janadhvani

Kannada Online News Paper

ನಿಗೂಢ ಹತ್ಯೆ ಪ್ರಕರಣ: ‘ನನ್ನ ಮಗಳು ಧೈರ್ಯವಂತೆ’ ವಿದ್ಯಾರ್ಥಿನಿಯ ಪಾಲಕರು

ರಾಯಚೂರು: ‘ನನ್ನ ಮಗಳು ಧೈರ್ಯವಂತೆ ಇದ್ದಳು. ಅವಳಿಗೆ ಕಿರುಕುಳ ಕೊಟ್ಟು, ಸಂಚು ರೂಪಿಸಿ ಕೊಲೆ ಮಾಡಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ಶಿಕ್ಷೆ ಕೊಡಿಸಬೇಕು’ ಎಂದು ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಪಾಲಕರು ಕಣ್ಣೀರು ಹಾಕಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೋಷಕರು, ‘ಇಂಟರ್ನಲ್‌ ಬರೆದು ಬರುತ್ತೇನೆ ಎಂದು ಏ.13 ರಂದು ಕಾಲೇಜಿಗೆ ಮಗಳು ಹೋದಳು. ಕೆಲ ಹೊತ್ತಿನ ಬಳಿಕ ಮನೆಯೊಳಗೆ ಒಬ್ಬ ಯುವಕ ದಿಢೀರ್ ಬಂದು ಹೋಗಿದ್ದರಿಂದ ಸಂಶಯ ಬಂತು. ಕೂಡಲೇ ಕಾಲೇಜಿಗೆ ತಂದೆ ನಾಗರಾಜ ಹೋಗಿ ಮಧುವಿಗಾಗಿ ಹುಡುಕಿದರೂ ಸಿಗಲಿಲ್ಲ. ಕೂಡಲೇ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದರೂ ಪಡೆದುಕೊಳಲಿಲ್ಲ. ಮಗಳು ಶವವಾಗಿ ಸಿಗುವವರೆಗೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ’ ಎಂದು ತಾಯಿ ಹೇಳಿದರು.

ಪೊಲೀಸರು ಬಂಧಿಸಿರುವ ಆರೋಪಿ ಸುದರ್ಶನ ಅವರ ಮಾವ ಆಂಜನೇಯ ಅದೇ ಪೊಲೀಸ್ ಠಾಣೆಯಲ್ಲಿದ್ದರು. ಅವರೇ ನಮಗೆ ಸಮಾಧಾನ ಹೇಳುತ್ತಾ ಬಂದು, ದೂರು ಪಡೆಯಲಿಲ್ಲ. ಶವ ಪತ್ತೆಯಾದ ದಿನದಂದು ಸೋಮವಾರ ಬೆಳಿಗ್ಗೆ ಪೊಲೀಸ್ ಆಂಜಿನೇಯ ಅವರು ಮಗಳು ಒಯ್ದಿದ್ದ ಸ್ಕೂಟಿ ಮತ್ತು ಮೊಬೈಲ್‌ ಅನ್ನು ತಂದು ಒಪ್ಪಿಸಿದರು. ಇದನ್ನು ಸುದರ್ಶನ ಕೊಟ್ಟಿದ್ದಾನೆ ಎಂದು ಹೇಳಿದ್ದರು’ ಎಂದರು.

ಪಾಲಕರ ಪ್ರಶ್ನೆಗಳು:

  • ಎಸ್ಸೆಸ್ಸೆಲ್ಸಿ ನಂತರ ಕನ್ನಡ ಬರೆಯವುದನ್ನೆ ಬಿಟ್ಟಿದ್ದ ಮಗಳು ಕನ್ನಡದಲ್ಲಿ ಡೆತ್ ನೋಟ್ ಹೇಗೆ ಬರೆಯಲು ಸಾಧ್ಯ?
  • ಅವಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅವಳ ಬಳಿಯಿದ್ದ ಸ್ಕೂಟರ್ ಮತ್ತು ಮೊಬೈಲ್ ಕಾಲೇಜಿನ ವಾಟರ್‌ಮನ್ ಸುದರ್ಶನ ಬಳಿ ಹೇಗೆ ಬಂದವು?
  • ಠಾಣೆಯಲ್ಲಿ ದೂರು ದಾಖಲಾಗದಂತೆ ಸುದರ್ಶನ ಮಾವ ಆಂಜೀನೆಯ ಸಂಚು ಮಾಡಿದ್ದರು. ಠಾಣೆ ದೂರು ಪಡೆದಿದ್ದರೆ ಮಗಳ ಸಾವು ತಪ್ಪಿಸಬಹುದಿತ್ತು?

ಮೃತ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮನೆಗೆ ಜನಶಕ್ತಿ ಮಹಿಳಾ ಸಂಘಟನೆ ಹಾಗೂ ಮದ್ಯಪಾನ ವಿರೋಧಿ ಹೋರಾಟದ ಮುಖಂಡರು ಭೇಟಿ ನೀಡಿದರು.ಇಂಥ ಹೀನ ಘಟನೆಗಳು ನಡೆಯಬಾರದು. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಕಠಿಣ ಶಿಕ್ಷೆ ಕಾನೂನು ರೂಪಿಸಬೇಕು ಎಂದರು. ಮಾಜಿ ನಕ್ಸಲ್ ನಾಯಕಿ ಮಲ್ಲಿಕಾ ಇದ್ದರು.

error: Content is protected !! Not allowed copy content from janadhvani.com