janadhvani

Kannada Online News Paper

ಸ್ಮೃತಿ ಇರಾನಿ ಪದವಿ ಪೂರ್ಣಗೊಳಿಸಿಲ್ಲ-ಅಫಿಡವಿಟ್‌ನಲ್ಲಿ ಸ್ಪಷ್ಟನೆ

ಲಖನೌ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪದವಿ ಪೂರ್ಣಗೊಂಡಿಲ್ಲ ಎಂಬ ವಿಷಯ ಈಗ ದೃಢಪಟ್ಟಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಇದೇ ಮೊದಲ ಬಾರಿಗೆ ಅವರು ಸ್ಪಷ್ಟಪಡಿಸಿದ್ದಾರೆ.

ಅಮೇಠಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ ಸ್ಮೃತಿ ಇರಾನಿ ಅವರು ಆಸ್ತಿ, ಸೊತ್ತು, ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ. ಉನ್ನತ ಶಿಕ್ಷಣದ ಮಾಹಿತಿ ತುಂಬಬೇಕಾದ ಜಾಗದಲ್ಲಿ ಅವರು, ‘ದೆಹಲಿ ಮುಕ್ತ ವಿಶ್ವವಿದ್ಯಾಲಯದಲ್ಲಿ (ಅಂಚೆ ತೆರಪಿನ) ವಾಣಿಜ್ಯ ಪದವಿ ಭಾಗ–1’ ಎಂದು ನಮೂದಿಸಿದ್ದು, 1994ರಲ್ಲಿ ಪದವಿಗೆ ಸೇರಿದ್ದಾಗಿ ಮಾಹಿತಿ ನೀಡಿದ್ದಾರೆ. ಜತೆಗೆ ಆವರಣದಲ್ಲಿ ‘ಮೂರು ವರ್ಷದ ಪದವಿ ಪೂರ್ಣಗೊಂಡಿಲ್ಲ’ ಎಂದೂ ಬರೆದಿದ್ದಾರೆ.

2004ರಲ್ಲಿ ದೆಹಲಿಯ ಚಾಂದನಿಚೌಕ್‌ನಲ್ಲಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ವಿರುದ್ಧ ಸ್ಪರ್ಧಿಸಿದ್ದ ಅವರು ದೆಹಲಿ ಮುಕ್ತ ವಿಶ್ವವಿದ್ಯಾಲಯದಿಂದ (ಅಂಚೆ ತೆರಪಿನ) ಬಿ.ಎ. ಪದವಿ ಪಡೆದಿದ್ದಾಗಿ ಉಲ್ಲೇಖಿಸಿದ್ದರು.

ಈ ಬಾರಿ ₹4.71 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಉಮೇದುವಾರಿಕೆ ಸಲ್ಲಿಕೆಗೂ ಮುನ್ನ ಪೂಜೆ ಸಲ್ಲಿಸಿ, ರೋಡ್‌ ಶೋ ನಡೆಸಿದ ಸ್ಮೃತಿ ಅವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಜತೆಯಾಗಿದ್ದರು.

2014ರ ಚುನಾವಣೆಯಲ್ಲಿ ರಾಹುಲ್ ವಿರುದ್ಧ ಒಂದು ಲಕ್ಷ ಮತಗಳಿಂದ ‌ಸ್ಮೃತಿ ಸೋಲುಂಡಿದ್ದರು. ಹೀಗಿದ್ದರೂ ಕ್ಷೇತ್ರಕ್ಕೆ ಅವರು ನಿಯಮಿತವಾಗಿ ಭೇಟಿ ನೀಡುತ್ತಿದ್ದರು.

error: Content is protected !! Not allowed copy content from janadhvani.com