ನವದೆಹಲಿ, ಮಾ 25:-ಸುಗ್ರೀವಾಜ್ಞೆ ಮೂಲಕ ತ್ರಿವಳಿ ತಲಾಖ್‌ಗೆ ಸಂವಿಧಾನಾತ್ಮಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಆರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ತಕ್ಷಣವೆ ತ್ರಿವಳಿ ತಲಾಖ್ ನೀಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಸಂವಿಧಾನಾತ್ಮಕ ಮಾನ್ಯತೆ ನೀಡಲಾಗಿತ್ತು.
ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಮಸ್ತ ಕೇರಳ ಜಮ್ಇಯ್ಯತುಲ್ ಉಲಮಾ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತ್ತು.
ಇಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಾಧೀಶರಾದ ದೀಪಕ್ ಗುಪ್ತಾ ಪೀಠದ ಮುಂದೆ ಈ ಅರ್ಜಿಯ ವಿಚಾರಣೆ ನಡೆಯಿತು. ಈ ಸಂದರ್ಭದಲ್ಲಿ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ವಿಚಾರದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿತು.
ಕೇಂದ್ರ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ ಕೆಲವೆ ಗಂಟೆಗಳಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯ (ವಿವಾಹ ಸಂರಕ್ಷಣಾ ಹಕ್ಕುಗಳು) ಕುರಿತ ಸುಗ್ರೀವಾಜ್ಞೆಗೆ ಸೆಪ್ಟೆಂಬರ್ 16ರಂದು ಮೊದಲ ಬಾರಿಗೆ ಅಧಿಸೂಚನೆ ಹೊರಡಿಸಿತ್ತು.
ಮುಸ್ಲಿಂ ಸಮುದಾಯದ ಪುರುಷ ಮೂರು ಬಾರಿ ತಲಾಕ್ ಎಂದು ಹೇಳಿ ಪತ್ನಿಗೆ ತ್ವರಿತವಾಗಿ ವಿಚ್ಛೇದನ ನೀಡಬಹುದಾಗಿತ್ತು. ಈ ಪರಿಪಾಠಕ್ಕೆ ಇತಿಶ್ರೀ ಹಾಡಲು ಕೇಂದ್ರ ಸರ್ಕಾರ ಸುಗ್ರಿವಾಜ್ಞೆ ಜಾರಿಗೊಳಿಸಿತ್ತು. ಇದರಿಂದಾಗಿ ಮೂರು ಬಾರಿ ತಲಾಕ್ ಎಂದು ಹೇಳಿ ವಿಚ್ಛೇದನ ನೀಡಿದರೆ ಅದನ್ನು ಶಿಕಾರ್ಹ ಅಪರಾಧವೆಂದು ಪರಿಗಣಿಸಲಾಗಿದೆ. ಇಂತಹ ಪರಿಪಾಠ ಮುಂದುವರೆಸಿದರೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.