ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಆರ್ಟಿಕಲ್ 370 ಹಾಗೂ 35(ಎ) ನ್ನು ರದ್ದುಗೊಳಿಸಿದರೆ ಕಣಿವೆ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರ ಹಾದಿ ಸುಗಮಗೊಳಿಸಿದಂತಾಗುತ್ತದೆ ಎಂದು ಜಮ್ಮು-ಕಾಶ್ಮೀರ್ ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ದೆಹಲಿಯಲ್ಲಿ ಬಿಜೆಪಿ ಪಕ್ಷವು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಈ ಪ್ರಣಾಳಿಕೆಯಲ್ಲಿ ಕಣಿವೆ ರಾಜ್ಯದಲ್ಲಿ ಕಲಂ 370ರ ವಿಧಿಯ ಅನ್ವಯ ನೀಡಲಾಗುತ್ತಿರುವ ವಿಶೇಷ ಸವಲತ್ತುಗಳನ್ನು ರದ್ದುಗೊಳಿಸುವುದು ಎಂದು ಆಶ್ವಾಸನೆ ನೀಡಲಾಗಿದೆ.ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಹ ಇದನ್ನು ಪುನರುಚ್ಚರಿಸಿದ್ದರು.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಫಾರೂಕ್ ಅಬ್ದುಲ್ಲಾ, ಕಲಂ 370 ನ್ನು ರದ್ದು ಗೊಳಿಸಿದರೆ ನಾವು ಸುಮ್ಮನೆ ಕೂರುತ್ತೇವೆ ಎಂದು ಬಿಜೆಪಿಗರು ಭಾವಿಸಿದ್ದರೆ ಅದು ತಪ್ಪು. ನಾವು ಈ ಕಲಂ ರದ್ದುಪಡಿಸುವವರ ವಿರುದ್ಧ ಹೋರಾಡುತ್ತೇವೆ. ಏಕೆಂದರೆ ಕಣಿವೆ ರಾಜ್ಯಕ್ಕೆ ನೀಡುತ್ತಿರುವ ವಿಶೇಷ ಸವಲತ್ತುಗಳನ್ನು ರದ್ದುಗೊಳಿಸಿದರೆ ಸ್ವತಂತ್ರ ರಾಷ್ಟ್ರಕ್ಕಾಗಿ ಹೋರಾಡುತ್ತಿರುವ ಆಜಾದಿಗಳ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿದಂತಾಗುತ್ತದೆ ಎಂದು ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಕಲಂ 370 ರ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಕೇಂದ್ರ ಸರಕಾರ ದಶಕಗಳ ಕಾಲದಿಂದ ವಿಶೇಷ ಸವಲತ್ತುಗಳನ್ನು ನೀಡುತ್ತಿದೆ. ಅಲ್ಲದೆ ಕಲಂ 35(ಎ) ಅಡಿಯಲ್ಲಿ ಕಣಿವೆ ರಾಜ್ಯದ ನಿವಾಸಿಗಳಿಗೆ ವಿಶೇಷ ಹಕ್ಕುಗಳನ್ನು ನೀಡಲಾಗಿದೆ.
ಇದನ್ನು ಪ್ರಶ್ನಿಸಿ ಸಾಮಾನ್ಯ ಜನ ಈವರೆಗೆ ಸುಪ್ರೀಂ ಕೋರ್ಟ್ನಲ್ಲಿ ಅಸಂಖ್ಯಾತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ದಾಖಲಿಸಿದ್ದಾರೆ. ಈ ಅರ್ಜಿಗಳನ್ನು ವಿಲೇವಾರಿ ಮಾಡುವುದೇ ಸುಪ್ರೀಂ ಕೋರ್ಟ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.