janadhvani

Kannada Online News Paper

ಕಾಲ್ನಡೆ ಯಾತ್ರಿಕರನ್ನು ಅವಗಣಿಸಿದ್ದಲ್ಲಿ ದಂಡ- ಅಬುಧಾಬಿ ಪೊಲೀಸ್

ಅಬುಧಾಬಿ: ಕಾಲ್ನಡೆ ಯಾತ್ರಿಕರ ಸುರಕ್ಷತೆಯನ್ನು ಖಾತರಿ ಪಡಿಸುವ ಸಲುವಾಗಿ ಅಬುಧಾಬಿ ಪೊಲೀಸರು ಕಾನೂನು ಉಲ್ಲಂಘಕರಿಗೆ ಹೊಸ ಶಿಕ್ಷಾ ವಿಧಾನಗಳನ್ನು ಜಾರಿಗೆ ತಂದಿದ್ದಾರೆ.

ಕಾಲ್ನಡಿಗೆ ಯಾತ್ರಿಕರಿಗೆ ಆದ್ಯತೆ ನೀಡದೆ ವೇಗವಾಗಿ ವಾಹನ ಚಲಾಯಿಸಿದರೆ 500 ದಿರ್ಹಂ ದಂಡ ಮತ್ತು ಆರು ಕಪ್ಪು ಚುಕ್ಕೆಗಳನ್ನು ನೀಡಲಾಗುತ್ತದೆ.
ಕಾಲ್ನಡಿಗೆ ಯಾತ್ರಿಕರು ರಸ್ತೆ ದಾಟುವ ಸ್ಥಳ ಮತ್ತು ಶಾಲಾ ಪರಿಸರದಲ್ಲಿ ಪೊಲೀಸರು ರೆಡಾರ್ಗಳನ್ನು ಸ್ಥಾಪಿಸಲಿದ್ದು, ಆರ್ಟಿಫಿ಼ಷ್ಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಉಪಯೋಗಿಸಿ ಕಾಲ್ನಡಿಗೆ ಯಾತ್ರಿಕರಿಗೆ ಆದ್ಯತೆ ನೀಡುವ ವಿಧದಲ್ಲಿ ಈ ರೆಡಾರ್‌ಗಳನ್ನು ಸ್ಥಾಪಿಸಲಾಗುತ್ತದೆ. ಕಾಲ್ನಡೆ ಹಾದಿಯಲ್ಲಿ ವಾಹನ ನಿಲುಗಡೆ ಮಾಡಿದರೂ 500 ದಿರ್ಹಂ ದಂಡ ವಿಧಿಸಲಾಗುವುದು.

ರಸ್ತೆ ದಾಟುವವರಿಗೆ ಅಪಾಯ ತಂದೊಡ್ಡುವ ರೀತಿಯಲ್ಲಿ ವಾಹನ ನಿಲ್ಲಿಸುವುದು ಮತ್ತು ರಸ್ತೆ ದಾಟುವುದಕ್ಕೆ ತೊಂದರೆ ತಂದೊಡ್ಡಿದರೆ 400 ದಿರ್ಹಂ ದಂಡ ಪಾವತಿಸಬೇಕಾದೀತು.

ರಸ್ತೆ ಬದಿಯಲ್ಲಿ ಕಲ್ಲುಗಳನ್ನು ಹಾಸಿದ ಸ್ಥಳದಲ್ಲಿ ವಾಹನ ನಿಲ್ಲಿಸಿದರೆ 400 ದಿರ್ಹಂ ದಂಡ. ಕಾಲ್ನಡಿಗೆ ಯಾತ್ರಿಕರಿಗಾಗಿ ಮೇಲ್ಸೇತುವೆ ಮತ್ತು ಟನಲ್ಗಳನ್ನು ನಿರ್ಮಿಸಿ ಸುರಕ್ಷತೆಯನ್ನು ಖಾತರಿ ಪಡಿಸಲಾಗುವುದು. ಕಾಲ್ನಡಿಗೆ ಯಾತ್ರಿಕರಿಗೆ ಪ್ರಾಧಾನ್ಯತೆ ನೀಡದ ಕಾರಣದಿಂದಾಗಿ ಹೆಚ್ಚು ಅಪಘಾತಗಳು ಸಂಭವಿಸುವುದಾಗಿ ಸಂಶೋಧನೆಯಿಂದ ತಿಳಿದು ಬಂದ ಹಿನ್ನೆಲೆಯಲ್ಲಿ ಈ ನಡೆ ಎನ್ನಲಾಗಿದೆ.

ವಾಹನ ಚಾಲಕರು ವೇಗವನ್ನು ನಿಯಂತ್ರಿಸಿ ರಸ್ತೆದಾಟುವವರಿಗೆ ಅನುಕೂಲ ಮಾಡಿಕೊಡುವಂತೆ ಪೊಲೀಸರು ತಿಳಿಸಿದ್ದಾರೆ. ದಾಟುವುದಕ್ಕೆ ಅನುಮತಿಸಲಾದ ಕಡೆ ಮಾತ್ರ ರಸ್ತೆ ದಾಟುವಂತೆ ಕಾಲ್ನಡೆ ಯಾತ್ರಿಕರಿಗೂ ಪೊಲೀಸರು ತಾಕೀತು ನೀಡಿದ್ದಾರೆ.

ರೆಡಾರ್‌ಗಳಲ್ಲಿ ಎರಡು ಸ್ಕ್ರೀನ್ಗಳಿದ್ದು, ವಾಹನ ಮತ್ತು ಕಾಲ್ನಡೆ ಯಾತ್ರಿಕರ ಚಲನವಲನಗಳನ್ನು ಅದು ಸೆರೆಹಿಡಿಯಲಿದೆ. ಇನ್ನೊಂದು ಕ್ಯಾಮರಾ ವಾಹನದ ನಂಬರ್ ಪ್ಲೇಟನ್ನು ಸ್ಕ್ಯಾನ್ ಮಾಡಲಿದ್ದು, ಅದರಲ್ಲೆ ಸಜ್ಜುಗೊಳಿಸಲಾದ ಮಗದೊಂದು ಕ್ಯಾಮರಾ ದೃಶ್ಯಗಳನ್ನು ಸೆರೆಹಿಡಿಯಲಿದೆ. ಅಬುಧಾಬಿಯ ವಿವಿಧೆಡೆ ರೆಡಾರ್‌ಗಳನ್ನು ಸ್ಥಾಪಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಪೊಲೀಸರು ವ್ಯಕ್ತಪಡಿಸಿದ್ದಾರೆ.

error: Content is protected !! Not allowed copy content from janadhvani.com