ಮಂಗಳೂರು,ಡಿ.3: ಶರೀಅತ್ ನಿಯಮ ಅಲ್ಲಾಹುವಿನ ನಿಯಮವಾಗಿದ್ದು ಶರೀಅತ್ ನಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ನಡಸಲೂ ಮುಸ್ಲಿಂ ಸಮುದಾಯ ಅವಕಾಶ ನೀಡುವುದಿಲ್ಲ ಎಂದು ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ. ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಎಚ್ಚರಿಕೆ ನೀಡಿದ್ದಾರೆ.
ಎಸ್ ಎಸ್ ಎಫ್ ,ಕೆಸಿಎಫ್, ಎಸ್ ವೈ ಎಸ್ ಮಂಗಳೂರಿನ ನೆಹರು ಮೈದಾನದ ತಾಜುಲ್ ಉಲಮಾ ವೇದಿಕೆಯಲ್ಲಿ ಹಮ್ಮಿಕೊಂಡ ಕನೆಕ್ಟ್ -2018 ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.
ಸೌಮ್ಯವಾದಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಂ ಜನರೊಂದಿಗೆ ಅತ್ಯಂತ ಸೌಮ್ಯ ರೀತಿಯಲ್ಲಿ ವರ್ತಿಸಿ ಇಸ್ಲಾಂ ಧರ್ಮದ ಸ್ನೇಹ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಭಯೋತ್ಪಾದನೆ, ಉಗ್ರವಾದ, ಕೋಮುವಾದ ಇಸ್ಲಾಂ ಧರ್ಮಕ್ಕೆ ಅಪರಿಚಿತ ವಾಗಿದ್ದು, ಮುಸ್ಲಿಮರು ಯಾವುದೇ ರೀತಿಯ ಆವೇಶಕ್ಕೊಳಗಾಗದೆ ಎಲ್ಲಾ ಸಮುದಾಯದ ಜನರೊಂದಿಗೆ ಉತ್ತಮ ರೀತಿಯಲ್ಲಿ ಸಹಬಾಳ್ವೆ ನಡೆಸಿದಾಗ ನಾಡಿನಾದ್ಯಂತ ಶಾಂತಿ, ಸೌಹಾರ್ದತೆ ನೆಲೆಸುವಂತೆ ಮಾಡಲು ಪಣ ತೊಡಬೇಕೆಂದು ಅವರು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ” ಜಗತ್ತಿನ ಯಾವುದೇ ಒಂದು ಸಂಸ್ಕೃತಿ ಯಲ್ಲಿ ದ್ವೇಷ ಕಲಿಸಲಾಗುತ್ತಿಲ್ಲ.
ಪರಸ್ಪರ ಪ್ರೀತಿ ವಿಶ್ವಾಸ ದ ಮೂಲಕ ಸಾಮರಸ್ಯದ ವಾತಾವರಣ ನಿರ್ಮಿಸುವುದನ್ನೇ ಎಲ್ಲಾ ಸಂಸ್ಕೃತಿ ಗಳು ಕಲಿಸಿವೆ.ಕೋಮುವಾದ ಯಾವುದೇ ಒಂದು ಧರ್ಮ , ಸಂಘಟನೆಗಳಿಗೆ ಸೀಮಿತವಲ್ಲ.ಇನ್ನೊಂದು ಸಮುದಾಯದ ಬಗ್ಗೆ ದ್ವೇಷ ಯಾವ ಸಮಯದಾಯದವರು ಇಟ್ಟರೂ ಅದು ಕೋಮುವಾದ ವಾಗಿದೆ.
ಸಂವಿಧಾನ ಮಾನವೀಯ ನೆಲೆಗಟ್ಟಿನಲ್ಲಿ ರಚನೆಯಾಗಿದೆ. ದೇಶದಲ್ಲಿ ಎಲ್ಲ ಧರ್ಮಗಳ ಜನರು ಒಂದೇ ಕುಟುಂಬದ ಸದಸ್ಯರಂತೆ ಬದುಕಬೇಕು. ಸಂವಿಧಾನದಲ್ಲಿ ಎಲ್ಲ ಧರ್ಮಗಳು ಸಮಾನ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.
ಇಸ್ಲಾಂ ಧರ್ಮ ಜಗತ್ತಿನಲ್ಲಿ ಶಾಂತಿ ಸಂದೇಶ ಸಾರಿದ ಅತ್ಯುತ್ತಮ ಧರ್ಮವಾಗಿದ್ದು,ಮುಸ್ಲಿಮರು ಸಹನೆಯ ಪ್ರತೀಕವಾಗಿದ್ದಾರೆಂದು ಅವರು ಅಭಿಪ್ರಾಯ ಪಟ್ಟರು.
ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಮಾತನಾಡಿ, ದಕ್ಷಿಣ ಕನ್ನಡ ಶಾಂತಿಯುತ ಜಿಲ್ಲೆಯಾಗಿದೆ. ಹಲವು ಮಂದಿ ಜಿಲ್ಲೆಯನ್ನು ಉದ್ರೇಕಗೊಳಿಸಲು ಯತ್ನಿಸಿದ್ದರೂ ಜಿಲ್ಲೆಯ ಜನತೆ ಶಾಂತಿಯುತವಾಗಿದ್ದರು. ಜಿಲ್ಲೆಗೆ ತಾನು ಸದಾ ಆಭಾರಿಯಾಗಿರುತ್ತೇನೆ. ಸಾಮುದಾಯಿಕ ಸಮ್ಮಿಲನ ಕಾರ್ಯಕ್ರಮ ನಿಜಕ್ಕೂ ಮಾದರಿಯಾಗಿದೆ ಎಂದರು.
ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಅಬ್ದುಲ್ಲಾ ಕುಂಞಿ ಯೆನೆಪೊಯ ಮಾತನಾಡಿ, ಕನೆಕ್ಟ್ 2018 ಸಾಮುದಾಯಿಕ ಸಮ್ಮಿಲನ ಸಮಾರಂಭ ದಲ್ಲಿ ದಾರುಲ್ ಅಮಾನ್ ವಸತಿ ಯೋಜನೆ ಮಹತ್ವಕಾರಿಯಾಗಿದೆ. ಸುಲ್ತಾನುಲ್ ಉಲಮಾ ಶೈಖುನಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಭಾರತ ದೇಶದಲ್ಲಿ ಅಷ್ಟೇ ಅಲ್ಲ ವಿಶ್ವದಲ್ಲಿಯೇ ಹೆಸರುಗಳಿಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಸುನ್ನೀ ಜಮೀಯ್ಯತುಲ್ ಉಲಮಾ ಕರ್ನಾಟಕ ಅಧ್ಯಕ್ಷ ತಾಜುಲ್ ಫುಖಹಾಅ ಶೈಖುನಾ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಅವರನ್ನು ಸನ್ಮಾನಿಸಲಾಯ್ತು.ಅಂತರರಾಷ್ಟ್ರೀಯ ಕುರ್ ಆನ್ ಪಾರಾಯಣದಲ್ಲಿ ಭಾರತವನ್ನು ಪ್ರತಿನಿಧಿಸಿದ ಹವ್ವಾ ಯು.ಟಿ. ಅವರ ಪರವಾಗಿ ಸಚಿವ ಯು.ಟಿ.ಖಾದರ್ ಅವರನ್ನು ಗೌರವಿಸಲಾಯ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನ್ನೀ ಜಮೀಯ್ಯತುಲ್ ಉಲಮಾ ಕರ್ನಾಟಕ ಅಧ್ಯಕ್ಷ ತಾಜುಲ್ ಫುಖಹಾಅ ಶೈಖುನಾ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ವಹಿಸಿದ್ದರು.ದ.ಕ.ಜಿಲ್ಲಾ ಸಂಯುಕ್ತ ಖಾಝಿ ಅಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್, ಮಂಜನಾಡಿ ಅಲ್ ಮದೀನ ಅಧ್ಯಕ್ಷ ಶರಫುಲ್ ಉಲಮಾ ಪಿ.ಎಂ.ಅಬ್ಬಾಸ್ ಮುಸ್ಲಿಯಾರ್, ಎಸ್ ವೈ ಎಸ್ ರಾಜ್ಯಾಧ್ಯಕ್ಷ ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ, ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ,ಶಾಫಿ ಸಅದಿ ಬೆಂಗಳೂರು, ಟಿ.ಎಂ.ಮುಹ್ಯದ್ದೀನ್ ಕಾಮಿಲ್ ಸಖಾಫಿ ತೋಕೆ, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್,ಯೆನೆಪೋಯ ವಿಶ್ವ ವಿದ್ಯಾನಿಲಯದ ಕುಲಪತಿ ಹಾಜಿ ವೈ.ಅಬ್ದುಲ್ಲ ಕುಂಞಿ,ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಜಿ ಯು.ಕೆ.ಮೋನು ಕಣಚೂರು, ಎಸ್.ಎಂ.ಆರ್. ಗ್ರೂಪ್ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಬಿ.ಎ.ಮೊಹಿದೀನ್ ಬಾವ, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್.ಮುಹಮ್ಮದ್, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಹಾಜಿ ಎನ್.ಎಸ್.ಕರೀಂ, ಶೇಖ್ ಬಾವ ಹಾಜಿ, ಹಬೀಬ್ ಕೋಯ,ಮೇಯರ್ ಬಾಸ್ಕರ ಮೊಯ್ಲಿ ಮೊದಲಾದವರು ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಮುಸ್ಲಿಂ ಸಂಯುಕ್ತ ಜಮಾಅತ್ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್ ಬುಖಾರಿ ದುಆಗೈದರು. ಎಸ್ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ ಅಬ್ದುರ್ರಶೀದ್ ಸಖಾಫಿ ಝೈನಿ ಕಾಮಿಲ್ ಸ್ವಾಗತಿಸಿದರು. ಎಸ್ವೈಎಸ್ ರಾಜ್ಯ ಸಮಿತಿ ಕಾರ್ಯದರ್ಶಿ ಎಂ.ಎ. ಸಿದ್ದೀಕ್ ಸಖಾಫಿ ಮೂಳೂರು ವಂದಿಸಿದರು. ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು.
ವರದಿ: ಕೆ.ಎ.ಅಬ್ದುಲ್ ಅಝೀಝ್ ಪುಣಚ