janadhvani

Kannada Online News Paper

ನನ್ನ ಶಾಪದಿಂದ ಹೇಮಂತ್ ಕರ್ಕರೆ ಸತ್ತರು- ಬಾಂಬ್ ಸ್ಫೋಟದ ಆರೋಪಿ,ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ

ಭೂಪಾಲ್ (ಏ. 19): ಮಾಲೆಗಾಂವ್ ಬಾಂಬ್ ಸ್ಫೋಟದ ಆರೋಪಿ ಸಾಧ್ವಿ ಪ್ರಗ್ಯಾ ಠಾಕೂರ್ ಅವರನ್ನು ಬಿಜೆಪಿ ಭೂಪಾಲ್ನಿಂದ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಆಕೆ ನೀಡಿದ ಹೇಳಿಕೆಯೊಂದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಸ್ವತಃ ಬಿಜೆಪಿ ಪಕ್ಷದ ನಾಯಕರಿಗೂ ನುಂಗಲಾರದ ತುತ್ತಾಗಿದೆ.
26/11ರ ಮುಂಬೈ ಭಯೋತ್ಪಾದನಾ ದಾಳಿಯ ವೇಳೆ ಹುತಾತ್ಮರಾಗಿದ್ದ ಪೊಲೀಸ್ ಅಧಿಕಾರಿ ಹಾಗೂ ಮುಂಬೈ ಭಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ಸಾಯಲು ಸಾಧ್ವಿ ಪ್ರಗ್ಯಾ ನೀಡಿದ ಶಾಪವೇ ಕಾರಣ ಎಂದು ಹೇಳಿಕೆ ನೀಡುವ ಮೂಲಕ ಚುನಾವಣಾ ಪ್ರಚಾರದ ಮೊದಲ ದಿನವೇ ವಿವಾದಕ್ಕೀಡಾಗಿದ್ದಾರೆ.

1 ದಿನದ ಹಿಂದಷ್ಟೆ ಬಿಜೆಪಿ ಸಾಧ್ವಿ ಪ್ರಗ್ಯಾ ಠಾಕೂರ್ ಅವರನ್ನು ಭೂಪಾಲ್ನಲ್ಲಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಸುವ ಬಗ್ಗೆ ನಿರ್ಧರಿಸಿತ್ತು.

2008ರಲ್ಲಿ ಮಹಾರಾಷ್ಟ್ರದ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರಗ್ಯಾ ಠಾಕೂರ್ ಆರೋಪಿಯಾಗಿದ್ದರು. ಬಳಿಕ, ಅವರಿಗೆ ಜಾಮೀನು ಮಂಜೂರಾಗಿತ್ತು.ಹೇಮಂತ್ ಕರ್ಕರೆ ಪೊಲೀಸ್ ಅಧಿಕಾರಿಯಾಗಿದ್ದಾಗ ಹಿಂದೂ ಸಂಘಟನೆಯ ಹಲವು ಸದಸ್ಯರನ್ನು ಬಂಧಿಸಿದ್ದರು. ಮಾಲೆಗಾಂವ್ ಬಾಂಬ್ ಸ್ಫೋಟದಲ್ಲಿ ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿರಲಿಲ್ಲ. ಆದರೂ ನನ್ನನ್ನು ಬಂಧಿಸಿ ಹಿಂಸೆ ನೀಡಿದ್ದರು. ನನ್ನ ವಿರುದ್ಧ ಸಾಕ್ಷಿ ಕಲೆಹಾಕಿ ಶಿಕ್ಷೆ ಕೊಡಿಸುವುದಾಗಿ ಹೇಳಿದ್ದರು. ಆಗ ನಾನು ಅವರಿಗೆ ಶಾಪ ನೀಡಿದ್ದೆ. ಆ ಶಾಪ ಮತ್ತು ಅವರು ಮಾಡಿದ ಕರ್ಮದಿಂದಲೇ 2008ರ ನವೆಂಬರ್ 26ರಂದು ನಡೆದ ಮುಂಬೈ ದಾಳಿಯಲ್ಲಿ ಹೇಮಂತ್ ಕರ್ಕರೆ ಉಗ್ರರ ಗುಂಡೇಟಿಗೆ ಬಲಿಯಾಗಿ ಸಾವನ್ನಪ್ಪಿದರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಾಧ್ವಿ ಪ್ರಗ್ಯಾ ಅವರ ಹೇಳಿಕೆಗೆ ಐಪಿಎಸ್ ಅಸೋಸಿಯೇಷನ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದು, ಅಶೋಕಚಕ್ರ ಗೌರವಕ್ಕೆ ಪಾತ್ರರಾಗಿದ್ದ ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ ಭಯೋತ್ಪಾದಕರ ಜೊತೆಗೆ ಹೋರಾಡಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಅವರ ತ್ಯಾಗವನ್ನು ಅವಮಾನಿಸುವಂತಹ ಹೇಳಿಕೆ ನೀಡಿರುವ ಲೋಕಸಭಾ ಅಭ್ಯರ್ಥಿಯ ಧೋರಣೆಯನ್ನು ಪೊಲೀಸ್ ಅಧಿಕಾರಿಗಳಾದ ನಾವೆಲ್ಲರೂ ಖಂಡಿಸುತ್ತೇವೆ. ಅವರ ಬಲಿದಾನಕ್ಕೆ ಪ್ರತಿಯೊಬ್ಬರೂ ತಕ್ಕ ಗೌರವ ನೀಡಬೇಕೆಂದು ಬಯಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
2008ರಲ್ಲಿ ನಡೆದ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ 6 ಜನ ಸಾವನ್ನಪ್ಪಿದ್ದರು. 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಸಾಧ್ವಿ ಪ್ರಗ್ಯಾ ಅವರನ್ನು ಬಂಧಿಸಿದ್ದರು. ಸದ್ಯಕ್ಕೆ ಆಕೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ (ಯುಎಪಿಎ) ಅಡಿ ಸಾಧ್ವಿ ಪ್ರಗ್ಯಾ ಮೇಲೆ ಇನ್ನೂ ಕಣ್ಗಾವಲಿನಲ್ಲಿದ್ದಾರೆ.
ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ 2008ರ ನ. 26ರಂದು ಮೃತಪಟ್ಟಿದ್ದರು.

26/11ರಂದು ಭಯೋತ್ಪಾದಕರು ನಡೆಸಿದ್ದ ಗುಂಡಿನ ದಾಳಿಗೆ ಹೇಮಂತ್ ಬಲಿಯಾಗಿದ್ದರು. ಜತೆಗೆ ಎಸಿಪಿ ಅಶೋಕ್ ಕಾಮ್ಟೆ ಮತ್ತು ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಸಾಲ್ಸಕರ್ ಸಹ ಇದೇ ದಾಳಿಯಲ್ಲಿ ಮೃತಪಟ್ಟಿದ್ದರು.

error: Content is protected !! Not allowed copy content from janadhvani.com