ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಗೊಂದಲಗಳು ಹಾಗೂ ಅವೈಜ್ಞಾನಿಕ ಕ್ರಮಗಳನ್ನು ವಿರೋಧಿಸಿ, ಎಸ್ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಮತ್ತು ಇದಕ್ಕೆ ಕಾರಣಕರ್ತರಾದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, SKSSF ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದಂತೆ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ರಾಜ್ಯದ ಎಲ್ಲಾ ವಲಯ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನವದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸುವ ಉದ್ದೇಶದಿಂದ ಈ ಪ್ರತಿಭಟನೆಯನ್ನು ಆಯೋಜಿಸಲಾಗಿದ್ದು, ರಾಜ್ಯದ ಎಲ್ಲಾ ವಲಯ ಸಮಿತಿಗಳು ತಮ್ಮ ವ್ಯಾಪ್ತಿಯ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿವೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ SKSSF ಕರ್ನಾಟಕ ರಾಜ್ಯ ಉಪಾಧ್ಯಕ್ಷ ಇಕ್ಬಾಲ್ ಬಾಳಿಲ ಅವರು, ಎಸ್ಐಆರ್ ಪ್ರಕ್ರಿಯೆಯು ಆರಂಭದಿಂದಲೇ ಹಲವು ಗೊಂದಲಗಳು ಹಾಗೂ ವಿವಾದಗಳಿಗೆ ಕಾರಣವಾಗಿದ್ದು, SKSSF ಮೊದಲಿನಿಂದಲೂ ಈ ಪ್ರಕ್ರಿಯೆಯ ವಿರುದ್ಧ ತನ್ನ ವಿರೋಧವನ್ನು ವ್ಯಕ್ತಪಡಿಸುತ್ತಾ ಬಂದಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಅಂತಿಮ ಮತದಾರರ ಪಟ್ಟಿ ಹಾಗೂ ದೇಶದ ವಿವಿಧೆಡೆ ಕರಡು ಮತದಾರರ ಪಟ್ಟಿಗಳು ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ, ಕೋಟ್ಯಂತರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಆರೋಪಗಳು ಗಂಭೀರ ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ. ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಅರ್ಹ ಭಾರತೀಯ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನ ನಡೆಯಬಾರದು ಎಂದು ಅವರು ಒತ್ತಾಯಿಸಿದ್ದಾರೆ.
“ಮತದಾನದ ಹಕ್ಕು ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ. ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ತನ್ನ ಮತದಾನದ ಹಕ್ಕನ್ನು ಚಲಾಯಿಸುವ ಅವಕಾಶ ದೊರೆಯಬೇಕು. ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಜನಸಾಮಾನ್ಯರನ್ನು ಗೊಂದಲಕ್ಕೀಡುಮಾಡುವ ಹಾಗೂ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಅವೈಜ್ಞಾನಿಕ ಕ್ರಮಗಳಿಗೆ ತಕ್ಷಣ ಕಡಿವಾಣ ಹಾಕಬೇಕು. ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದಲೇ SKSSF ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ” ಎಂದು ಇಕ್ಬಾಲ್ ಬಾಳಿಲ ತಿಳಿಸಿದ್ದಾರೆ.
ಎಸ್ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದರೊಂದಿಗೆ, ಈ ಪ್ರಕ್ರಿಯೆಯಲ್ಲಿನ ಲೋಪಗಳಿಗೆ ಹೊಣೆಗಾರಿಕೆ ನಿಗದಿಪಡಿಸಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬುದು ಪ್ರತಿಭಟನೆಯ ಪ್ರಮುಖ ಬೇಡಿಕೆಗಳಾಗಿವೆ ಎಂದು ಅವರು ವಿವರಿಸಿದ್ದಾರೆ.
SKSSF ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದಂತೆ ಎಲ್ಲಾ ವಲಯ ಸಮಿತಿಗಳು ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಸಿದ್ಧತೆ ನಡೆಸುತ್ತಿವೆ. ಪ್ರಜಾಪ್ರಭುತ್ವದ ಹಕ್ಕುಗಳ ರಕ್ಷಣೆಯ ಈ ಹೋರಾಟದಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ತಮ್ಮ ವಲಯ ಕೇಂದ್ರಗಳಲ್ಲಿ ನಡೆಯುವ ಪ್ರತಿಭಟನೆಗೆ ಬೆಂಬಲ ನೀಡಬೇಕು ಎಂದು ಇಕ್ಬಾಲ್ ಬಾಳಿಲ ಅವರು ಮನವಿ ಮಾಡಿದ್ದಾರೆ.















ಇನ್ನಷ್ಟು ಸುದ್ದಿಗಳು
ವಲಸಿಗರಿಗೆ ಶುಭ ಸುದ್ದಿ: ಜಿದ್ದಾ–ಕೋಝಿಕ್ಕೋಡ್ ನಡುವೆ ಫ್ಲೈನಾಸ್ ನೇರ ವಿಮಾನ ಸೇವೆ ಆರಂಭ
ಸಮಸ್ತ ಉಪಾಧ್ಯಕ್ಷ ಸಯ್ಯಿದ್ ಅಲಿ ಬಾಫಖಿ ತಂಙಳ್ ವಫಾತ್
ದಕ್ಷಿಣ ಕನ್ನಡ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ ಬಹರೈನ್: ನೂತನ ಪದಾಧಿಕಾರಿಗಳು
ಇಕ್ಬಾಲ್ ಬಾಳಿಲರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಹಾಲು–ಮೊಸರಿನ ದರ ಏರಿಕೆ: ಪರ್ಯಾಯದ ಹೆಸರಿನಲ್ಲಿ ಕಲಬೆರಕೆಯ ಅಪಾಯ
ಅಲ್ ಮದೀನದಲ್ಲಿ ವಿಜೃಂಭಿಸಿದ ವಿದ್ಯಾರ್ಥಿಗಳ ಸಾಹಿತ್ಯ–ಸಾಂಸ್ಕೃತಿಕ ಸಂಗಮ ‘ಗುಲ್ಶನ್’
ಮೀರಾಸ್ ಎಜು ಗೋಲ್ – ನೂತನ ಕಾರ್ಯನಿರ್ವಾಹಕ ಸಮಿತಿ ಅಸ್ತಿತ್ವಕ್ಕೆ
ಜೈಲು ಕಂಬಿಗಳ ಹಿಂದೆ ನರಳುವ ಜೀವಗಳು: ಕರಾಳ ಮಾದಕವಸ್ತು ಜಾಲದ ಕ್ರೂರ ಮುಖ
ಯೆನೆಪೋಯ ವಿಶ್ವವಿದ್ಯಾಲಯದಿಂದ ಕಾಂತಪುರಂ ಉಸ್ತಾದರಿಗೆ ಗೌರವ ಡಾಕ್ಟರೇಟ್
ಇಂದು ಕಾಪುವಿನಲ್ಲಿ ಐತಿಹಾಸಿಕ ಸಮಸ್ತ ತಾತ್ವಿಕ ಸಮಾವೇಶ- ಎಸ್ಸೆಸ್ಸೆಫ್ ಕಾಪು ಡಿವಿಷನ್ ಯಶಸ್ವಿಗೆ ಕರೆ