ಯೆಮೆನ್: ಯೆಮೆನ್ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಮಲಯಾಳಿ ನರ್ಸ್ ನಿಮಿಷಪ್ರಿಯ ಅವರ ಬಿಡುಗಡೆ ಪರಿಶ್ರಮಗಳಿಗೆ ಸಂಘಟಿತವಲ್ಲದ ಅಭಿಯಾನಗಳು ಮತ್ತು ವೀಡಿಯೊಗಳು ಅಡ್ಡಿಯಾಗಿವೆ. ಇತ್ತೀಚೆಗೆ ಪ್ರಚಾರಗೊಂಡ ಇವಾಂಚಲಿಸ್ಟ್ ಡಾ. ಕೆ ಎ ಪೌಲ್ ಅವರ ವೀಡಿಯೊದಲ್ಲಿ ನಿಮಿಷಪ್ರಿಯಾ ಅವರನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇದು ಹತ್ಯೆಯಾದ ತಲಾಲ್ ಕುಟುಂಬವನ್ನು ಕೆರಳಿಸಿದೆ. ತಲಾಲ್ ಅವರ ಸಹೋದರ ಈ ಹೇಳಿಕೆಯನ್ನು ನಿರಾಕರಿಸಿದ್ದಾರೆ.
ಇವಾಂಚಲಿಸ್ಟ್ ಮತ್ತು ಗ್ಲೋಬಲ್ ಪೀಸ್ ಇನ್ಶ್ಯೇಟಿವ್ ಸಂಘಟನೆ ಸಂಸ್ಥಾಪಕರಾದ ಡಾ. ಕೆ ಎ ಪಾಲ್, ನಿಮಿಷಪ್ರಿಯಾ ಅವರ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ ಮತ್ತು ಅವರು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ ಎಂದು ಹೇಳುವ ವೀಡಿಯೊವನ್ನು ಬಿಡುಗಡೆ ಮಾಡಿದ್ದರು. ಇದಕ್ಕೆ ಯಾವುದೇ ಪೋಷಕ ದಾಖಲೆಗಳು ಅಥವಾ ಪುರಾವೆಗಳಿಲ್ಲ. ಈ ವೀಡಿಯೋವನ್ನು ಅವಲಂಬಿಸಿ ಕೆಲವು ಮಾಧ್ಯಮಗಳು ಪ್ರಚಾರಗಿಟ್ಟಿಸುವ ಉದ್ದೇಶದಿಂದ ನಿಮಿಷಪ್ರಿಯ ಬಿಡುಗಡೆ ಎಂದು ವರದಿ ಮಾಡಿತ್ತು.
“ಇದೆಲ್ಲವೂ ನಕಲಿ ಸುದ್ದಿ ಮತ್ತು ಶಿಕ್ಷೆಯನ್ನು ಜಾರಿಗೆ ತರಲು ನಾವು ಕಾಯುತ್ತಿದ್ದೇವೆ” ಎಂದು ತಲಾಲ್ ಅವರ ಸಹೋದರ ಅಬ್ದುಲ್ ಫತ್ತಾಹ್ ಮೆಹ್ದಿ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಉಸ್ತಾದ್ ಅವರ ಕೋರಿಕೆಯ ಮೇರೆಗೆ ಯೆಮೆನ್ನಲ್ಲಿನ ಸೂಫೀ ವಿದ್ವಾಂಸರಾದ ಶೈಖ್ ಹಬೀಬ್ ಉಮರ್ ಬಿನ್ ಹಫೀಝ್ ಅವರ ಮಧ್ಯಸ್ಥಿಕೆಯಿಂದಾಗಿ ಕಳೆದ 16 ರಂದು ಜಾರಿಯಾಗಬೇಕಿದ್ದ ನಿಮಿಷಪ್ರಿಯ ಅವರ ಗಲ್ಲುಶಿಕ್ಷೆಯನ್ನು ಮುಂದೂಡುವಲ್ಲಿ ಯಶಸ್ವಿಯಾಗಿದ್ದರು.
ಗಲ್ಲುಶಿಕ್ಷೆಗೆ ಬದಲಾಗಿ ‘ದಿಯಾ’ಧನವನ್ನು ಸ್ವೀಕರಿಸಿ, ಹಂತಕರಿಗೆ ಕ್ಷಮಾದಾನ ನೀಡುವ ಇಸ್ಲಾಮಿಕ್ ಶರೀಅತ್ತಿನಲ್ಲಿರುವ ಮಾನವೀಯ ನಿಲುವಿನ ಬಗ್ಗೆ ಮೃತ ತಲಾಲ್ ಅವರ ಕುಟುಂಬಕ್ಕೆ ಮನವರಿಕೆ ಮಾಡಿಕೊಡಲು ಯೆಮೆನ್ನ ಸೂಫೀ ವಿದ್ವಾಂಸರ ನೇತೃತ್ವದ ನಿಯೋಗವು ಕಠಿಣ ಶ್ರಮವನ್ನು ಮುಂದುವರಿಸಿದೆ.
ಆದರೆ, ಕಾಂತಪುರಂ ಉಸ್ತಾದರ ಮಧ್ಯಪ್ರವೇಶವನ್ನು ಸಹಿಸದ ಕೆಲವು ಕೇರಳೀಯ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಲಾಲ್ ಕುಟುಂಬವನ್ನು ಮತ್ತಷ್ಟು ಕೆರಳಿಸುವ ಪೋಸ್ಟ್ಗಳನ್ನು ಪ್ರಚಾರಪಡಿಸಿ, ಬಿಡುಗಡೆ ಅಭಿಯಾನಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಈ ಕಿಡಿಗೇಡಿಗಳ ಪೈಕಿ ಕಳ್ಳ ತ್ವರೀಕತ್ ಮತ್ತು ಸಲಫಿ ವಿಭಾಗ ಒಗ್ಗಟ್ಟಾಗಿದೆ. ಇದರಿಂದಾಗಿ ಸಂಧಾನ ಪ್ರಕ್ರಿಯೆಗೆ ಹಿನ್ನಡೆಯಾಗಿದೆ ಎಂದು ತಿಳಿದುಬಂದಿದೆ. ಇದು ಮುಂದಿನ ಚರ್ಚೆಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದು ಕಳವಳಕಾರಿಯಾಗಿದೆ.


