ಮಕ್ಕಾ: ಪವಿತ್ರ ಕಅಬಾ ಶರೀಫನ್ನು ಹೊದಿಸುವ ಕಿಸ್ವಾದ ನಿರ್ಮಾಣ ಪೂರ್ಣ ಗೊಂಡಿದ್ದು, ಅದರ ಸೂಕ್ಷ್ಮ ಪರಿಶೋಧನೆ ಕೂಡ ನಡೆಸಲಾಗಿದೆ ಎಂದು ಜಿದ್ದಾದ ಉಮ್ಮುಲ್ ಜೂದಿನ ಕಿಸ್ವಾ ಕಾರ್ಖಾನೆಯ ಡೈರೆಕ್ಟರ್ ಅಹ್ಮದ್ ಬಿನ್ ಮುಹಮ್ಮದ್ ಅಲ್ ಮನ್ಸೂರ್ ಹೇಳಿದ್ದಾರೆ.14 ಮೀ ಎತ್ತರ ಮತ್ತು 47 ಮೀಟರ್ ಅಗಲವನ್ನು ಹೊಂದಿರುವ ಕಿಸ್ವಾವನ್ನು ಕಪ್ಪು ರೇಷ್ಮೆ ಬಟ್ಟೆಯಲ್ಲಿ ಚಿನ್ನ-ಲೇಪಿತ ನೂಲಿನಿಂದ ತಯಾರಿಸಲಾಗುತ್ತಿದ್ದು, ಬಟ್ಟೆಯಲ್ಲಿ ಚಿತ್ರಗಳು ಮತ್ತು ಖುರ್‌ಆನ್ ಸೂಕ್ತಗಳ ರೇಖಾಚಿತ್ರಗಳಿಂದ ಅಲಂಕರಿಸಲಾಗಿದೆ.
ವಿಶೇಷ ಆಮದು ಮಾಡಿಕೊಂಡ ರೇಷ್ಮೆ ದಾರಗಳಿಂದ ಕಿಸ್ವಾವನ್ನು ತಯಾರಿಸಲಾಗುತ್ತದೆ. ಇನ್ನೂರ ಐವತ್ತು ನೌಕರರು ಒಂದು ವರ್ಷದಲ್ಲಿ ಕಿಸ್ವಾನಿರ್ಮಾಣವನ್ನು ಪೂರ್ಣಗೊ ಳಿಸುತ್ತಾರೆ.ಸಮ ಚದರ ಭಾಗಗಳಾಗಿ ತಯಾರಿಸಲಾಗುವ ಕಿಸ್ವಾವನ್ನು ಕಅಬಾಲಯಕ್ಕೆ ಹೊದಿಸಿದ ನಂತರ ಅದನ್ನು ಹೊಲಿದು ಸಂಪೂರ್ಣ ಹೊದಿಕೆಯಾಗಿ ಮಾರ್ಪಾಟು ಗೊಳಿಸಲಾಗುತ್ತದೆ. ಖುರ್‌ಆನ್ ಸೂಕ್ತಗಳ ರೇಖಾಚಿತ್ರ, ನೇಯ್ಗೆ, ಬಣ್ಣ ಹಚ್ಚುವಿಕೆಗಳಿಗೆ ನುರಿತ ತರಬೇತಿ ಪಡೆದ ತಜ್ಞರ ತಂಡವನ್ನು ನೇಮಕಗೊಳಿಸಲಾಗುತ್ತದೆ. 16 ಮೀಟರ್ ಉದ್ದವಿರುವ ವಿಶ್ವದ ಅತಿ ದೊಡ್ಡ ನೇಯ್ಗೆ ಯಂತ್ರವನ್ನು ಈ ಕಾರ್ಯಕ್ಕಾಗಿ ಉಪಯೋಗಿಸಲಾಗುತ್ತದೆ.
ಪ್ರತಿ ವರ್ಷ ದುಲ್ಹಜ್ ಒಂದರಂದು ಬಹಳ ಸಡಗರದಿಂದ ಕಿಸ್ವಾ ಹಸ್ತಾಂತರ ಕಾರ್ಯ ನಡೆಯುತ್ತದೆ. ಪವಿತ್ರ ಹಜ್‌ನ ಮುಖ್ಯ ಕರ್ಮವಾದ ಅರಫಾ ಸಂಗಮಕ್ಕಾಗಿ ಹಜ್ಜಾಜ್‌ಗಳು ಅರಫಾ ಭೂಮಿಯಲ್ಲಿ ಸಂಗಮಿಸುವ ದುಲ್ಹಜ್ 9ರಂದು ಬೆಳಗ್ಗೆ ಹೊಸ ಕಿಸ್ವಾವನ್ನು ಕಅಬಾಲಯಕ್ಕೆ ಹೊಂದಿಸಲಾಗುತ್ತದೆ. ಬೆಳಿಗ್ಗೆ ಪ್ರಾರಂಭವಾಗುವ ಕಾರ್ಯಕ್ರಮ ಸಂಜೆಯ ವರೆಗೆ ಮುಂದುವರಿಯುತ್ತದೆ.
ಬದಲಾಯಿಸಿದ ಹಳೆಯ ಕಿಸ್ವಾದ ತುಂಡುಗಳನ್ನು ಸೌದಿ ಅರೇಬಿಯಾಗೆ ಭೇಟಿ ನೀಡುವ ಗಣ್ಯ ವ್ಯಕ್ತಿಗಳಿಗೆ ಉಡುಗೋರೆಯಾಗಿ ನೀಡಲಾಗುತ್ತದೆ. ವಿಶುದ್ದ ಹರಂ ಶರೀಫ್‌ಗೆ ಆಗಮಿಸುವ ಸತ್ಯ ವಿಶ್ವಾಸಿಗಳ ಅಂತರಾಳದಲ್ಲಿ ಅಲಿಸಲಾಗದೇ ಸ್ಮರಣೆಯಾಗಿ ಉಳಿಯಲಿದೆ ಕಪ್ಪುರೇಷ್ಮೆ ಬಟ್ಟೆಯ ಕಿಸ್ವಾ ಹೊದಿಸಲ್ಪಟ್ಟ ಕಅಬಾಲಯ.