ಬೆಂಗಳೂರು (ಡಿ. 30): ದೇಶದೆಲ್ಲೆಡೆ ‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನಿಮಾ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಜೀವನಾಧಾರಿತ ಸಿನಿಮಾ ಇದಾಗಿದ್ದು, ಟ್ರೈಲರ್ ಬಿಡುಗಡೆಯಾದಾಗಲೇ ಕಾಂಗ್ರೆಸ್ ನಾಯಕರು ಆಕ್ಷೇಪವೆತ್ತಿದ್ದರು.
ಈ ಬಗ್ಗೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರು ಕೂಡ ಪ್ರತಿಕ್ರಿಯೆ ನೀಡಿದ್ದು, ಕೇವಲ ಮನಮೋಹನ್ ಸಿಂಗ್ ಮಾತ್ರವಲ್ಲ. ನಾನು ಕೂಡ ಆಕಸ್ಮಿಕವಾಗಿಯೇ ಪ್ರಧಾನಿಯಾದವನು. ನಮಗೆ ಹೇಗೆ ಅಧಿಕಾರ ಸಿಕ್ಕಿತು ಎಂಬುದಕ್ಕಿಂತ ಅಧಿಕಾರದಲ್ಲಿದ್ದಾಗ ನಾವು ಮಾಡಿದ ಕೆಲಸಗಳು ಮುಖ್ಯವಾಗುತ್ತವೆ. ಈ ಸಿನಿಮಾ ತೆರೆಗೆ ತರಲು ಹೇಗೆ ಅನುಮತಿ ನೀಡಿದರು ಎಂಬುದೇ ನನಗೆ ಗೊತ್ತಾಗುತ್ತಿಲ್ಲ ಎಂದಿದ್ದಾರೆ.
2004ರಿಂದ 2008ರವರೆಗೆ ಮನಮೋಹನ್ ಸಿಂಗ್ ಅವರ ಮಾಧ್ಯಮ ಸಲಹೆಗಾರನಾಗಿದ್ದ ಸಂಜಯ್ ಬರು ಬರೆದಿರುವ ‘ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಪುಸ್ತಕವನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ. 2 ದಿನಗಳ ಹಿಂದಷ್ಟೇ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿತ್ತು. ಬಿಜೆಪಿ ನಾಯಕರು ಆ ಟ್ರೈಲರ್ ಅನ್ನು ಟ್ವಿಟ್ಟರ್ನಲ್ಲಿ ಶೇರ್ ಮಾಡಿ ಪ್ರಚಾರ ನೀಡಿದ್ದರು. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ವಿಜಯ್ ರತ್ನಾಕರ್ ಗುಟ್ಟೆ ಈ ಸಿನಿಮಾ ನಿರ್ದೇಶನ ಮಾಡಿದ್ದು, ಮನಮೋಹನ್ ಸಿಂಗ್ ಪಾತ್ರವನ್ನು ಅನುಪಮ್ ಖೇರ್ ನಿರ್ವಹಿಸಿದ್ದಾರೆ.
ಸಿನಿಮಾದ ಟ್ರೈಲರ್ ಬಗ್ಗೆ ಮಾತನಾಡಿರುವ ಹೆಚ್.ಡಿ. ದೇವೇಗೌಡ, ಬಹುಶಃ ಈ ಸಿನಿಮಾದ ಚಿತ್ರೀಕರಣ 3-4 ತಿಂಗಳ ಹಿಂದಷ್ಟೇ ಶುರುವಾಗಿತ್ತು. ಅದು ಹೇಗೆ ಈ ಸಿನಿಮಾ ಮಾಡಲು ಅನುಮತಿ ಸಿಕ್ಕಿತೋ ಗೊತ್ತಿಲ್ಲ. ಆ ಟೈಟಲ್ ಕೂಡ ಸೂಕ್ತವಾದುದಲ್ಲ. ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಎಂದು ಮನಮೋಹನ್ ಸಿಂಗ್ ಅವರಿಗೆ ಹೇಳುವುದು ಸರಿಯಲ್ಲ. ನಿಜ ಹೇಳಬೇಕೆಂದರೆ ನಾನು ಕೂಡ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಎಂದು ಅವರು ಹೇಳಿದ್ದಾರೆ.
1996ರ ಸಾರ್ವತ್ರಿಕ ಚುನಾವಣೆಯಲ್ಲಿ ಯಾವ ಪಕ್ಷಗಳೂ ಬಹುಮತ ಪಡೆಯಲಿಲ್ಲ. ಹಾಗಾಗಿ, ಯಾವ ಪಕ್ಷಕ್ಕೂ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ.ಆಗ ಸ್ಥಳೀಯ ಪಕ್ಷಗಳು ಹಾಗೂ ಕಾಂಗ್ರೆಸ್ ಬೆಂಬಲ ಸೂಚಿಸಿ 1996ರ ಜೂನ್ ರಿಂದ 1997 ಏಪ್ರಿಲ್ 21ರವರೆಗೂ ದೇವೇಗೌಡ ಅವರನ್ನು ದೇಶದ ಪ್ರಧಾನಮಂತ್ರಿಯಾಗಿ ಮಾಡಲಾಗಿತ್ತು. ನಂತರ ಕಾಂಗ್ರೆಸ್ ಬೆಂಬಲ ವಾಪಸ್ ಪಡೆದ ಹಿನ್ನಲೆಯಲ್ಲಿ ಅಧಿಕಾರದಿಂದ ಕೆಳಗಿಳಿಯಬೇಕಾಗಿ ಬಂದಿತ್ತು. ಹೀಗಾಗಿ, ದೇವೇಗೌಡರು ತಮ್ಮನ್ನು ಆ್ಯಕ್ಸಿಡೆಂಟಲ್ ಪಿಎಂ ಎಂದು ಕರೆದುಕೊಂಡಿದ್ದಾರೆ.