ಚಾಮರಾಜನಗರ: ಯಾರು ಕೂಡ ಮೋದಿ ಹೆಸರು ಹೇಳಬೇಡಿ. ಮೋಸ್ಟ್ ಡೇಂಜರ್ ಮೋದಿ. ಮೋದಿ ಗೆದ್ದರೆ ಇನ್ನು ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯುವುದೇ ಅನುಮಾನ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಕೊಳ್ಳೇಗಾಲದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಮೋದಿ ಯುವಕರಿಗೆ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ, ನಮ್ಮ ಯುವಕರು ಉದ್ಯೋಗ ಕೇಳಿದರೆ ಪಕೋಡಾ ಮಾರಿ ಎಂದು ಹೇಳುತ್ತಾರೆ. ಸರ್ವಾಧಿಕಾರಿ ಆಗಲು ಮುಂದಾಗಿದ್ದಾರೆ ಮೋದಿ ಎಂದು ವಾಗ್ದಾಳಿ ನಡೆಸಿದರು.
ರೈತರ ಸಾಲಮನ್ನಾ ಮಾಡಿ ಅಂದ್ರೆ ಡಿ. 30 2019 ರಂದು ಯಡಿಯೂರಪ್ಪ ನಮ್ಮ ಹತ್ತಿರ ನೋಟ್ ಪ್ರಿಂಟ್ ಮಾಡೋ ಮಿಷನ್ ಇಲ್ಲ ಎಂದಿದ್ದರು. ಇಂತವರಿಗೆ ರೈತರು ವೋಟು ಹಾಕಬೇಕಾ? ಈ ಮಾತು ಸುಳ್ಳಾಗಿದ್ದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ. ನನ್ನ ಪಾರ್ಟಿಗೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.
ನಮ್ಮ ಪಕ್ಷದಲ್ಲಿ ಮೂರು ಜನ ಕುರುಬರಿಗೆ ಟಿಕೇಟ್ ಕೊಟ್ಟಿದ್ದೇವೆ. ಈಶ್ವರಪ್ಪ ದೊಡ್ಡ ಬಾಯಿ ಬಿಡುತ್ತಿಯಲ್ಲಾ ನಿನ್ನಿಂದ ಟಿಕೇಟ್ ಕೊಡಿಸೋಕೆ ಆಗಿಲ್ವಾ? ನೀನು ಲೀಡರ್ ಆಗೋಕೆ ಲಾಯಕ್ ಇಲ್ಲ ನಾಲಯಕ್ ? ಎಂದು ಶಾಸಕ ಈಶ್ವರಪ್ಪ ವಿರುದ್ಧ ಕಿಡಿಕಾರಿದರು.
ಈ ಚುನಾವಣೆ ಶ್ರೀನಿವಾಸ್ ಪ್ರಸಾದ್ ಹಾಗೂ ಧ್ರುವನಾರಯಣ್ ನಡುವೆ ನಡೆಯುತ್ತಿರುವ ಚುನಾವಣೆ ಅಲ್ಲ. ಸಂವಿಧಾನ ಉಳಿಸುವ ಮತ್ತು ಕೆಡಗುವವರ ನಡುವೆ ನಡೆಯುತ್ತಿದೆ. ಹೀಗಾಗಿ ಸಂವಿಧಾನ ಉಳಿಸಲು ಬಿಜೆಪಿಗೆ ಯಾರು ಮತ ಹಾಕಬೇಡಿ. ಹೀಗಾಗಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿ. ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಸಂವಿಧಾನ ಬದಲು ಮಾಡಲು ಮಗ್ಗಿ ಪುಸ್ತಕ ಅಲ್ಲ ಎಂದಿದ್ದಾರೆ. ಅವರ ಹೇಳಿಕೆಯನ್ನು ನಾನು ಒಪ್ಪಿಕೊಳ್ಳುತ್ತೇನೆ. ಅವರು ಕೂಡ ಇತ್ತೀಚೆಗೆ ಬಿಜೆಪಿಗೆ ಸೇರಿದ್ದಾರೆ. ಅವರು ಸೇರಿದ ಮೇಲೆ ಅವರ ಪಕ್ಷದ ಸಚಿವರು ಸಂವಿಧಾನ ಬದಲು ಮಾಡುತ್ತೇವೆ ಅಂದಿದ್ದಾರೆ. ಅನಂತಕುಮಾರ್ ಹೆಗ್ಡೆ ಹೇಳಿಕೆ ನೀಡಿದಾಗ ಎಲ್ಲಿಗೆ ಹೋಗಿದ್ದೆ? ಆಗ ತಾವು ಪ್ರತಿಭಟನೆ ಮಾಡಬೇಕಾಗಿತ್ತು ಅಲ್ವಾ ಮಿಸ್ಟರ್ ಶ್ರೀನಿವಾಸ್ ಪ್ರಸಾದ್ ಎಂದು ವಾಗ್ದಾಳಿ ನಡೆಸಿದರು.