ನವದೆಹಲಿ: ನರೇಂದ್ರ ಮೋದಿ ಮತ್ತೆ ಎರಡನೇ ಅವಧಿಗೆ ಪ್ರಧಾನಿಯಾಗುವ ಕನಸಿಗೆ ಮೂವರು ಮಹಿಳೆಯರು ಅಡ್ಡಗಾಲಾಗಿದ್ದಾರೆ.
ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ಆತಂಕಕ್ಕೆ ಒಳಗಾಗಿದ್ದ ಬಿಜೆಪಿಗೆ ಇದೀಗ ಕಾಂಗ್ರೆಸ್‌ನ ಪ್ರಿಯಾಂಕ ಗಾಂಧಿ ಆಗಮನ ಮತ್ತಷ್ಟು ಚಿಂತೆಗೀಡುಮಾಡಿದೆ. ಬಿಜೆಪಿಯ ಎರಡನೇ ಅವಧಿಯ ಅಧಿಕಾರಕ್ಕೆ ಕಾಂಗ್ರೆಸ್‌ನ ಪ್ರಿಯಾಂಕ ಗಾಂಧಿ, ಪಶ್ಚಿಮಬಂಗಾಳದ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ, ಉತ್ತರಪ್ರದೇಶದ ಬಿಎಸ್‌ಪಿಯ ಮಾಯಾವತಿ ಬ್ರೇಕ್ ಹಾಕಲಿದ್ದಾರೆಯೇ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಮಾಯಾವತಿ…
ಈ ಹಿಂದೆ ಬಿಜೆಪಿ ಸಹಕಾರದೊಂದಿಗೆ ಸರ್ಕಾರ ರಚನೆ ಮಾಡಿ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಬಿಜೆಪಿಯ ಪ್ರಮುಖ ಎದುರಾಳಿಯಾಗಿದ್ದಾರೆ. ಉತ್ತರಪ್ರದೇಶದಲ್ಲಿ ಪ್ರಾಬಲ್ಯವನ್ನು ಹೊಂದಿರುವ ಮಾಯಾವತಿ ಈ ಸಲ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದಾರೆ.
ಉತ್ತರಪ್ರದೇಶದಲ್ಲಿ 80 ಲೋಕಸಭೆ ಸ್ಥಾನಗಳಿವೆ. ಇಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷವೇ ಕೇಂದ್ರದಲ್ಲಿ ಗದ್ದುಗೆ ಹಿಡಿಯುವುದು ನಿಶ್ಚಿತ ಎಂಬ ಪ್ರತೀತಿ ಇದೆ. ಕಳೆದ ಸಲ ಬಿಜೆಪಿ 73 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ಈ ಬಾರಿ ಬಿಎಸ್‌ಪಿ ಮತ್ತು ಎಸ್‌ಪಿ ಪಕ್ಷಗಳ ಮೈತ್ರಿಯಿಂದ ಬಿಜೆಪಿಗೆ ಈಗಾಗಲೇ ನಡುಕ ಉಂಟಾಗಿದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಬಿಜೆಪಿ 30 ಸ್ಥಾನಗಳನ್ನು ಗೆಲ್ಲುವುದು ಕಷ್ಟ ಎನ್ನಲಾಗಿದೆ. ಎಸ್‌ಪಿ ಮತ್ತು ಬಿಎಸ್‌ಪಿ 50ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಮಾಯಾವತಿ ಪ್ರಬಲ ಸ್ಪರ್ಧೆ ನೀಡುತ್ತಿರುವುದು ಬಿಜೆಪಿಯ ಆತಂಕಕ್ಕೆ ಕಾರಣವಾಗಿದೆ.
ಪ್ರಿಯಾಂಕ ಗಾಂಧಿ…
ನೆಹರೂ ಕುಟುಂಬದ ಮತ್ತೊಂದು ಕುಡಿ ಪ್ರಿಯಾಂಕ ಗಾಂಧಿ ರಾಜಕಾರಣಕ್ಕೆ ಇಳಿಯುತ್ತಿರುವುದು ಬಿಜೆಪಿ ಪಾಳೆಯದಲ್ಲಿ ತಳಮಳ ಉಂಟಾಗಿದೆ. ಪ್ರಿಯಾಂಕ ಗಾಂಧಿ ಉತ್ತರ ಪ್ರದೇಶವನ್ನು ಮುಖ್ಯವಾಗಿಸಿಕೊಂಡು ಪ್ರಚಾರ ಮಾಡಲು ಸಿದ್ಧತೆ ಮಾಡಿಕೊಂಡಿರುವುದು ಬಿಜೆಪಿಯ ಆತಂಕಕ್ಕೆ ಕಾರಣ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನೇ ಹೋಲುವ ಪ್ರಿಯಾಂಕ ಗಾಂಧಿ ಮೇಲೆ ಕಾಂಗ್ರೆಸ್ ಪಕ್ಷ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಬಿಜೆಪಿ, ಬಿಎಸ್‌ಪಿ ಮೈತ್ರಿ ಕೂಟ ಹಾಗೂ ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಚೇತರಿಸಿಕೊಳ್ಳುತ್ತಿರುವುದು ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇನ್ನು ಪ್ರಿಯಾಂಕ ಗಾಂಧಿ ಅಖಾಡಕ್ಕೆ ದುಮುಕಿರುವುದು ಕಾಂಗ್ರೆಸ್ ಪಕ್ಷಕ್ಕೆ ಆಮ್ಲಜನಕ ಸಿಕ್ಕಂತಾಗಿದೆ ಎಂದು ಹೇಳಲಾಗುತ್ತಿದೆ.
ಮಮತಾ ಬ್ಯಾನರ್ಜಿ…
ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಷ್ಟ್ ಪಕ್ಷಗಳ ಆಡಳಿತವನ್ನು ಕೊನೆಗಾಣಿಸಿ ಅಧಿಕಾರದ ಗದ್ದುಗೆ ಹಿಡಿದಿರುವ ತೃಣ ಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ನರೇಂದ್ರ ಮೋದಿಯ ನಿದ್ದೆ ಕೆಡಿಸಿರುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
42 ಲೋಕಸಭಾ ಸ್ಥಾನಗಳಿರುವ ಪಶ್ಚಿಮ ಬಂಗಾಳದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಸಲ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿರುವ ಬಿಜೆಪಿಗೆ ಮಮತಾ ಬ್ಯಾನರ್ಜಿ ಅಡ್ಡಿಯಾಗಿದ್ದಾರೆ. ರಾಜ್ಯಸಭೆಯಲ್ಲೂ ಟಿಎಂಸಿ ಹೆಚ್ಚಿನ ಸ್ಥಾನಗಳನ್ನು ಹೊಂದಿದೆ. ಯಾವುದೇ ಮಸೂದೆ ಅಂಗೀಕಾರವಾಗಬೇಕಾದರೆ ಟಿಎಂಸಿಯ ಬೆಂಬಲ ಬೇಕೇ ಬೇಕು. ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿ ತೃತೀಯ ಶಕ್ತಿಯನ್ನು ಕಟ್ಟಿಕೊಂಡಿರುವ ಮಮತಾ ಬ್ಯಾನರ್ಜಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಅಡ್ಡಗಾಲಾಗಿದ್ದಾರೆ.
ಈ ಬಾರಿ ಕಾಂಗ್ರೆಸ್ 150 ರಿಂದ 175 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಬಹುದು, ಹಾಗೇ ಪ್ರಾದೇಶಿಕ ಪಕ್ಷಗಳ ಒಕ್ಕೂಟವು 125 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ ಎನ್ನಲಾಗುತ್ತಿದೆ. ಕಾಂಗ್ರೆಸ್ ಬೆಂಬಲದೊಂದಿಗೆ ಬಿಜೆಪಿಯೇತರ ಸರ್ಕಾರ ಕೇಂದ್ರದಲ್ಲಿ ರಚನೆಯಾಗಬಹುದು ಎಂಬು ರಾಜಕೀಯ ತಜ್ಞರ ಲೆಕ್ಕಾಚಾರ