ಚೌಕಿದಾರ ಚೋರ್ ಎನ್ನುವುದೇ ಸತ್ಯ- ರಾಹುಲ್ ಗಾಂಧಿ

ಕೋಲಾರ.ಏ‌.13.ದೇಶದ‌ ರಕ್ಷಣೆ ಮಾಡುವವರು ಸುಳ್ಳು‌ ಹೇಳುವುದಿಲ್ಲ.‌ ಸುಳ್ಳು ಹೇಳುವವರು ಚೌಕಿದಾರರೇ ಅಲ್ಲ. ಚೌಕಿದಾರ ಚೋರ್ ಎನ್ನುವುದೇ ನಿಜವಾದ ಸತ್ಯ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೋಲಾರದಲ್ಲಿಂದು ನಡೆದ ಕಾಂಗ್ರೆಸ್-ಜೆಡಿಎಸ್ ಪರಿವರ್ತನಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್‍ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದರೆ , ಬಿಜೆಪಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ. ಕೆಲವೇ ಕೆಲವು ವ್ಯಕ್ತಿಗಳಿಗಾಗಿ ದೇಶವನ್ನು ವಿಭಜಿಸುವ ಕಾರ್ಯಕ್ಕೆ ಬಿಜೆಪಿ ಮುಂದಾಗಿದೆ. ಈ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.

2014ರ ಚುನಾವಣೆ ವೇಳೆ ಸ್ವಿಸ್ ಬ್ಯಾಂಕಿನಿಂದ ಕಪ್ಪುಹಣ ತಂದು ದೇಶದ ಬಡವರ ಖಾತೆಗೆ 15 ಲಕ್ಷ ರೂ. ಜಮಾ ಮಾಡುವುದಾಗಿ ಹೇಳಿದ್ದರು, ಯುವಕರಿಗೆ 10 ಕೋಟಿ ಉದ್ಯೋಗ ಸೃಷ್ಟಿ, ರೈತರ ಸಾಲಮನ್ನಾ ವಾಗ್ದಾನವನ್ನು ಜನರ ಮುಂದೆ ಇಟ್ಟು ಬಿಜೆಪಿ ಚುನಾವಣೆ ಎದುರಿಸಿದೆ. ಆದರೆ ಚುನಾವಣೆ ಬಳಿಕ 15 ಲಕ್ಷ ರೂ. ಬಡವರ ಖಾತೆಗೆ ಜಮಾ ಮಾಡುವ ಮಾತು ಚುನಾವಣೆಗಾಗಿ ಮಾತ್ರ ಆಡಿದ ಜುಮ್ಲಾ (ಸುಳ್ಳಿನ) ಮಾತುಗಳು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹೇಳಿದರು. 15 ಲಕ್ಷ ರೂ‌ ಪ್ರತಿಯೊಬ್ಬರ ಖಾತೆಗೆ ಹಾಕುವ ಬಿಜೆಪಿಯ ಸುಳ್ಳಿನ ಮಾತನ್ನು ಕಾಂಗ್ರೆಸ್ ಸತ್ಯವಾಗಿಸಲು ಮುಂದಾಗಿದೆ. ದೇಶದ ಆರ್ಥಿಕ ವ್ಯವಸ್ಥೆಗೆ ನಷ್ಟವಾಗದಂತೆ ಬಡವರ ಖಾತೆಗೆ ಹೇಗೆ ಹಣ ಹಾಕಬಹುದು ಎಂದು ಆರ್ಥಿಕ ತಜ್ಞರಲ್ಲಿ ಸಲಹೆ ಪಡೆದಿದ್ದೇವೆ. ಕಾಂಗ್ರೆಸ್ ತೆಗೆದುಕೊಂಡ ತೀರ್ಮಾನ ಒಂದು ಐತಿಹಾಸಿಕ ನಿರ್ಣಯವಾಗಲಿದೆ ಎಂದರು.

ಪ್ರತೀ ತಿಂಗಳಿಗೆ 6 ಸಾವಿರ ರೂ. ನಂತೆ 5 ವರ್ಷದಲ್ಲಿ 3.60 ಲಕ್ಷ ರೂ. ಗಳನ್ನು ಬಡವರ ಖಾತೆಗೆ ಹಾಕಬಹುದು ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ. ‘ ನ್ಯಾಯ್’ ಯೋಜನೆ ಮೂಲಕ ಬಡವರ ಖಾತೆಗೆ ಹಣ ಹಾಕುವ ಭರವಸೆಯನ್ನು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ. ಹಣ ಎಲ್ಲಿಂದ ತರುತ್ತೀರಿ ಎಂದು ಅವರು ಪ್ರಶ್ನಿಸಿದ್ದಾರೆ. ಜನರ ಖಾತೆಗೆ ಮೋದಿ ಸ್ನೇಹಿತ ಅನಿಲ್ ಅಂಬಾನಿ ಅವರಿಂದಲೇ ಹಣ ಬರುವಂತೆ ಮಾಡಲಾಗುವುದು.‌ ನೂರಕ್ಕೆ ನೂರು ಪ್ರತಿಶತ ಕಾವಲುಗಾರ ಕಳ್ಳ (ಚೌಕಿದಾರ್ ಚೋರ್ ). ನೀರವ್ ಮೋದಿ, ಲಲಿತ್ ಮೋದಿ, ವಿಜಯ್ ಮಲ್ಯ, ಅಂಬಾನಿ, ಮೋದಿ ಸೇರಿದಂತೆ ಇವರದ್ದೆಲ್ಲ ದೊಡ್ಡ ಕಳ್ಳರ ಗುಂಪು.‌ ಇವರೆಲ್ಲ ಕಳ್ಳರ ಗುಂಪಿನ ಸದಸ್ಯರು. ದೇಶದ ಕಾರ್ಮಿಕರು, ಬಡವರು, ಕೃಷಿಕರ ಹಣವನ್ನು ಕದ್ದು ತಮ್ಮ ಕಳ್ಳರ ಗಂಪಿನ ಸದಸ್ಯರಿಗೆ ಮೋದಿ ಹಂಚಿಕೆ ಮಾಡಿದ್ದಾರೆ ಎಂದು ಆರೋಪ ಮಾಡಿದರು.

30 ಸಾವಿರ ಕೋಟಿ ರೂ. ಹಣವನ್ನು ಅಂಬಾನಿ ಕದ್ದು ದೇಶಕ್ಕೆ ಮೋಸ ಮಾಡಿದ್ದಾರೆ. ಎಲ್ಲ ಕಳ್ಳರ ಹೆಸರು ಮೋದಿ, ಮೋದಿ, ಮೋದಿ ಎಂದು ಏಕಿದೆ ಎಂದು ಪ್ರಶ್ನಿಸಿದ ರಾಹುಲ್, ಸರಿಯಾಗಿ ಹುಡುಕಿದರೆ ಇನ್ನೂ ಹಲವರು ಮೋದಿಗಳು ದೇಶದಲ್ಲಿ ಸಿಗಲಿದ್ದಾರೆ ಎಂದರು.

ನೋಟು ಅಮಾನ್ಯೀಕರಣದಿಂದ ಜನಸಾಮಾನ್ಯರ ಬದುಕಿನ ಮೇಲೆ ಬರೆಹಾಕಲಾಯಿತು. ಜಿಎಸ್ ಟಿ ತರುವ ಮೂಲಕ ಗಬ್ಬರ್ ಸಿಂಗ್ ಟ್ಯಾಕ್ಸ್ (ಜಿ ಎಸ್ ಟಿ ಟ್ಯಾಕ್ಸ್) ಜಾರಿಗೊಳಿಸಿ ಮತ್ತೊಮ್ಮೆ ಜನರಿಗೆ ಬರೆ ಹಾಕಿದರು. ಪ್ರಧಾನಿ ಮೋದಿ ಅವರದ್ದು ಬರೀ ಮನ್ ಕೀ ಬಾತ್ ಆದರೆ ನಮ್ಮದು ಕಾಮ್ ಕೀ ಬಾತ್ (ಕೆಲಸದ ಮಾತು). ಹಿಂದೂಸ್ತಾನದ ನಿರುದ್ಯೋಗಿ ಯುವಕ, ಯುವತಿಯರಿಗೆ ಮೋದಿ ಏನು ಮಾಡಿದ್ದಾರೆ ಎನ್ನವುದನ್ನು ಸ್ಪಷ್ಟಪಡಿಸಬೇಕು. ಬರೀ ಭಾಷಣ, ನೆಪಗಳನ್ನು ಹೇಳದೇ ಯುವಕರಿಗೆ ಎಷ್ಟು ಉದ್ಯೋಗ ಸಿಕ್ಕಿದೆ. ಎಷ್ಟು ರೈತರ ಸಾಲ ಮನ್ನಾ ಆಗಿದೆ ಎನ್ನುವುದನ್ನು ಮೋದಿ ಸ್ಪಷ್ಟಪಡಿಸಬೇಕು. ಶ್ರೀಮಂತರನ್ನು ಆಲಂಗಿಸುವ ಮೋದಿ, ರೈತರನ್ನು ಏಕೆ ಅಪ್ಪಿಕೊಳ್ಳುವುದಿಲ್ಲ.‌ ನೀರವ್ ಮೋದಿ ಜೊತೆ ಫೋಟೋ ತೆಗೆಸಿಕೊಳ್ಳುವ ಮೋದಿ, ರೈತರ ಜೊತೆ ಏಕೆ ಫೋಟೋ ತೆಗೆಸಿಕೊಳ್ಳುವುದಿಲ್ಲ ಎಂದು ಅವರು ಪ್ರಶ್ನಿಸಿದರು.

ಲೋಕಸಭೆ ಚುನಾವಣೆ ಬಳಿಕ ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದರೆ ಮೊದಲ ಅಧಿವೇಶನದಲ್ಲಿಯೇ ರೈತರಿಗೆ ಪ್ರತ್ಯೇಕ ಬಜೆಟ್ ಮಂಡಿಸಲಾಗುವುದು. ರೈತರಿಗಾಗಿ ಐತಿಹಾಸಿಕ ನಿರ್ಣಯವನ್ನು ಕೈಗೊಳ್ಳಲಾಗಿದೆ. ಸಾಲ ಮರುಪಾವತಿಸದೆ ಮುಕ್ತವಾಗಿ ತಿರುಗಾಡುವ ಅನಿಲ್ ಅಂಬಾನಿ ಅವರಂಥರವನ್ನು ಜೈಲಿಗೆ ಕಳುಹಿಸಲಾಗುವುದು. ಬ್ಯಾಂಕ್ ಸಾಲ ತೀರುವಳಿಗೆ ರೈತರನ್ನು ಬ್ಯಾಂಕ್ ಗಳು ಕಿರುಕುಳ ನೀಡುವುದನ್ನು ತಪ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಯುವಕರು 5 ವರ್ಷಗಳ ಕಾಲ ಮೋದಿ ಅವರನ್ನು ನಂಬಿ ಸಾಕಾಗಿ, ಸುಸ್ತಾಗಿ ಹೋಗಿದ್ದಾರೆ. ಅಧಿಕಾರ ಬಂದಾಕ್ಷಣ ಮೊದಲ‌ ವರ್ಷದಲ್ಲಿ ಕೇಂದ್ರದಲ್ಲಿ ಖಾಲಿ ಇರುವ 22 ಲಕ್ಷ ಸರ್ಕಾರಿ ಹುದ್ದೆಗಳಲ್ಲಿಯೂ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸಲಾಗುವುದು.10 ಲಕ್ಷ ಪಂಚಾಯತ್ ರಾಜ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಕರ್ನಾಟಕದ‌ ಯುವಕರು ಉದ್ಯಮ ಸ್ಥಾಪಿಸಲು ಇಚ್ಛಿಸಿದಲ್ಲಿ ಅವರಿಗೆ ಯಾವುದೇ ಸಂಸ್ಥೆಯಿಂದಲೂ ಪರವಾನಿಗೆ ಅವಶ್ಯಕತೆಯಿರುವುದಿಲ್ಲ. ಮೋದಿಯ ಕಳ್ಳರ ಗುಂಪಿನಲ್ಲಿರುವ ಬ್ಯಾಂಕ್ ಉದ್ಯಮಿಗಳ ಕೀಲಿಕೈಯನ್ನು ಕಸಿದು ಯುವಕರಿಗೆ ಕೊಡಲಾಗುವುದು. ವರ್ಷಕ್ಕೆ 72 ಸಾವಿರ ರೂ.‌ ನ್ಯಾಯ್ ಯೋಜನೆಯ ಹಣ ಮಹಿಳೆಯರ ಖಾತೆಗೆ ನೇರ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

5 ಕೋಟಿ ಕುಟುಂಬಗಳ 25 ಕೋಟಿ ಜನರಿಗೆ ನೇರವಾಗಿ ಖಾತೆಗೆ ಹಣ ಹಾಕಲಾಗುವುದು.‌ ವಿಧಾನ ಸಭೆ, ಲೋಕಸಭೆಗಳಲ್ಲಿ ಶೇ. 33 ರಷ್ಟು ಮಹಿಳಾ ಮೀಸಲಾತಿಯನ್ನು ಹಾಗೂ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರಿ ನೌಕರಿಯಲ್ಲಿಯೂ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಲಾಗುವುದು ಎಂದು ರಾಹುಲ್ ಘೋಷಿಸಿದರು.

ಪ್ರೀತಿ ತುಂಬಿರುವ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್‌ಮೈತ್ರಿ ಅಭ್ಯರ್ಥಿಗಳಿಗೆ ಗೆಲುವು ಸಿಗಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಾರತ ದೇಶದ ಜನರ, ರೈತರ, ಯುವಕರ ಹಿತ ರಕ್ಷಣೆ ಮಾಡುತ್ತೇವೆ. ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದು ಅವರು ಕರೆ ನೀಡಿದರು.

ಮೋದಿ ರಾಜ್ಯಕ್ಕೆ ಆಗಮಿಸಿದಾಗ ರಫೇಲ್‌ ಹಗರಣದ ಬಗ್ಗೆ ಅವರನ್ನು ಮತದಾರರು ಪ್ರಶ್ನಿಸಬೇಕು.‌ ದೇಶದ‌ ರಕ್ಷಣೆ ಮಾಡುವವರು ಸುಳ್ಳು‌ ಹೇಳುವುದಿಲ್ಲ.‌ ಸುಳ್ಳು ಹೇಳುವವರು ಚೌಕಿದಾರ್ ಗಳಲ್ಲ. ಚೌಕಿದಾರ ಚೋರ್ ಎನ್ನುವುದೇ ನಿಜವಾದ ಸತ್ಯ ಎಂದು ರಾಹುಲ್ ಗಾಂಧಿ ಮತ್ತೊಮ್ಮೆ ಮಗದೊಮ್ಮೆ ಹೇಳಿದರು.

Leave a Reply

Your email address will not be published. Required fields are marked *

error: Content is protected !!