janadhvani

Kannada Online News Paper

“ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಿ-ಜನರ ಜೀವ ಉಳಿಸಿ” ಕಾಂಗ್ರೆಸ್‌ ನಿಂದ ಪಾದಯಾತ್ರೆ

ಮಂಗಳೂರು: ‘ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಲು ಸಾಧ್ಯವಾಗದ ಸಂಸದ ನಳಿನ್‌ಕುಮಾರ್‌ ಕಟೀಲ್‌, ಸುಳ್ಳಿನ ಸರಮಾಲೆಗಳನ್ನು ಸೃಷ್ಟಿಸುತ್ತಿದ್ದಾರೆ. ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕಟ್ಟುಕತೆಗಳ ಮೊರೆ ಹೋಗಿದ್ದಾರೆ’ ಎಂದು ಜಿಲ್ಲೆಯ ಕಾಂಗ್ರೆಸ್‌ ನಾಯಕರು ತೀವ್ರ ವಾಗ್ದಾಳಿ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ– 66ರ ಕಾಮಗಾರಿ ವಿಳಂಬ ವಿರೋಧಿಸಿ ‘ರಾಷ್ಟ್ರೀಯ ಹೆದ್ದಾರಿ, ಮೇಲುಸೇತುವೆ ಕಾಮಗಾರಿ ಪೂರ್ಣಗೊಳಿಸಿ– ಜನರ ಜೀವ ಉಳಿಸಿ’ ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್‌ ತಲಪಾಡಿಯಿಂದ ಪಂಪ್‌ವೆಲ್‌ ವೃತ್ತದವರೆಗೆ ಸೋಮವಾರ ಪಾದಯಾತ್ರೆ ಹಮ್ಮಿಕೊಂಡಿತ್ತು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬಹುತೇಕ ಕಾಂಗ್ರೆಸ್‌ ನಾಯಕರು ಸಂಸದರ ವಿರುದ್ಧ ಟೀಕಾಪ್ರಹಾರ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾತನಾಡಿ, ‘ಸಂಸದರಾಗಿ ಎರಡು ಅವಧಿಯಲ್ಲಿ ತೊಕ್ಕೊಟ್ಟು, ಪಂಪ್‌ವೆಲ್‌ ಮೇಲುಸೇತುವೆ ನಿರ್ಮಾಣ ಪೂರ್ಣಗೊಳಿಸಲು ನಳಿನ್‌ ಅವರಿಗೆ ಸಾಧ್ಯವಾಗಿಲ್ಲ. ಈಗ ಪೊಲೀಸರನ್ನು ಕರೆಸಿ ಅಧಿಕಾರಿಗಳನ್ನು ಬೆದರಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಸಚಿವರೇ ಇವರ ಜೊತೆಗೆ ಇರುವಾಗ ಅಧಿಕಾರಿಗಳನ್ನು ಏಕೆ ಬೆದರಿಸಬೇಕು. ಸಾಮರ್ಥ್ಯ ಇದ್ದರೆ ಅಧಿಕಾರಿಗಳನ್ನು ಬದಲಾವಣೆ ಮಾಡಿಸಲಿ’ ಎಂದು ಸವಾಲು ಹಾಕಿದರು.

‘ತೊಕ್ಕೊಟ್ಟು ಮೇಲುಸೇತುವೆಯನ್ನು 2018ರ ಡಿಸೆಂಬರ್‌ನಲ್ಲಿ ಮತ್ತು ಪಂಪ್‌ವೆಲ್‌ ಮೇಲುಸೇತುವೆಯನ್ನು ಇದೇ ಫೆಬ್ರುವರಿಯಲ್ಲಿ ಉದ್ಘಾಟನೆ ಮಾಡುವುದಾಗಿ ಸಂಸದರು ಘೋಷಿಸಿದ್ದರು. ಈಗ ಗುತ್ತಿಗೆದಾರರನ್ನು ಬದಲಿಸಿ ತಮ್ಮ ಕಡೆಯವರಿಗೆ ಕೊಟ್ಟರೆ ಬೇಗ ಕೆಲಸ ಮಾಡಿಸುವುದಾಗಿ ಹೇಳಿದ್ದಾರೆ. ಮೇಲುಸೇತುವೆ ಬೇಡ ರಸ್ತೆಯ ಮಧ್ಯದ ನಾಲ್ಕು ಗುಂಡಿಗಳನ್ನು ಮುಚ್ಚಿ ತೋರಿಸಲಿ ನೋಡೋಣ’ ಎಂದು ವ್ಯಂಗ್ಯವಾಡಿದರು.

‘ಸುಳ್ಳೇ ಇವರ ಆಸ್ತಿ’: ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಅಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸುವ ಅಧಿಕಾರ ಸಂಸದರಿಗೆ ಇದೆ. ಆದರೆ, ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳ ಕುರಿತು ಕೇಳಿದರೆ ನಳಿನ್‌ಕುಮಾರ್‌ ಕಟೀಲ್‌ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುತ್ತಾರೆ. ಇಂತಹವರು ನಮ್ಮ ಸಂಸದರು ಎಂದು ಹೇಳಿಕೊಳ್ಳಲು ನಾಚಿಕೆ ಆಗುತ್ತದೆ’ ಎಂದು ಹೇಳಿದರು.

ಚುನಾಯಿತ ಪ್ರತಿನಿಧಿಗಳು ಸುಳ್ಳು ಹೇಳಬಾರದು. ಆದರೆ, ಸುಳ್ಳೇ ಇಲ್ಲಿನ ಸಂಸದರ ಆಸ್ತಿ. ಬಿಜೆಪಿ ಎಂದರೆ ಭಾರತೀಯ ಜನತಾ ಪಕ್ಷ ಅಲ್ಲ, ‘ಭಾರತೀಯ ಜೂಟ್‌ ಪಕ್ಷ’. ‘ಹೆಚ್ಚು ಸುಳ್ಳು ಹೇಳಬೇಡಿ’ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿಯೇ ಹೇಳಿದ್ದಾರೆ. ಆದರೆ, ಇವರು ಸುಳ್ಳು ಹೇಳುವುದನ್ನು ನಿಲ್ಲಿಸಿಲ್ಲ ಎಂದರು.

ಮಾಜಿ ಶಾಸಕ ಜೆ.ಆರ್‌.ಲೋಬೊ ಮಾತನಾಡಿ, ‘ಪಂಪ್‌ವೆಲ್‌ ಮೇಲುಸೇತುವೆ ಕಾಮಗಾರಿ ದಶಮಾನೋತ್ಸವ ಆಚರಣೆಯತ್ತ ಸಾಗಿದೆ. ಇದಕ್ಕೆ ಸಂಸದರೇ ಕಾರಣ. ಆದರೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರು ಹಿಂದಿನ ಶಾಸಕರು ವಿನ್ಯಾಸ ಬದಲಿಸಿದ್ದು ಕಾರಣ ಎಂಬ ಆರೋಪ ಮಾಡಿದ್ದಾರೆ. ಅವರು ಮೊದಲು ನಿಯಮಗಳನ್ನು ಅರಿತು ಮಾತನಾಡಬೇಕು’ ಎಂದರು.

ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್‌ಕುಮಾರ್ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಮುಖಂಡರಾದ ಕಣಚೂರು ಮೋನು, ಡಾ.ರಘು, ಕೋಡಿಜಾಲ್‌ ಇಬ್ರಾಹಿಂ, ಸಂತೋಷ್‌ಕುಮಾರ್ ಶೆಟ್ಟಿ ಅಸೈಗೋಳಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

error: Content is protected !! Not allowed copy content from janadhvani.com