವದೆಹಲಿ: ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಉತ್ತರ ಪ್ರದೇಶದ ವಾರಾಣಸಿಯಿಂದ ನರೇಂದ್ರ ಮೋದಿ ವಿರುದ್ಧ ಸ್ಪರ್ಧೆ ಮಾಡುತ್ತಿರುವ ಗಡಿ ಭದ್ರತಾ ಪಡೆಯ ಮಾಜಿ ಯೋಧ ತೇಜ್‌ ಬಹದ್ಧೂರ್‌ ಯಾದವ್‌ ಅವರಿಗೆ ಚುನಾವಣೆ ಆಯೋಗವು ನೋಟಿಸ್‌ ಜಾರಿ ಮಾಡಿದೆ.

‘ಕೇಂದ್ರ ಅಥವಾ ರಾಜ್ಯ ಸರ್ಕಾರದ ಉದ್ಯೋಗಿಯೊಬ್ಬ ಭ್ರಷ್ಟಾಚಾರ ಅಥವಾ ವಿಶ್ವಾಸದ್ರೋಹದ ಆರೋಪದಡಿಯಲ್ಲಿ ಸೇವೆಯಿಂದ ವಜಾಗೊಂಡಿದ್ದರೆ ಆತ ಚುನಾವಣಾ ಪ್ರಚಾರ ಕಾರ್ಯದಲ್ಲಿ ಐದು ವರ್ಷಗಳ ಕಾಲ ಭಾಗವಹಿಸುವಂತಿಲ್ಲ,’ ಎಂದು ಚುನಾವಣಾ ಆಯೋಗ ನೋಟಿಸ್‌ನಲ್ಲಿ ಉಲ್ಲೇಖಿಸಿದೆ. ಅಲ್ಲದೆ, ‘ಗಡಿ ಭದ್ರತಾ ಪಡೆ (ಬಿಎಸ್‌ಎಫ್‌)ನಿಂದ ನಿರಪೇಕ್ಷಣಾ ಪತ್ರ ತರುವಂತೆ ಸೂಚಿಸಲಾಗಿದ್ದು,  ನೋಟಿಸ್‌ಗೆ ಮೇ1ರ ಬೆಳಗ್ಗೆ 11ರ ಒಳಗಾಗಿ ಉತ್ತರಿಸಬೇಕು,’ ಎಂದು ಸೂಚಿಸಲಾಗಿದೆ. 

ಪಕ್ಷೇತರ ಅಭ್ಯರ್ಥಿಯಾಗಿ ಮೊದಲ ಬಾರಿಗೆ ನಾಮಪತ್ರ ಸಲ್ಲಿಸಿದ್ದ ವೇಳೆ ತೇಜ್‌ ಬಹುದ್ದೂರ್‌ ಅವರು ತಾವು ಬಿಎಸ್‌ಎಫ್‌ನಿಂದ ವಜಾಗೊಂಡಿರುವುದಾಗಿ ತಿಳಿಸಿದ್ದರು. ಆದರೆ, ಎರಡನೇ ಬಾರಿ ಮಹಾಘಟಬಂಧನದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ವೇಳೆ ಈ ಮಾಹಿತಿಯನ್ನು ಉಲ್ಲೇಖಿಸಿರಲಿಲ್ಲ. ಹೀಗಾಗಿ ಎರಡರ ನಡುವೆ ವ್ಯತ್ಯಾಸ ಕಂಡು ಬಂದಿದೆ. ಅವರು ಕೊಡುವ ಉತ್ತರದ ಆಧಾರದ ಮೇಲೆ ನಾಮಪತ್ರ ಅಂಗೀಕಾರ ಅಥವಾ ತಿರಸ್ಕಾರವನ್ನು ನಿರ್ಧಾರವಾಗಲಿದೆ. 

ಗಡಿ ಭದ್ರತಾ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತೇಜ್‌ ಬಹದ್ದೂರ್‌ ಯಾದವ್‌ ಅವರು, ಸರ್ಕಾರದಿಂದ ಸೈನಿಕರಿಗೆ ಪೂರೈಸಲಾಗುತ್ತಿರುವ ಕಳಪೆ ಗುಣಮಟ್ಟದ ಆಹಾರದ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು. ಇದೇ ಹಿನ್ನೆಲೆಯಲ್ಲಿ ಅವರನ್ನು 2017ರ ಏಪ್ರಿಲ್‌ನಲ್ಲಿ ಸೇವೆಯಿಂದ ವಜಾ ಮಾಡಲಾಗಿತ್ತು. 

error: Content is protected !! Not allowed copy content from janadhvani.com