ಕೋಝಿಕ್ಕೋಡ್: ಯೆಮೆನ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ನಿಮಿಷಪ್ರಿಯ ಅವರ ಬಿಡುಗಡೆಗಾಗಿ ಸಂಧಾನ ಮಾತುಕತೆಗಳು ಮುಂದುವರಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಗೊಳ್ಳುತ್ತಿರುವ ಕೆಲವು ದ್ವೇಷ ಪೋಸ್ಟರ್ಗಳು ಇದಕ್ಕೆ ಅಡ್ಡಿಯಾಗಿ ಪರಿಣಮಿಸಿದೆ.
ಇದರ ಬಗ್ಗೆ , ಯೆಮೆನ್‌ನ ಸೂಫೀ ವಿದ್ವಾಂಸರಾದ ಹಬೀಬ್ ಉಮರ್ ಬಿನ್ ಹಫೀಝ್ ಅವರ ಸಂಸ್ಥೆಯಲ್ಲಿ ಕಲಿತ ಜವಾದ್ ಮುಸ್ತಫಾವಿ ತಮ್ಮ ಫೇಸ್‌ಬುಕ್ ಪುಟದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಅವರ ಫೇಸ್‌ಬುಕ್ ಪೋಸ್ಟ್‌ನ ಪೂರ್ಣ ರೂಪ
ಆತ್ಮೀಯ ಮಾಧ್ಯಮ ಮಿತ್ರರೇ, ಕಾರ್ಯಕರ್ತರೇ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತೊಡಗಿಸಿಕೊಂಡಿರುವ ಸಹೋದರ ಸಹೋದರಿಯರೇ…
ನಿಮಿಷಾ ಪ್ರಿಯಾ ಪ್ರಕರಣದಲ್ಲಿ, ಕಾಂತಪುರಂ ಉಸ್ತಾದ್ ಅವರ ಮಧ್ಯಪ್ರವೇಶವು ಮರಣದಂಡನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಮರಣದಂಡನೆಗೆ ಕೇವಲ ಗಂಟೆಗಳು ಮಾತ್ರ ಉಳಿದಿರುವಾಗ ಉಸ್ತಾದ್ ಮೂಲಕ ಲಭಿಸಿದ ಆದೇಶವು ಒಂದು ದೊಡ್ಡ ಪರಿಹಾರವಾಗಿತ್ತು. ಆದರೆ ಮರಣದಂಡನೆಯನ್ನು ರದ್ದುಗೊಳಿಸಲು ಮತ್ತು ಬಿಡುಗಡೆಯನ್ನು ಸಾಧ್ಯವಾಗಿಸಲು ಇನ್ನೂ ಅನೇಕ ಅಡೆತಡೆಗಳನ್ನು ನಿವಾರಿಸಬೇಕಾಗಿದೆ. ಕ್ರೂರವಾಗಿ ಹತ್ಯೆಗೀಡಾದ ಸಹೋದರನ ಸಂಬಂಧಿಕರು ಮತ್ತು ಸ್ನೇಹಿತರ ನೋವು ನಮ್ಮ ಕಲ್ಪನೆಗೂ ಮೀರಿದ್ದು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ಮರಣದಂಡನೆಯು ಅವರು ಎಂಟು ವರ್ಷಗಳ ಕಾಲ ನಡೆಸಿದ ಕಾನೂನು ಹೋರಾಟದ ವಿಜಯವಾಗಿದೆ. ತಮ್ಮ ಸಹೋದರನ ರಕ್ತಕ್ಕೆ ಬದಲಾಗಿ ಅವರು ಪಡೆದ ನ್ಯಾಯ. ಅದರಲ್ಲಾಗಿದೆ ನಾವು ರಾಜಿ ಮತ್ತು ಕ್ಷಮೆಯನ್ನು ಕೇಳುತ್ತಿರುವುದು. ಅದು ಎಂದಿಗೂ ನಮ್ಮ ಹಕ್ಕಲ್ಲ. ಕರುಣಾಳು ಮನಸ್ಸು ಮತ್ತು ಶ್ರೇಷ್ಠ ಸ್ವಭಾವದ ಒಡಯರಾದ ಯೆಮೆನ್ನರ ಔದಾರ್ಯವನ್ನು ನಾವು ಬೇಡುತ್ತಿದ್ದೇವೆ ಅಷ್ಟೇ.
ಇಂತಹ ಸಂಕೀರ್ಣ ಪ್ರಕರಣದಲ್ಲಿ, ಕುಟುಂಬದೊಂದಿಗೆ ಮಾತುಕತೆ ನಡೆಸಿ ಅವರನ್ನು ಕ್ಷಮಿಸಲು ಸಿದ್ಧಗೊಳಿಸುವುದು ಸಣ್ಣ ಪ್ರಯತ್ನವಲ್ಲ. ಶೈಖ್ ಹಬೀಬ್ ಉಮರ್ ಬಿನ್ ಹಫೀಝ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕೆಲಸವು ಅತ್ಯಂತ ಕಷ್ಟಕರವಾದ ಕೆಲಸವಾಗಿದೆ. ಬಲವಾದ ಅಭಿಪ್ರಾಯ ವ್ಯತ್ಯಾಸಗಳಿರುತ್ತವೆ ಮತ್ತು ಅವುಗಳನ್ನು ಸಮನ್ವಯಗೊಳಿಸುವುದು ಕಷ್ಟಕರವಾಗಿರುತ್ತದೆ ಎಂದು ನಮಗೆ ಊಹಿಸಬಹುದಾಗಿದೆ. ಈ ಪ್ರಯತ್ನಗಳು ಸಾಮಾಜಿಕ ಮಾಧ್ಯಮದ ಮೂಲಕ ನಡೆಯುತ್ತಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಮೂಲಭೂತ ವಾಸ್ತವವೆಂದರೆ ನಾವು ಫೇಸ್‌ಬುಕ್‌ನಲ್ಲಿ ನೋಡುವಂಥದ್ದಲ್ಲ. ನಮ್ಮ ಚಲನೆಗಳು ಭರವಸೆಯ ರೀತಿಯಲ್ಲಿ ಪ್ರಗತಿಯಲ್ಲಿವೆ. ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಪ್ರಾಯೋಗಿಕ ಅಡೆತಡೆಗಳಿವೆ. ಈ ಮಧ್ಯೆ, ಯಾವುದೇ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಕಂಡುಬರುವ ಗದ್ದಲ ಮತ್ತು ವಿವಾದಗಳನ್ನು ಅನುಸರಿಸುವ ಮೂಲಕ ನಾವು ಅಡೆತಡೆಗಳನ್ನು ಸೃಷ್ಟಿಸಬಾರದು. ಮಲಯಾಳಂನ ಎರಡು ಪ್ರಮುಖ ಮಾಧ್ಯಮಗಳ ಕೆಲಸವು ಹೆಚ್ಚಾಗಿ ಈ ರೀತಿಯಲ್ಲೇ ನಡೆಯುತ್ತಿದೆ. ಸಾಮಾನ್ಯ ಭಾವನೆಗಳನ್ನು ವ್ಯಕ್ತಪಡಿಸುವ ಯೆಮೆನ್‌ನಲ್ಲಿರುವ ನಮ್ಮ ಸಹೋದರರ ಫೇಸ್‌ಬುಕ್ ಕಾಮೆಂಟ್‌ಗಳು ಮತ್ತು ಇನ್‌ಬಾಕ್ಸ್‌ಗಳಿಗೆ ಹೋಗಿ ಬೆಂಕಿಗೆ ತುಪ್ಪ ಸುರಿಯುವವರ ಬಗ್ಗೆ ಹೇಳಬೇಕಾಗಿಲ್ಲ ತಾನೇ.
ಷರಿಯಾ ಕಾನೂನಿನ ಪ್ರಕಾರ ನಮಗೆ ಒಪ್ಪಿಗೆ ಅಗತ್ಯವಿರುವ ಎಲ್ಲರೂ ಚರ್ಚೆಗಳಲ್ಲಿ ನಮ್ಮೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದಾರೆ. ಸಂಧಾನದ ಕಾರ್ಯದಲ್ಲಿ ಮಾತ್ರ ಅಂತಿಮ ನಿರ್ಧಾರ ಲಭಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ನಮಗೆ ಇನ್ನಷ್ಟು ಶುಭ ಸುದ್ದಿ ಲಭಿಸಲಿದೆ. ತಾಳ್ಮೆಯಿಂದಿರಿ. ಇದಕ್ಕೆ ಸಂಬಂಧಿಸಿದ ಪ್ರತಿಯೊಂದು ನಡೆಯನ್ನೂ ಮತ್ತು ಅದರ ಫಲಿತಾಂಶಗಳನ್ನು ಆಯಾ ಸಮಯದಲ್ಲಿ ಜವಾಬ್ದಾರಿಯುತ ಜನರು ತಿಳಿಸಲಿದ್ದಾರೆ.
ಕಾಂತಪುರಂ ವಿರೋಧವನ್ನೇ ಉಸಿರಾಗಿಸಿಕೊಂಡು ಓಡಾಡುವವರನ್ನು ಮನವರಿಕೆ ಮಾಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ.
ಚಂದ್ರನನ್ನು ಎರಡು ಭಾಗ ಮಾಡಿ ತೋರಿಸಿದ ನಂತರವೂ ಮನವರಿಕೆಯಾಗದ ಅಬೂ ಜಹಲ್‌ಗಳ ಮುಂದೆ, ಬೇರೆ ಯಾರಿಗೂ ಲಭಿಸದ ನ್ಯಾಯಾಲಯದ ತೀರ್ಪಿನ ಪ್ರತಿಯೊಂದಿಗೆ ಬಂದ ಉಸ್ತಾದ್‌ರನ್ನು ಮನವರಿಕೆ ಮಾಡಿಕೊಳ್ಳಲಾಗದವರು ಯಾವ ಲೆಕ್ಕ.
ಅವರನ್ನು ಮನವರಿಕೆ ಮಾಡಿ ಬೆಂಬಲ ಪಡೆಯುವುದು ನಮ್ಮ ಗುರಿಯಲ್ಲ. ದಯವಿಟ್ಟು ಪ್ರಬುದ್ಧ ಮಲಯಾಳಿಗಳು ಮತ್ತು ಮಾಧ್ಯಮಗಳು ಸ್ವಲ್ಪ ಜಾಗರೂಕರಾಗಿರಬೇಕು. ಈ ವಿಷಯದಲ್ಲಿ ಯಾವುದೇ ಪಾತ್ರವಿಲ್ಲದ ಜನರ ಅನಗತ್ಯ ಮಧ್ಯಪ್ರವೇಶಗಳನ್ನು ಪ್ರಚಾರಪಡಿಸುವಲ್ಲಿ ತೊಡಗಿಸಿಕೊಳ್ಳುವುದು ಹಾಸ್ಯಾಸ್ಪದ. ನಿರ್ಲಕ್ಷಿಸಬೇಕಾದದ್ದನ್ನು ನಿರ್ಲಕ್ಷಿಸಲು ಸಾಧ್ಯವಾಗುವುದೇ ಪ್ರಬುದ್ಧತೆ. ಕಾಲವೇ ಅವರಿಗೆ ಉತ್ತರಗಳನ್ನು ನೀಡುತ್ತದೆ. ಉಸ್ತಾದ್ ಅವರು ವಹಿಸಿಕೊಂಡ ಜವಾಬ್ದಾರಿಗಳನ್ನು ಸುಂದರವಾಗಿ ಪೂರೈಸಿದ್ದಾರೆ. ಅವರು ಅದನ್ನು ಮುಂದುವರಿಸುತ್ತಾರೆ. ಮನವರಿಕೆ ಮಾಡಿಕೊಳ್ಳಬೇಕಾದ ಜನರಿಗೆ ಅದೆಲ್ಲವೂ ಸಂಪೂರ್ಣವಾಗಿ ಮನವರಿಕೆಯಾಗಿದೆ. ಅವರೊಂದಿಗೆ ಇಲ್ಲದಿರುವವರು ಕನಿಷ್ಠ ಉಸ್ತಾದ್ ಅವರ ಹಾದಿಯಲ್ಲಿ ಕಲ್ಲು ಮತ್ತು ಮುಳ್ಳುಗಳನ್ನು ಹರಡುವ ಕಾರ್ಯಕ್ರಮವನ್ನು ನಿಲ್ಲಿಸಬೇಕಾಗಿದೆ.
ಜವಾದ್ ಮುಸ್ತಫಾವಿ


