janadhvani

Kannada Online News Paper

23 ರಂದು ರಾಜ್ಯದ 2ನೇ ಹಂತದ ಚುನಾವಣೆ – ನಾಳೆ ಬಹಿರಂಗ ಪ್ರಚಾರಕ್ಕೆ ತೆರೆ

ಬೆಂಗಳೂರು, ಏ.20:- ಕಳೆದ 18 ರಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಡೆದ ಮೊದಲಹಂತದ ಚುನಾವಣೆಯ ಸೋಲು-ಗೆಲುವು ಕುರಿತಂತೆ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ತಮ್ಮ ತಮ್ಮ ಲೆಕ್ಕಾಚಾರದಲ್ಲಿ ತೊಡಗಿರುವುದು ಒಂದೆಡೆಯಾದರೇ, ಮತ್ತೊಂದೆಡೆ 2ನೇ ಹಂತದಲ್ಲಿ ಇದೇ 23 ರಂದು ನಡೆಯಲಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರ ತಾರಕಕ್ಕೇರಿದ್ದು, ನಾಳೆ ಈ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.

ಬಿರು ಬಿಸಿಲಿನ ನಾಡಿನ ವ್ಯಾಪ್ತಿಗೊಳಪಡುವ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಒಟ್ಟು 237 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರ ರಾಜಕೀಯ ಭವಿಷ್ಯಕ್ಕೆ ಮತದಾರರು ಹೊಸ ಭಾಷ್ಯವನ್ನು ಬರೆಯಲಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಈ ಕ್ಷೇತ್ರಗಳ ಪ್ರದಕ್ಷಿಣೆ ಹಾಕುವ ಮೂಲಕ ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಮತದಾರರ ಮನವೊಲಿಸಿಕೊಳ್ಳಲು ಸರ್ವ ರೀತಿಯ ಕಸರತ್ತಿನಲ್ಲಿ ತೊಡಗಿದ್ದಾರೆ.

ಹಲವರ ಭವಿಷ್ಯ ನಿರ್ಧಾರ:ಈ ಹಂತದಲ್ಲಿ ಕೇಂದ್ರ ಸಚಿವರಾದ ರಮೇಶ್ ಜಿಗಜಿಣಗಿ, ಅನಂತ್ ಕುಮಾರ್ ಹೆಗಡೆ, ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪ ಹಾಗೂ ಬಿ.ಎಸ್ ಯಡಿಯೂರಪ್ಪ ಅವರ ಪುತ್ರರಾದ ಮಧು ಬಂಗಾರಪ್ಪ ಮತ್ತು ಬಿ.ವೈ ರಾಘವೇಂದ್ರ, ಹಾಲಿ ಸಂಸದರಾದ ಪ್ರಹ್ಲಾದ್ ಜೋಷಿ, ಕರಡಿ ಸಂಗಣ್ಣ, ಜಿ.ಎಂ. ಸಿದ್ದೇಶ್ವರ್, ಪ್ರಕಾಶ್ ಹುಕ್ಕೇರಿ, ಶಿವಕುಮಾರ್ ಉದಾಸಿ, ಗದ್ದಿಗೌಡರ್, ಬಿ.ವಿ ನಾಯಕ್ ಸೇರಿದಂತೆ ಹಲವರು ಕಣದಲ್ಲಿದ್ದು, ತಮ್ಮ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳಲು ಮತದಾರರ ಮನೆ ಬಾಗಿಲುಗಳಿಗೆ ಎಡತಾಕುತ್ತಿದ್ದಾರೆ.

23ರಂದು ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ಚುನಾವಣಾ ಅಖಾಡ ರಂಗೇರಿದ್ದು, ಈ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲ್ಬುರ್ಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಹಾಗೂ ಶಿವಮೊಗ್ಗ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಈ ಕ್ಷೇತ್ರಗಳಲ್ಲಿ 2 ಕೋಟಿ 43 ಲಕ್ಷಕ್ಕೂ ಅಧಿಕ ಮತದಾರರು ವಿವಿಧ ರಾಜಕೀಯ ಪಕ್ಷಗಳ ಹುರಿಯಾಳುಗಳ ಭವಿಷ್ಯವನ್ನು ಬರೆಯಲಿದ್ದಾರೆ. 14 ಕ್ಷೇತ್ರಗಳಲ್ಲಿ ಒಟ್ಟು 237 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ ಅತಿ ಹೆಚ್ಚು ಅಭ್ಯರ್ಥಿಗಳು ಬೆಳಗಾವಿಯಲ್ಲಿದ್ದರೆ, ಅತ್ಯಂತ ಕಡಿಮೆ ಸಂಖ್ಯೆಯ ಅಭ್ಯರ್ಥಿಗಳು ರಾಯಚೂರಿನ ಕಣದಲ್ಲಿದ್ದಾರೆ. ಈ ಕ್ಷೇತ್ರದಿಂದ 6 ಮಂದಿ ಸ್ಪರ್ಧಿಸಿದ್ದಾರೆ.

ಸುಸೂತ್ರ ಮತದಾನಕ್ಕಾಗಿ ಚುನಾವಣಾ ಆಯೋಗ 28 ಸಾವಿರದ 22 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಮತದಾನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

error: Content is protected !! Not allowed copy content from janadhvani.com