ಗುರ್ ಗಾಂವ್, ಮಾರ್ಚ್ 23: ಮನೆಯೊಂದಕ್ಕೆ ನುಗ್ಗಿದ ಗುಂಪೊಂದು ಮುಸ್ಲಿಂ ಕುಟುಂಬದ ಸದಸ್ಯರ ಮೇಲೆ ಹಾಕಿ ಸ್ಟಿಕ್ ಮತ್ತು ಕಬ್ಬಿಣದ ಸಲಾಕೆಗಳಿಂದ ಥಳಿಸಿ ಪಾಕಿಸ್ತಾನಕ್ಕೆ ಹೋಗುವಂತೆ ಬೆದರಿಕೆ ಒಡ್ಡಿದ ಅಮಾನವೀಯ ಘಟನೆ ನಡೆದಿದೆ.
ಇದಕ್ಕೂ ಮುನ್ನ ಹಲ್ಲೆಕೋರರ ಪೈಕಿ ಕೆಲವರು, ಮನೆಯ ಹೊರಗೆ ಮಕ್ಕಳು ಕ್ರಿಕೆಟ್ ಆಡುತ್ತಿದ್ದಾಗ, ಇದಕ್ಕೆ ಆಕ್ಷೇಪಿಸಿದ ಕೆಲ ಮಂದಿ “ಪಾಕಿಸ್ತಾನಕ್ಕೆ ಹೋಗಿ ಕ್ರಿಕೆಟ್ ಆಡಿ” ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಶುಕ್ರವಾರ ತಡರಾತ್ರಿ ಒಬ್ಬನನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶ ಮೂಲದ ಮುಹಮ್ಮದ್ ಸಾಜಿದ್ ಎಂಬವರ ಮನೆ ಮೇಲೆ ಸಂಜೆ 5 ಗಂಟೆ ವೇಳೆ ದಾಳಿ ನಡೆದಿದೆ. ಇವರು ಪತ್ನಿ ಸಮೀನಾ ಹಾಗೂ ಆರು ಮಂದಿ ಮಕ್ಕಳ ಜತೆ ಕಳೆದ ಮೂರು ವರ್ಷಗಳಿಂದ ಇಲ್ಲಿ ವಾಸವಿದ್ದರು. ಮನೆಯ ಪಕ್ಕದ ಖಾಲಿ ಜಾಗದಲ್ಲಿ ಇತರ ಕೆಲವರ ಜತೆ ಸೇರಿ ಕ್ರಿಕೆಟ್ ಆಡುತ್ತಿದ್ದಾಗ ಸಮಸ್ಯೆ ಆರಂಭವಾಯಿತು ಎಂದು ಸಾಜಿದ್ ಅವರ ಅಳಿಯ ದಿಲ್ಷಾದ್ ದೂರಿನಲ್ಲಿ ವಿವರಿಸಿದ್ದಾರೆ.
ಇಬ್ಬರು ಆಗಂತುಕರು ಬೈಕ್‌ನಲ್ಲಿ ಬಂದು, “ಇಲ್ಲೇನು ಮಾಡುತ್ತಿದ್ದೀರಿ? ಪಾಕಿಸ್ತಾನಕ್ಕೆ ಹೋಗಿ ಆಡಿ” ಎಂದು ಧಮಕಿ ಹಾಕಿ, ಸಂಘರ್ಷಕ್ಕೆ ಇಳಿದರು. ಸಾಜಿದ್ ಮಧ್ಯಪ್ರವೇಶಿಸಿದಾಗ, ಬೈಕಿನಲ್ಲಿ ಹಿಂದೆ ಕುಳಿತಿದ್ದ ವ್ಯಕ್ತಿ ಅವರನ್ನು ಥಳಿಸಿ, “ಸ್ವಲ್ಪ ತಾಳಿ; ನಾವು ಏನೆಂದು ತೋರಿಸುತ್ತೇವೆ” ಎಂದ ಬೆದರಿಕೆ ಹಾಕಿದರು.
10 ನಿಮಿಷಗಳ ಬಳಿಕ ಎರಡು ಬೈಕ್‌ಗಳಲ್ಲಿ ಬಂದ ಆರು ಯುವಕರು ಮತ್ತು ಹಲವು ಮಂದಿ ಲಾಠಿ, ತಲ್ವಾರ್ ಮತ್ತು ಕಬ್ಬಿಣದ ರಾಡ್‌ನೊಂದಿಗೆ ಮನೆಯತ್ತ ಆಗಮಿಸಿದರು ಎಂದು ಆಪಾದಿಸಲಾಗಿದೆ.
“ಅವರನ್ನು ನೋಡಿ ಮನೆಗೆ ಓಡಿಬಂದಾಗ, ಆ ವ್ಯಕ್ತಿ ಹೊರಬರಲಿ, ಇಲ್ಲದಿದ್ದರೆ ನಿಮ್ಮೆಲ್ಲರನ್ನೂ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದರು. ನಾವು ಹೊರಗೆ ಬಾರದಿದ್ದಾಗ ಮನೆಯೊಳಗೆ ನುಗ್ಗಿ ಹಲ್ಲೆ ಮಾಡಿದರು. ಮನೆಯವರ ಮೊಬೈಲ್ ಫೋನ್ ಕಸಿದುಕೊಂಡು ಚೆನ್ನಾಗಿ ಥಳಿಸಿ, ಮಕ್ಕಳನ್ನು ಎಳೆದಾಡಿ, ಅಮೂಲ್ಯ ವಸ್ತುಗಳನ್ನು ದೋಚಿ ಪರಾರಿಯಾದರು ಎಂದು ದೂರು ನೀಡಲಾಗಿದೆ.