janadhvani

Kannada Online News Paper

ದೇಶದ ಎಲ್ಲಾ ಮಸೀದಿಗಳು ಒಂದೇ ವೇದಿಕೆಯಡಿ- ‘ಮಸ್ಜಿದ್ ಒನ್’ ಗೆ ಚಾಲನೆ

ಈ ವರದಿಯ ಧ್ವನಿಯನ್ನು ಆಲಿಸಿ


ಮಂಗಳೂರು, ಎ.19: ದೇಶದ ಎಲ್ಲಾ ಮಸೀದಿಗಳನ್ನು ಸಾಫ್ಟ್‌ವೇರ್ ಟೆಕ್ನಾಲಜಿಯ ಮೂಲಕ ಒಂದೇ ವೇದಿಕೆಯಡಿ ಒಗ್ಗೂಡಿಸುವ ನಿಟ್ಟಿನಲ್ಲಿ ಆರಂಭಿಸಲಾದ ‘ಮಸ್ಜಿದ್ ಒನ್’ ಮೂವ್‌ಮೆಂಟ್‌ಗೆ ನಗರದ ಖಾಸಗಿ ಹೊಟೇಲಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು.

ಮುಸ್ಲಿಮರ ಸಮಗ್ರ ಅಭಿವೃದ್ಧಿಯ ಗುರಿಯೊಂದಿಗೆ ಆಲ್ ಇಂಡಿಯಾ ಮುಸ್ಲಿಮ್ ಡೆವಲಪ್‌ಮೆಂಟ್ ಕೌನ್ಸಿಲ್‌ನ ಅಧೀನದಲ್ಲಿ ಈ ಯೋಜನೆ ಜಾರಿಯಾಗಲಿದೆ. ಈ ಸಂದರ್ಭ ಆಲ್ ಇಂಡಿಯಾ ಮುಸ್ಲಿಮ್ ಡೆವಲಪ್‌ಮೆಂಟ್ ಕೌನ್ಸಿಲ್‌ನ ದ.ಕ.ಜಿಲ್ಲಾ ಘಟಕದ ಸ್ಥಾಪನೆಯನ್ನೂ ಅಧಿಕೃತವಾಗಿ ಘೋಷಿಸಲಾಯಿತು.

ಮಸೀದಿ ಜಮಾಅತ್‌ ಮೂಲಕ ನಡೆಸುವ ಸಮೀಕ್ಷೆ ನಮೂನೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಮುಖ್ಯ ಅತಿಥಿ ಕೃಷ್ಣಾಪುರ ಖಾಝಿ ಇ.ಕೆ.ಇಬ್ರಾಹೀಂ ಮುಸ್ಲಿಯಾರ್ ಮಾತನಾಡಿ, ಮುಸ್ಲಿಮರ ಮಧ್ಯೆ ಪರಸ್ಪರ ಒಗ್ಗಟ್ಟು, ಸಹಬಾಳ್ವೆ ಅತ್ಯಗತ್ಯ. ಆದರೆ, ನಮ್ಮಲ್ಲಿಂದು ನೈಜ ಧಾರ್ಮಿಕತೆಯ ಕೊರತೆ ಇದೆ. ಹಣದ ವ್ಯಾಮೋಹ ಹೆಚ್ಚುತ್ತಿವೆ. ಇದರಿಂದ ನಾವು ಅಧಃಪತನಗೊಳ್ಳುತ್ತಿದ್ದೇವೆ. ಸಮುದಾಯದ ಧನಿಕರು ಅರ್ಹರಿಗೆ ಸಂಪತ್ತನ್ನು ವಿನಿಯೋಗಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದವರ ಕಣ್ಣೀರನ್ನು ಒರೆಸುವ ಕಾರ್ಯ ಮಾಡಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೌನ್ಸಿಲ್‌ನ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ, ಉದ್ಯಮಿ ಅಹ್ಮದ್ ಮೊಹಿಯುದ್ದೀನ್ ಮುಸ್ಲಿಮರಿಗೆ ಮಸೀದಿಯೇ ಸಂಸತ್ತು ಆಗಿದೆ. ಮಸೀದಿಯು ಕೇವಲ ನಮಾಝ್ ಮತ್ತಿತರ ಆರಾಧನೆ ಮಾಡುವ ಕೇಂದ್ರವಲ್ಲ. ಅದು ಮುಸ್ಲಿಮರ ಸಬಲೀಕರಣದ ಕೇಂದ್ರವೂ ಆಗಿದೆ. ಜಮಾಅತ್ ವ್ಯಾಪ್ತಿಯ ಸರ್ವರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಸಮಗ್ರ ಚಿತ್ರಣ ಮಸೀದಿಯ ಆಡಳಿತ ಸಮಿತಿ ಬಳಿ ಇರಬೇಕು. ಜಮಾತರ ಸಮಸ್ಯೆಗಳಿಗೆ ಸಕಾಲಕ್ಕೆ ಸ್ಪಂದಿಸಬೇಕಿದೆ. ಆಗ ಮಾತ್ರ ಸರ್ವರ ಅಭಿವೃದ್ಧಿ ಸಾಧ್ಯ ಎಂದರು.

ಡಾ. ಫಾಝಿಲ್ ರಝ್ವಿ ಕಾವಳಕಟ್ಟೆ ದುಆಗೈದರು. ಮೂಸಬ್ಬ ಬ್ಯಾರಿ ಜೋಕಟ್ಟೆ ಸ್ವಾಗತಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಕೌನ್ಸಿಲ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ಎನ್ ಮಾರ್ಕ್ ವಂದಿಸಿದರು.

ಕೌನ್ಸಿಲ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ‘ಮಸ್ಜಿದ್ ಒನ್’ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ‘ಭಾರತವನ್ನು ಮುಸ್ಲಿಮರು ಸುಮಾರು 800 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದಾರೆ. ಆದರೆ, ಮುಸ್ಲಿಮರ ಇಂದಿನ ಸ್ಥಿತಿಗತಿ ಶೋಚನೀಯವಾಗಿದೆ. ಈ ನಿಟ್ಟಿನಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ ಸದ್ಯ ಭಾರತದಲ್ಲಿ 18 ಕೋಟಿ ಮುಸ್ಲಿಮರಿದ್ದಾರೆ. ಆ ಪೈಕಿ 10.6 ಕೋಟಿ ಮುಸ್ಲಿಮರು ಸ್ಲಂಗಳಲ್ಲಿ ಜೀವಿಸುತ್ತಿದ್ದಾರೆ. ಅಲ್ಲದೆ ಉತ್ತರ ಭಾರತದಲ್ಲಿ ಶೇ.74.5 ಮತ್ತು ದಕ್ಷಿಣ ಭಾರತದಲ್ಲಿ ಶೇ.25.5ರಷ್ಟು ಮುಸ್ಲಿಮರು ವಾಸಿಸುತ್ತಿರುವುದು ಅಧ್ಯಯನದ ಮೂಲಕ ತಿಳಿಯಬಹುದಾಗಿದೆ. ಉತ್ತರ ಭಾರತದ ಮುಸ್ಲಿಮರಿಗಿಂತ ದಕ್ಷಿಣ ಭಾರತದ ಮುಸ್ಲಿಮರ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಉತ್ತಮವಾಗಿದೆ. ಅದಕ್ಕೆ ದಕ್ಷಿಣ ಭಾರತದ ಮುಸ್ಲಿಮರು ಶಿಕ್ಷಣದಲ್ಲಿ ಮುಂದುವರಿದಿರುವುದೇ ಕಾರಣವಾಗಿದೆ ಎಂದರು.

ಭಾರತದ ಮುಸ್ಲಿಮರ ಜನಸಂಖ್ಯೆಯ ಅನುಪಾತದ ಪ್ರಕಾರ ಐಎಎಸ್, ಐಪಿಎಸ್ ಪೈಕಿ ಶೇ.3, ರೈಲ್ವೆ ಇಲಾಖೆಯಲ್ಲಿ ಶೇ.4.5, ಪೊಲೀಸ್ ಇಲಾಖೆಯಲ್ಲಿ ಶೇ.6 ಇದ್ದರೆ, ಬಂಧಿಖಾನೆಗಳಲ್ಲಿ ಶೇ.20.9 ಮತ್ತು ಭಿಕ್ಷಾಟನೆಯಲ್ಲಿ ಶೇ.25ರಷ್ಟು ಮಂದಿ ಇದ್ದಾರೆ. ಇನ್ನು ಭವಿಷ್ಯದ ಹಿತದೃಷ್ಟಿಯಿಂದ 2.40 ಲಕ್ಷ ಎನ್‌ಜಿಒಗಳು, 2.27 ಲಕ್ಷ ಶಿಕ್ಷಣ ಸಂಸ್ಥೆಗಳು, 1.72 ಲಕ್ಷ ವೈದ್ಯರು, 22 ಲಕ್ಷ ಶಿಕ್ಷಕರು ಮತ್ತು ಶಿಕ್ಷಕೇತರರು, 36 ಸಾವಿರ ವಿಜ್ಞಾನಿ/ಸಂಶೋಧಕರ ಅಗತ್ಯವಿದೆ. ಅಷ್ಟೇ ಅಲ್ಲ 1 ಕೋಟಿ ಮನೆಗಳ ನಿರ್ಮಾಣ ಮಾಡಬೇಕಿದೆ. ಆವಾಗ ಮಾತ್ರ ಮುಸ್ಲಿಮರ ಅಭ್ಯದಯ ಸಾಧ್ಯವಿದೆ. ಇದಕ್ಕೆ ಸದ್ಯ 21 ಲಕ್ಷ ಕೋಟಿ ರೂ. ಅಗತ್ಯವಿದೆ. ಇದನ್ನು ಕೇವಲ 5-6 ವರ್ಷಗಳಲ್ಲಿ ಸಾಧಿಸದೇ ಹೋದರೆ ಮುಂದಿನ ದಿನಗಳಲ್ಲಿ ಮುಸ್ಲಿಮರ ಸ್ಥಿತಿ ದಲಿತರಿಗಿಂತಲೂ ಶೋಚನೀಯವಾಗಬಹುದು. ಒಮ್ಮೆ ಹೀನಾಯ ಸ್ಥಿತಿಗೆ ತಲುಪಿದರೆ ಮತ್ತೆ ಯಥಾಸ್ಥಿತಿಗೆ ತಲುಪಿಸಲು ಕನಿಷ್ಠ 500 ವರ್ಷಗಳೇ ಬೇಕಾದೀತು ಎಂದು ಮುಹಮ್ಮದ್ ಇಮ್ತಿಯಾಝ್ ಅಂಕಿ ಅಂಶಗಳ ಸಮೇತ ವಿವರಿಸಿದರು.

ಮುಸ್ಲಿಮರ ಸಬಲೀಕರಣಕ್ಕೆ ಮಸೀದಿಗಳೇ ಶಕ್ತಿ ಕೇಂದ್ರಗಳಾಗಬೇಕು. ಜಮಾಅತ್‌ನ ಆಡಳಿತ ಕಮಿಟಿಯು ಪ್ರತಿಯೊಂದು ಮನೆಯ ಸಮಗ್ರ ವಿವರವನ್ನು ಸಂಗ್ರಹಿಸಲು ಮುಂದಾಗಬೇಕು. ಅದಕ್ಕಾಗಿಯೇ ‘ಮಸ್ಜಿದ್ ಒನ್’ ಸ್ಥಾಪಿಸಲಾಗಿದೆ. ಆ ಮೂಲಕ ದೇಶದ ಎಲ್ಲಾ ಮಸೀದಿಗಳ ಮಧ್ಯೆ ಸಂವಹನ ಕಲ್ಪಿಸಲು ಸಾಧ್ಯವಿದೆ. ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಜಮಾಅತರು ಹಿಂದುಳಿದ ಜಮಾಅತ್‌ನವರಿಗೆ ಸಹಾಯ ಮಾಡುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬಹುದಾಗಿದೆ. ‘ಮಸ್ಜಿದ್ ಒನ್’ ಮೂಲಕ ಸರಕಾರದ 80ಕ್ಕೂ ಅಧಿಕ ಯೋಜನೆಗಳ ಮಾಹಿತಿ ಮತ್ತು ಸೌಲಭ್ಯಗಳನ್ನು ಅರ್ಹರಿಗೆ ನೀಡಬಹುದಾಗಿದೆ ಎಂದರು.

ಅದಲ್ಲದೆ ಪ್ರತಿಯೊಬ್ಬ ಮುಸ್ಲಿಮನಿಗೆ 18 ವರ್ಷ ತುಂಬಿದ ತಕ್ಷಣ ಮತದಾರರ ಗುರುತಿನ ಚೀಟಿ ಮಾಡಿಸಲು ಸೂಚನೆಯ ಸಂದೇಶವು ವೈಯಕ್ತಿಕವಾಗಿ ಮತ್ತು ಜಮಾಅತ್ ಕಮಿಟಿಗೂ ಬರಲಿದೆ. ಮೊಹಲ್ಲಾಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಬಹುದಾಗಿದೆ. ಸ್ವಚ್ಛ ಭಾರತ್‌ನಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಕನಿಷ್ಠ 10 ಲಕ್ಷ ನಾಯಕರನ್ನು ಸೃಷ್ಟಿಸಬಹುದಾಗಿದೆ. ಇನ್ನೂ ಅನೇಕ ಪ್ರಯೋಜನಗಳು ಇದರಿಂದ ಸಾಧ್ಯವಿದೆ. ಇದಕ್ಕೆ ಉಲೆಮಾ, ಉದ್ಯಮಿ, ರಾಜಕಾರಣಿ, ಸಂಘಟನೆಗಳ ಸಹಕಾರ ಅತ್ಯಗತ್ಯ ಎಂದ ಮುಹಮ್ಮದ್ ಇಮ್ತಿಯಾಝ್ ಪ್ರತಿಯೊಂದು ಜಮಾಅತ್ ಕಮಿಟಿಯವರು ಸ್ವತಃ ಕಂಪ್ಯೂಟರ್ ಹೊಂದಿ ಅಥವಾ ತಮ್ಮ ಮೊಬೈಲ್‌ನಲ್ಲಿ ‘ಮಸ್ಜಿದ್ ಒನ್’ನ ಆ್ಯಪ್ ಡೌನ್‌ಲೋಡ್ ಮಾಡಿ ಇದರ ಯಶಸ್ವಿಗೆ ಕಾರಣಕರ್ತರಾಗಬೇಕಿದೆ. ಮುಂದಿನ ದಿನಗಳಲ್ಲಿ ತಾಲೂಕು ಘಟಕಗಳನ್ನು ಸ್ಥಾಪಿಸಿ ಡಾಟಾ ಸಂಗ್ರಹಿಸಲು ಮತ್ತು ಆ ಮಾಹಿತಿಯನ್ನು ಅಪ್‌ಡೇಟ್ ಮಾಡಿಸಲು ಆಸಕ್ತರಿಗೆ ತರಬೇತಿ ನೀಡುವ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ ಎಂದರು.

error: Content is protected !! Not allowed copy content from janadhvani.com