ಹೊಸಪೇಟೆ: ‘ಸಾರ್ವತ್ರಿಕ ಚುನಾವಣೆಯಲ್ಲಿ ರಾಜಕೀಯ ಲಾಭ ಗಳಿಸುವ ಉದ್ದೇಶದಿಂದಲೇ ಬಿಜೆಪಿಯು ಪುಲ್ವಾಮ ದಾಳಿಯ ಸಂಚು ರೂಪಿಸಿತ್ತು. ಈ ಕುರಿತು ಸಮಗ್ರ ತನಿಖೆಯಾದರೆ ಸತ್ಯ ಹೊರಬರುತ್ತದೆ’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್.ಎಸ್. ಬಸವರಾಜ ಆಗ್ರಹಿಸಿದರು.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಒಂದೇ ಒಂದು ಜನಪರ ಕೆಲಸ ಮಾಡಿಲ್ಲ. ಚುನಾವಣೆಯಲ್ಲಿ ಅವರು ಸೋಲುವುದು ಖಚಿತವಾಗಿತ್ತು. ಅದನ್ನು ಅರಿತು ಪುಲ್ವಾಮ ದಾಳಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಿರ್ದಿಷ್ಟ ದಾಳಿಯ ಕಥೆ ಕಟ್ಟಿ, ಜನರನ್ನು ಭಾವನಾತ್ಮಕವಾಗಿ ಕಟ್ಟಿ ಹಾಕಿ ಮತ ಸೆಳೆಯಲು ಯೋಜನೆ ರೂಪಿಸಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.
‘ಉದ್ಯೋಗ ಸೃಷ್ಟಿಸುವುದರ ಬದಲು ನಿರುದ್ಯೋಗ ಸೃಷ್ಟಿಯಾಗಿದೆ. ಸರಕು ಮತ್ತು ಸೇವಾ ತೆರಿಗೆಯಿಂದ (ಜಿ.ಎಸ್.ಟಿ.) ಸಣ್ಣ ಉದ್ದಿಮೆಗಳು ಬಂದ್ ಆಗಿವೆ. ಅಲ್ಲಿನ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತಂದಿಲ್ಲ. ರೈತರು ಖರೀದಿಸುವ ಕೃಷಿ ಉತ್ಪನ್ನಗಳಿಗೆ ಸಬ್ಸಿಡಿ ಕೊಡುವ ಬದಲು, ರಾಸಾಯನಿಕ ಕಂಪನಿಗಳಿಗೆ ಸಬ್ಸಿಡಿ ಕೊಟ್ಟಿದ್ದಾರೆ. ಐದು ವರ್ಷ ಕಾರ್ಪೊರೇಟ್ ಜಗತ್ತಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಿರುವುದು ಮೋದಿಯವರ ಹೆಗ್ಗಳಿಕೆ. ಮತ್ತೆ ಮೋದಿ ಅಧಿಕಾರಕ್ಕೆ ಬಂದರೆ ಬಂಡವಾಳಶಾಹಿಗಳಿಗೆ ಮಣೆ ಹಾಕುವುದು ಬಿಟ್ಟರೆ ಬೇರೇನೂ ಕೆಲಸ ಮಾಡುವುದಿಲ್ಲ’ ಎಂದು ಟೀಕಿಸಿದರು.