janadhvani

Kannada Online News Paper

ಕಾಟಿಪಳ್ಳ: ಖಾದರ್ ಉಸ್ತಾದ್ ಇನ್ನು ನೆನಪು ಮಾತ್ರ

✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ

ಖಾದರ್ ಉಸ್ತಾದ್ ಎಷ್ಟು ಭಾಗ್ಯವಂತರು! ಅದನ್ನು ವರ್ಣಿಸಲು ಸಾಧ್ಯವಿಲ್ಲ. ಮೇ 14 ರ ದ್ಸುಲ್ ಕ‌ಅ್‌ದ್ 17 ಬುಧವಾರ ಅಸ್ತ ಗುರುವಾರ ಅರ್ಧ ರಾತ್ರಿ ಅಲ್ಲಾಹನೆಡೆಗೆ ಯಾತ್ರೆ ಯಾದ ಕಾಟಿಪಳ್ಳ ಖಾದರ್ ಉಸ್ತಾದರ ಬಗ್ಗೆ ಊರವರಿಗೆ ಹೇಳಿದಷ್ಟು ಮುಗಿಯದ ಕಥೆಗಳಿವೆ. ಎಲ್ಲರ ಬಾಯಲ್ಲಿಯೂ ಅವರ ಗುಣಗಾನ ಕೇಳುವಾಗ ಅವರೆಷ್ಟು ಭಾಗ್ಯವಂತರು ಎಂದು ಅರ್ಥವಾಗುತ್ತದೆ. ಅವರ ಮರಣ ವಾರ್ತೆ ಹಬ್ಬುತ್ತಿದ್ದಂತೆ ಅವರ ಮನೆಯತ್ತ ಜನಸಾಗರವೇ ಹರಿದು ಬಂತು.

ಎಲ್ಲರ ಬಾಯಲ್ಲಿಯೂ ಅವರ ಬಗ್ಗೆ ಒಳ್ಳೆಯದೇ ಅಭಿಪ್ರಾಯ. ಜನರು ಅವರ ಬಗ್ಗೆ ಹೇಳುವ ಒಳಿತುಗಳೇ ಅವರ ಜೀವನದ ಶುದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ. ಆಗಮಿಸಿದವರ ಪೈಕಿ ಬಹುತೇಕ ಹಿರಿಯರು ಇವರು ನಮ್ಮ ಉಸ್ತಾದ್ ಎಂದು ಅಭಿಮಾನ ದಿಂದ ಹೇಳುತ್ತಿದ್ದರು. ಯಾರಿಗೂ ನೋವು ನೀಡದೆ ಕಳಂಕ ಮುಕ್ತವಾಗಿ ಎಂಬತ್ತೈದು ವರ್ಷ ಜೀವಿಸಿದ ಅವರ ಜೀವನ ನಮಗೆಲ್ಲರಿಗೂ ಮಾದರಿಯಾಗಬೇಕು.

ಅವರ ಮೂರನೇ ಸ್ಮರಣೆಯ ದಿನ ಅವರ ಕುಟುಂಬಸ್ಥರು ಅವರ ಮೇಲೆ ಓದಿ ಮುಗಿಸಿದ ಖುರ್‌ಆನ್ ಹದಿನೇಳು ಖತಮ್ ಗಳು. ಲಕ್ಷಾಂತರ ತ‌ಹ್‌ಲೀಲ್ ಗಳು. ಅವರಿಗಾಗಿ ರಾಜ್ಯಾದ್ಯಂತ ದುಆ ಗಳು, ಮಜ್ಲಿಸ್ ಗಳು ನಡೆದವು. ಇವೆಲ್ಲವೂ ಗಳಿಸಲು ಅವರು ದೊಡ್ಡ ವಾಗ್ಮಿ ಆಗಿರಲಿಲ್ಲ, ಸಮುದಾಯಕ್ಕೆ ನಾಯಕತ್ವ ನೀಡಿದ ವಿದ್ವಾಂಸರೂ ಅಲ್ಲ. ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡ ಪ್ರಭಾವಿ ನಾಯಕನೂ ಅಲ್ಲ. ಸಾಧಾರಣ ಮಸೀದಿಯಲ್ಲಿ ಬಾಂಗ್ ಕರೆ ನೀಡುವ ಮುಅ‌ದ್ಸಿನ್ ಮಾತ್ರ ಆಗಿದ್ದರು. ಆದರೂ ಅವರಿಗಾಗಿ ಎಲ್ಲಾ ಕಡೆ ದುಆಗಳು, ಮಜ್ಲಿಸ್‌ಗಳು ನಡೆಸಿದ್ದಾರೆ ಎಂದರೆ ಅದಕ್ಕೆ ಕಾರಣ ಅವರ ಎರಡು ಮಕ್ಕಳು ಆಲಿಮ್ ಗಳಾಗಿದ್ದರು ಎಂಬ ಸಬೂಬಾಗಿತ್ತು. ಸಾಧಾರಣ ಆಲಿಮ್ ಗಳಲ್ಲ. ಸುನ್ನತ್ ಜಮಾಅತ್ ಗಾಗಿ ದುಡಿಯುವ, ಕಾರ್ಯಾಚರಿಸುವ ಆಲಿಮ್ ಗಳಾಗಿ ಸಮಾಜದಲ್ಲಿ ಗುರುತಿಸಲ್ಪಟ್ಟವರು. ಇತರ ಮಕ್ಕಳನ್ನು ಸುನ್ನತ್ ಜಮಾಅತ್ ಸಂಘಟನೆಯ ಗರಡಿಯಲ್ಲಿ ಬೆಳೆಸಿದರು. ಹೆಣ್ಣು ಮಕ್ಕಳನ್ನು ಸುನ್ನತ್ ಜಮಾಅತ್ ನಲ್ಲಿ ಕಾರ್ಯಾಚರಿಸುವವರಿಗೆ ವರಿಸಿ ಕೊಟ್ಟರು. ಅವರ ಈ ನಡತೆಯು ಅವರ ಮರಣ ಬಳಿಕ ಖುರ್‌ಆನ್,ತಹ್ಲೀಲ್,ದುಆ ರೂಪದಲ್ಲಿ ಮೂಡಿ ಬಂದಿದೆ. ಅವರ ಈ ವರ್ತನೆ ನಮಗೆಲ್ಲರಿಗೂ ಮಾದರಿಯಾಗಿದೆ. ಮಕ್ಕಳು ದೀನಿ ಹಾದಿಯಲ್ಲಿ ಬೆಳೆಸಿದರೆ ನಮ್ಮ ಮರಣ ಬಳಿಕ ಅದರ ಉಪಕಾರ ಸಿಗುತ್ತದೆ ಎಂಬುದು ಖಾದರ್ ಉಸ್ತಾದ್ ಸಾಕ್ಷಿಯಾಗಿ ನಿಲ್ಲುತ್ತಾರೆ.

ಕಿರಿಯ ಮಗ ಫಾರೂಖ್ ಸಖಾಫಿಯವರು ಕೃಷ್ಣಾಪುರ ಜಮಾಅತ್ ‌ನಲ್ಲಿ ಮುದರ್ರಿಸಾಗಿದ್ದಾರೆ. ಅವರು ಮುತ‌ಅಲ್ಲಿಮ್ ಗಳಿಗೆ ಹೇಳಿ ಕೊಡುವ ಗ್ರಂಥಗಳ ಒಂದೊಂದು ಅಕ್ಷರದ ಪುಣ್ಯವೂ ಖಾದರ್ ಉಸ್ತಾದರ ಅಕೌಂಟ್‌ಗೆ ಜಮಾ ಆಗುತ್ತದೆ. ಅವರು ಇಮಾಮ್ ನಿಲ್ಲುವಾಗ,ಉಪದೇಶ ನೀಡುವಾಗ,ಒಳಿತನ್ನು ಪ್ರಚಾರ ಮಾಡುವಾಗ ಅದರ ಪುಣ್ಯವೂ ಖಾದರ್ ಉಸ್ತಾದರಿಗೆ ಸಿಗುತ್ತದೆ. ಫಾರೂಖ್ ಸಖಾಫಿಯವರ ಬಳಿ ಕಲಿತು,ಪದವಿ ಪಡೆದು ವಿವಿಧ ಮೊಹಲ್ಲಾಗಳಲ್ಲಿ ಸೇವೆ ಮಾಡುವ ಉಸ್ತಾದರುಗಳ ಸೇವೆಯ ಪುಣ್ಯ ಖಾದರ್ ಉಸ್ತಾದರ ಜೇಬಿಗೆ ಬೀಳುತ್ತದೆ ಮತ್ತೊಬ್ಬ ಮಗ ಹಬೀಬ್ ಸಖಾಫಿ ಮಿಸ್ಬಾಹ್ ಕಾಲೇಜಿನ ಮುದರ್ರಿಸ್ ಸೇವೆಯೊಂದಿಗೆ ಕೃಷ್ಣಾಪುರ ಈದ್ಗಾ ದಲ್ಲಿ ಮದ್ರಸಾ ಅಧ್ಯಾಪಕರಾಗಿದ್ದಾರೆ. ಅವರು ಮಕ್ಕಳಿಗೆ ಕಲಿಸುವ ಪ್ರತಿಯೊಂದು ಇಲ್ಮ್‌ನ ಪ್ರತಿಫಲವೂ ಖಾದರ್ ಉಸ್ತಾದ್‌ಗೆ ಲಭಿಸುತ್ತದೆ. ಹಬೀಬ್ ಸಖಾಫಿಯ ಕಾರಣ ದಿಂದ ಖುರ್‌ಆನ್ ಓದಲು ಕಲಿತ ಮಕ್ಕಳು, ದಿನನಿತ್ಯ ಖುರ್‌ಆನ್ ಪಠಿಸುವಾಗ, ನಮಾಝ್ ಮಾಡುವಾಗ ಅದರ ಫಲ ಖಾದರ್ ಉಸ್ತಾದರಿಗೆ ಸೇರುತ್ತದೆ. ಇಲ್ಮ್ ಕಲಿಯುವ ಮಕ್ಕಳನ್ನು ಮುಂದಿಟ್ಟು ಈ ಇಬ್ಬರು ವಿದ್ವಾಂಸರು ತನ್ನ ತಂದೆಯ ಪಾರತ್ರಿಕ ವಿಜಯಕ್ಕಾಗಿ ದುಆ ನಡೆಸಿದರೆ ಆ ದುಆ ಸ್ವೀಕರಿಸದೇ ಹೋಗದು. ಅವರ ಪರಲೋಕ ಯಶಸ್ಸಿಯಾಗಲು ಇದು ಸಾಕಲ್ಲವೇ ? ಮಕ್ಕಳನ್ನು ಆಲಿಮ್ ಮಾಡಿದರೆ ಹೆತ್ತವರಿಗೆ ಸಿಗುವ ಭಾಗ್ಯವಿದು.

ಖಾದರ್ ಉಸ್ತಾದ್ ಜೀವನ ಮಾರ್ಗವಾಗಿ ಆಯ್ದುಕೊಂಡದ್ದು ಬಾಂಗ್ ಕರೆಯುವ ಕೆಲಸವನ್ನಾಗಿತ್ತು. ಅದ್ಸಾನ್ ಕರೆ ಕೊಡುವುದಕ್ಕೆ ಇಸ್ಲಾಮಿನಲ್ಲಿ ಅತ್ಯಂತ ಶ್ರೇಷ್ಠವಾದ ಪುಣ್ಯವಿದೆ. ಪವಿತ್ರ ಖು‌ರ್‌ಆನ್ ಅದ್ಸಾನ್‌ನ ಕುರಿತು ಹೇಳುವುದು ಹೀಗೆ ; “ಅಲ್ಲಾಹನಿಗಾಗಿ ಕರೆ ನೀಡುವ (ಬಾಂಗ್ ಕರೆಯುವ) ಶಬ್ದಕ್ಕಿಂತ ಉತ್ತಮವಾದ ಶಬ್ದ ಬೇರೊಂದಿಲ್ಲ. ಶಬ್ದಗಳ ಪೈಕಿ ಉತ್ತಮವಾದ ಶಬ್ದ ಅದ್ಸಾನ್ ಕರೆಯಾಗಿದೆ” ಎಂಬುದು ಖುರ್‌ಆನಿನ ಬೋಧನೆ. ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ: “ಅದ್ಸಾನ್ ಕರೆ ಕೇಳುವ ಜಿನ್ನುಗಳು ಮನುಷ್ಯರು ಮತ್ತು ಸಕಲ ಜೀವಿಗಳು ಅದ್ಸಾನ್ ಕರೆ ನೀಡಿದಾತನಿಗೆ ಪರಲೋಕದಲ್ಲಿ ಸಾಕ್ಷಿ ನುಡಿಯುತ್ತವೆ.” ಮತ್ತೊಂದು ಹದೀಸ್‌ನಲ್ಲಿ ಈ ರೀತಿ ಕಾಣಬಹುದು. “ಯಾರಾದರೂಬ್ಬ ಹನ್ನೆರಡು ವರ್ಷ ಅದ್ಸಾನ್ ಕರೆ ನೀಡಿದರೆ ಆತನಿಗೆ ಸ್ವರ್ಗ ಕಡ್ಡಾಯ. ಹಾಗೂ ಪ್ರತೀ ದಿನ ಅದ್ಸಾನ್ ಕರೆ ನೀಡಿದಾತನಿಗೆ ಅರವತ್ತು ಒಳಿತು ಮತ್ತು ಇಖಾಮತ್ ಕರೆ ನೀಡಿದವನಿಗೆ ಮೂವತ್ತು ಒಳಿತನ್ನು ಬರೆಯಲಾಗುತ್ತದೆ.” ಅದ್ಸಾನ್ ಕರೆಯುವವನಿಗೆ ಅಲ್ಲಾಹನು ನೀಡುವ ಸೌಭಾಗ್ಯವಿದು. ಅದ್ಸಾನ್ ಕರೆ ಕೇಳಿ ಮಸೀದಿಯತ್ತ ನಮಾಝ್‌ಗೆ ಬರುವ ಪುರುಷರ ಹಾಗೂ ಮನೆಯಲ್ಲಿ ನಮಾಝ್ ಮಾಡುವ ಸ್ತ್ರೀಯರ ಪುಣ್ಯವು ಬಾಂಗ್ ಕರೆ ನೀಡಿದಾತನಿಗೂ ಲಭಿಸುತ್ತದೆ.

ಖಾದರ್ ಉಸ್ತಾದರು ಮುಅ‌ದ್ಸಿನ್ ಆಗಿ ದುಡಿದದ್ದು ಬರೋಬ್ಬರಿ ನಲವತ್ತ ನಾಲ್ಕು ವರ್ಷ!! ಅದರಲ್ಲಿ ಒಂದೇ ಮಸೀದಿಯಲ್ಲಿ ಮೂವತ್ತ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದಾರೆ! ಮೂವತ್ತ ನಾಲ್ಕು ವರ್ಷ ಒಂದೇ ಮೊಹಲ್ಲಾದಲ್ಲಿ ಸೇವೆ ಮಾಡಿದ್ದರೂ ಯಾರಿಗೂ ಅವರ ಬಗ್ಗೆ ಒಂದೇ ಒಂದು ಆಕ್ಷೇಪವಿಲ್ಲ. ಒಂದು ವರ್ಷ ಒಂದೂರಲ್ಲಿ ಸೇವೆಗೆ ನಿಂತರೆ ಅಪಸ್ವರಗಳು ಕೇಳಿಬರುವ ಕಾಲವಿದು. ಮುಅದ್ಸಿನಾದರೆ ಹೇಳುವುದೇ ಬೇಡ. ಕಿರಿಕಿರಿ ಅಧಿಕವೇ. ದೊಡ್ಡ ಮೊಹಲ್ಲಾಗಳಲ್ಲಿ ಆಕ್ಷೇಪ ಇದ್ದೇ ಇರುತ್ತದೆ.ಸಾವಿರದಷ್ಟು ಜಮಾಅತ್‌ಗಳಿರುವ ಕಾಟಿಪಳ್ಳದಲ್ಲಿ ಅಜಾತ ಶತ್ರುವಾಗಿ ಸೇವೆ ಮಾಡಿದ ಕೀರ್ತಿ ಖಾದರ್ ಉಸ್ತಾದ್‌ಗೆ ಸಲ್ಲಬೇಕು. ಎಲ್ಲರೊಂದಿಗೆ ಸದಾ ನಗುಮುಖದಿಂದಲೇ ಇರುವ ಖಾದ‌ರ್ ಉಸ್ತಾದ್‌ರವರ ಪೂರ್ಣ ಹೆಸರು ಪಿ.ಎಂ ಅಬ್ದುಲ್ ಖಾದರ್ ಮುಸ್ಲಿಯಾರ್. ಪಿ ಎಂ ಎಂದರೆ ಪಣಂಬೂರ್ ಮುಸ್ಲಿಯಾರ್‌ ಕೂಟ ಎಂದಾಗಿದೆ.

ಇದ್ದಿನಬ್ಬ, ಹವ್ವಮ್ಮರವರ ನಾಲ್ಕು ಮಕ್ಕಳ ಪೈಕಿ ಎರಡನೆಯವರಾದ ಖಾದರ್ ಉಸ್ತಾದ್ ಜನಿಸಿದ್ದು 1940 ರಲ್ಲಿ. ಮಂಗಳೂರಿನ ಬಂದರು ನಿವಾಸಿಯಾದ ಖಾದರ್ ಉಸ್ತಾದ್‌ರವರ ತಂದೆ ಎಂಟನೇ ವಯಸ್ಸಿರುವಾಗಲೇ ತೀರಿಕೊಂಡರು. ತಂದೆಯ ನಿಧನ ಬಳಿಕ ವಾಸ ಸ್ಥಳವನ್ನು ಪಣಂಬೂರ್‌ಗೆ ಬದಲಿಸಿದರು. ಐದನೇ ತರಗತಿ ತನಕ ಶಾಲೆ ಕಲಿತಿರುವ ಅವರು ಕಾಸರಗೋಡ್ ಕಿಯೂರ್‌ನಲ್ಲಿ ಮುಹಮ್ಮದ್ ಹಾಜಿಯವರ ದರ್ಸ್‌ಗೆ ಸೇರಿ ಅಲ್ಲಿ ಧಾರ್ಮಿಕ ಶಿಕ್ಷಣ ಪಡೆದರು. ತನ್ನ ದೊಡ್ಡಪ್ಪನ ಮಗ ಅಬ್ದುರಹ್ಮಾನ್ ಮುಸ್ಲಿಯಾರ್ ಬಳಿ ಖುರ್‌ಆನ್ ಕಲಿತ ಅವರು ಹದಿನೆಂಟನೇಯ ವಯಸ್ಸಿನಲ್ಲಿ ಸೇವೆಗೆ ನಿಂತರು.ಸುರತ್ಕಲ್ ಸಮೀಪದ ಕುಳಾಯಿಯಲ್ಲಿ ಮು‌ಅದ್ಸಿನಾಗಿ ಡೂಟಿಗೆ ಸೇರಿ, ಅಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿದ ಬಳಿಕ ಪಣಂಬೂರ್‌ನಲ್ಲಿ ಒಂದು ವರ್ಷ ಸೇವೆ ಮಾಡಿದರು.

ನಂತರ 1972ರಲ್ಲಿ ದಕ್ಷಿಣ ಕನ್ನಡದ ಪ್ರತಿಷ್ಟಿತ ಮೊಹಲ್ಲಾ ಕಾಟಿಪಳ್ಳ ಪಣಂಬೂರ್ ಮುಸ್ಲಿಂ ಜಮಾಅತ್‌ನಲ್ಲಿ ಮುಅದ್ಸಿನಾಗಿ ಸೇವೆಗೆ ನಿಂತರು. ಅಲ್ಲಿಂದ 2006ರ ತನಕ ಬರೋಬರಿ ಮೂವತ್ತ ನಾಲ್ಕು ವರ್ಷ ಬಾಂಗ್ ಕರೆ ನೀಡಿದರು. ಅತ್ಯಂತ ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದರೂ ಅದರಲ್ಲೇ ತೃಪ್ತಿ ಕಂಡಿದ್ದರು. ಮು‌ಅದ್ಸಿನ್ ಸೇವೆಯ ಬಗ್ಗೆ ಬಹಳ ಅಭಿಮಾನ ಹೊಂದಿದ್ದರು. ಖಾದರ್ ಉಸ್ತಾದರಿಗೆ ಆರು ಗಂಡು ಹಾಗೂ ಐದು ಹೆಣ್ಣು ಸಹಿತ ಹನ್ನೊಂದು ಮಕ್ಕಳು. ಎಲ್ಲರಿಗೂ ಉತ್ತಮ ಶಿಕ್ಷಣ ನೀಡಿ ವಿವಾಹ ಮಾಡಿಕೊಟ್ಟಿದ್ದಾರೆ. ಹನ್ನೊಂದು ಮಕ್ಕಳ ಪೈಕಿ ಇಬ್ಬರು ಸಖಾಫಿ ಬಿರುದು ಪಡೆದ ಅಲಿಮ್‌ಗಳು. ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾಷಣ ರಂಗದಲ್ಲಿ ಮಿಂಚುತ್ತಿರುವ ಯುವ ವಾಗ್ಮಿ ಕೃಷ್ಣಾಪುರ ಜಮಾಅತ್ ಮುದರ್ರಿಸ್ ಫಾರೂಖ್ ಸಖಾಫಿ ಹಾಗೂ ಮಿಸ್ಬಾಹ್ ವುಮನ್ಸ್ ಕಾಲೇಜ್ ಇದರ ಪ್ರಧಾನ ಮುದರ್ರಿಸ್ ಹಬೀಬ್ ಸಖಾಫಿ, ಅನಿವಾಸಿ ಭಾರತೀಯರ ಸಂಘಟನೆ ಕೆ.ಸಿ.ಎಫ್ ಇದರ ನಾಯಕ ಸ್ವಾದಿಕ್ ಕಾಟಿಪಳ್ಳ, ಬುರ್ದಾ ಮಜ್ಲಿಸುಗಳಲ್ಲಿ ತುಂಬಿದ ಪ್ರತಿಭೆಯಾಗಿದ್ದ ಅಮಾನ್ ಕಾಟಿಪಳ್ಳ ಹಾಗೂ ಹಿರಿಯ ಪುತ್ರರಾದ ತಾಜುದ್ದೀನ್, ಮನ್ಸೂರ್‌ರವರೂ ಖಾದರ್ ಉಸ್ತಾದ್‌ರವರ ಪುತ್ರರು. ಬುಶ್ರಾ, ಕುಬ್‌ರಾ, ಸ್ವಾಬಿರಾ, ಝಫೀರ, ಸ್ವಗೀರ ಪುತ್ರಿಯರು ಹಾಗೂ ಅಬ್ದುಲ್ ಲತೀಫ್. ಕೆ.ಸಿ.ಎಫ್‌ನ ಅಂತರಾಷ್ಟ್ರೀಯ ನಾಯಕ ಫಾರೂಖ್ ಕಾಟಿಪಳ್ಳ, ಯುವ ವಿದ್ವಾಂಸ, ಸಂಘಟಕ ಫಾರೂಖ್ ಸಖಾಫಿ ವೇಣೂರ್. ಅಬೂಬಕ್ಕರ್ ಸಿದ್ದೀಖ್, ಕಲಂದರ್‌ರವರು ಖಾದರ್ ಉಸ್ತಾದರ ಅಳಿಯಂದಿರು.

ಪಡ್ಡೋಡಿಯ ಪೋಕಬ್ಬ ಮತ್ತು ಖತೀಜ ದಂಪತಿಗಳ ಪುತ್ರಿ ಹಲೀಮಾರನ್ನು 1971 ರಲ್ಲಿ ವಿವಾಹವಾದ ಖಾದರ್ ಉಸ್ತಾದ್ ಕಳೆದ ನಲವತ್ತೈದು ವರ್ಷಗಳಿಂದ ಕಾಟಿಪಳ್ಳ ದಲ್ಲಿ ವಾಸವಾಗಿದ್ದಾರೆ. ಪಣಂಬೂರ್‌ನಲ್ಲಿ ಖಾಝಿಯಾಗಿದ್ದ ಇದ್ದಿನಬ್ಬ ಮುಸ್ಲಿಯಾರ್ ಇವರ ಮಾವ. ಖಾದರ್ ಉಸ್ತಾದ್‌ರವರ ಸೇವೆಯನ್ನು ಪರಿಗಣಿಸಿ 2006ರಲ್ಲಿ ಹಾಜಿ ಪಿ.ಹಸನಬ್ಬ ಮಾಸ್ಟರ್ ಪ್ರಶಸ್ತಿ ಹಾಗೂ 2017 ರಲ್ಲಿ ಅಲ್‌ ಮದ್ರಸತುನ್ನೂರಿಯ್ಯ ವತಿಯಿಂದ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 2006ರಲ್ಲಿ ಸ್ವಯಂ ನಿವೃತ್ತಿಗೊಂಡ ಖಾದರ್ ಉಸ್ತಾದರು ವಯೋಸಹಜ ರೋಗಗಳಿಂದ ಬಳಲುತ್ತಿದ್ದರು. ಮೇ 14ರ ರಾತ್ರಿ ದ್ಸುಲ್ ‌ಕ‌ಅ್‌ದ್ 17 ರಂದು ಬುಧವಾರ ಅಸ್ತ ಗುರುವಾರ ರಾತ್ರಿ ತನ್ನ 85 ನೇ ವಯಸ್ಸಿನಲ್ಲಿ ಅಲ್ಲಾಹನ ರಹ್ಮತ್ ನೆಡೆಗೆ ಯಾತ್ರೆಯಾದರು. ಅಲ್ಲಾಹನು ಅವರಿಗೆ ಮಗ್ಪಿರತ್ ನೀಡಲಿ. ಅವರ ಒಳಿತುಗಳನ್ನು ಸ್ವೀಕರಿಸಿ ಜನ್ನತ್ ನೀಡಿ ಅನುಗ್ರಹಿಸಲಿ.