ಬೆಳಗಾವಿ, ಮಾ.4: ಇತ್ತೀಚೆಗೆ ಭಾರೀ ವಿವಾದ ಸೃಷ್ಟಿಸಿದ್ದ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರ ಫೇಸ್ ಬುಕ್ ಪೋಸ್ಟ್ ಪ್ರಕರಣ ತಿರುವು ಪಡೆದುಕೊಂಡಿದ್ದು, ಪೊಲೀಸರು ನಾಗರಾಜ್ ಎಂಬಾತನನ್ನು ಬಂಧಿಸಿದ್ದಾರೆ.
ಕಾಂಗ್ರೆಸ್ ಮಾಜಿ ಶಾಸಕ ಅಶೋಕ್ ಪಟ್ಟಣರವರ ಆಪ್ತ ಮುಹಮ್ಮದ್ ಶಫಿ ಎಂಬವರ ಫೇಸ್ಬುಕ್ ಖಾತೆಯಲ್ಲಿ ಇತ್ತೀಚೆಗೆ ‘ಜೈ ಪಾಕಿಸ್ತಾನ್, ಜೈ ಅಶೋಕ ಅಣ್ಣಾ’ ಎಂಬ ಪೋಸ್ಟ್ ಹಾಕಲಾಗಿತ್ತು. ಇದು ಜಿಲ್ಲೆಯಾದ್ಯಂತ ಭಾರೀ ವಿವಾದ ಸೃಷ್ಟಿಸಿತ್ತು. ಈ ವಿವಾದಕ್ಕೆ ಸಂಬಂಧಿಸಿ ರಾಮದುರ್ಗದಲ್ಲಿ ಕಲ್ಲು ತೂರಾಟ ನಡೆದಿದ್ದು, ಸ್ಥಳೀಯ ಶಾಸಕ ಮಹಾದೇವಪ್ಪ ಯಾದವಾಡ್ ಪ್ರತಿಭಟನೆ ಕೂಡಾ ನಡೆಸಿದ್ದರು. ಅಲ್ಲದೇ, ಬೆಳಗಾವಿ ಸಂಸದ ಸುರೇಶ ಅಂಗಡಿ ಅವರು ಶಫಿಯನ್ನು ಬಂಧಿಸುವಂತೆ ಎಸ್ಪಿ ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಸಿದ್ದರು.
ಆದರೆ ಈ ಪ್ರಕರಣಕ್ಕೆ ಇದೀಗ ಹೊಸ ತಿರುವು ಲಭಿಸಿದ್ದು, ಪ್ರಕರಣದ ಆರೋಪಿ ನಾಗರಾಜನನ್ನು ರಾಮದುರ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಗರಾಜ್ ವಿರುದ್ಧ ಕಲಂ 124ಎ, 153ಎ, 153ಬಿ ಹಾಗೂ ಐಟಿ ಆಕ್ಟ್ 66ಸಿ, 66 ಬಿ ಅಡಿ ಪ್ರಕರಣ ದಾಖಲಾಗಿದೆ.
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಶಫಿಯವರ ಫೇಸ್ಬುಕ್ ಅಕೌಂಟ್ ನಲ್ಲಿ ನಾಗರಾಜ್ ದೇಶವಿರೋಧಿ ಪೋಸ್ಟ್ ಮಾಡಿದ್ದ ಎನ್ನಲಾಗುತ್ತಿದೆ. ಹಲವು ವರ್ಷಗಳಿಂದ ರಾಮದುರ್ಗದಲ್ಲಿ ಕಂಪ್ಯೂಟರ್ ಸೆಂಟರ್ ನಡೆಸುತ್ತಿದ್ದ ನಾಗರಾಜ್ ಹಾಗೂ ಶಫಿ ನಡುವೆ ಉತ್ತಮ ಸಂಬಂಧವಿತ್ತು. ಶಫಿಯವರ ಫೇಸ್ಬುಕ್ ಖಾತೆಯ ಐಡಿ ಹಾಗೂ ಪಾಸ್ ವರ್ಡ್ ನಾಗರಾಜನಿಗೆ ತಿಳಿದಿತ್ತು. ವೈಯಕ್ತಿಕ ದ್ವೇಷದ ಕಾರಣ ಈ ಅವಕಾಶವನ್ನು ಬಳಸಿಕೊಂಡ ನಾಗರಾಜ ಶಫಿ ಹೆಸರಿಗೆ ಕಪ್ಪು ಮಸಿ ಬಳಿಯಲು ವಿವಾದಾತ್ಮಕ ಪೋಸ್ಟ್ ಹಾಕಿದ್ದ ಎನ್ನಲಾಗಿದೆ.
“ಶಾಂತಿ ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡುವ ಪೋಸ್ಟ್ ಹಾಕುವುದು ಮಾತ್ರವಲ್ಲ, ಶೇರ್ ಮಾಡುವುದು ಕೂಡಾ ಅಪರಾಧ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಪೋಸ್ಟ್ ಹಾಕಿದವರ ಮೇಲೂ ಕ್ರಮ ಜರುಗಿಸುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಧೀರ್ ಕುಮಾರ್ ತಿಳಿಸಿದ್ದಾರೆ.