ಖಾಂದ್ವಾ: ದೇಶದ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರು ಮತ್ತು ಇಂದಿರಾಗಾಂಧಿ ದೇಶದ ಸೇನೆಯನ್ನು ಕಟ್ಟಿದ್ದಾರೆ. ಅವರಿಬ್ಬರು ಸೇನೆಯನ್ನು ಕಟ್ಟಿದ್ದಾಗ ಮೋದಿಗೆ ಪ್ಯಾಂಟ್ ಕಟ್ಟಲು ಸಹ ಬರುತ್ತಿರಲಿಲ್ಲ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಲೇವಡಿ ಮಾಡಿದ್ದಾರೆ.
ಭ್ರಷ್ಟನಾಥ್ ಕಮಲ್ ನಾಥ್ ಎಂದು ಮೋದಿ ಹೇಳಿಕೆ ನೀಡಿದ್ದ ಬೆನ್ನಲ್ಲೇ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಹಿರಿಯ ಕಾಂಗ್ರೆಸ್ ಮುಖಂಡ ಕಮಲ್ ನಾಥ್ , ಬಿಜೆಪಿ ಕೇಂದ್ರದಲ್ಲಿ ಅಧಿಕಾರ ನಡೆಸಿದ ಸಂದರ್ಭದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಉಗ್ರರ ದಾಳಿಗಳು ನಡೆದಿವೆ ಎಂದು ಆರೋಪಿಸಿದ್ದಾರೆ.
ಮೋದಿ ದೇಶದ ಭದ್ರತೆ ಬಗ್ಗೆ ಮಾತನಾಡುತ್ತಾರೆ. ಐದು ವರ್ಷಗಳ ಹಿಂದೆ ದೇಶ ಸುರಕ್ಷಿತರ ಕೈಯಲ್ಲಿ ಇರಲಿಲ್ಲವೇ ? ಮೋದಿ ಎಂದು ಪ್ರಶ್ನಿಸಿದ್ದು, ಜವಹರ್ ಲಾಲು ನೆಹರು ಹಾಗೂ ಇಂದಿರಾ ಗಾಂಧಿ ಭೂ, ವಾಯು ಹಾಗೂ ನೌಕ ಸೇನೆಯನ್ನು ಕಟ್ಟಿದಾಗ ನೀವು ಪೈಜಾಮಾ, ಪ್ಯಾಂಟ್ ಕಟ್ಟಲು ಸಹ ಕಲಿತಿರಲಿಲ್ಲ ಅಂತಹವರು ನಿಮ್ಮ ಕೈಯಲ್ಲಿ ದೇಶ ಸುರಕ್ಷಿತವಾಗಿದೆ ಎಂದು ಹೇಳುತ್ತಿರಾ ಎಂದು ಕಿಡಿಕಾರಿದ್ದಾರೆ.
ಯಾರ ಆಡಳಿತದ ಕಾಲವಧಿಯಲ್ಲಿ ಹೆಚ್ಚಿನ ಸಂಖ್ಯೆಯ ದಾಳಿಗಳು ನಡೆದಿವೆ ? 2001ರಲ್ಲಿ ದೆಹಲಿಯಲ್ಲಿ ಸಂಸತ್ ಮೇಲೆ ಉಗ್ರರ ದಾಳಿ ನಡೆದಾಗ ಆಡಳಿತ ನಡೆಸುತ್ತಿದ್ದವರು ಯಾರು ? ಆಗ ಬಿಜೆಪಿ ಅಧಿಕಾರದಲ್ಲಿತ್ತು. ಬಿಜೆಪಿ ಆಡಳಿತಾವಧಿಯಲ್ಲಿಯೇ ಹೆಚ್ಚಿನ ಸಂಖ್ಯೆಯ ಉಗ್ರರ ದಾಳಿಗಳು ನಡೆದಿರುವ ಬಗ್ಗೆ ಅಂಕಿಅಂಶಗಳು ತೋರಿಸುತ್ತವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಯುವಕರಿಗೆ ಉದ್ಯೋಗ ನೀಡುವಲ್ಲಿ ಹಾಗೂ ವಿದೇಶದಲ್ಲಿರುವ ಕಪ್ಪು ಹಣ ತರುವಲ್ಲಿಯೂ ಮೋದಿ ವಿಫಲರಾಗಿದ್ದಾರೆ. ಅಚ್ಛೇ ದಿನ್ ಎಲ್ಲಿ ಬಂದಿದೆ ಎಂದು ಕಮಲ್ ನಾಥ್ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ.