ರಿಯಾದ್: ವಿಸಿಟ್ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಆಗಮಿಸುವವರು ದೇಶದಲ್ಲಿ ಪ್ರಯಾಣಿಸುವಾಗ ತಮ್ಮ ಪಾಸ್‌ಪೋರ್ಟ್‌ಗಳನ್ನು ಕೊಂಡೊಯ್ಯುವ ಅಗತ್ಯವಿಲ್ಲ. ಇದಕ್ಕೆ ಬದಲಾಗಿ, ಪಾಸ್‌ಪೋರ್ಟ್ ನಿರ್ದೇಶನಾಲಯ (ಜವಾಝಾತ್) ಹೊಸದಾಗಿ ಪ್ರಾರಂಭಿಸಿರುವ ವಿಸಿಟರ್ಸ್ ಡಿಜಿಟಲ್ ಐಡಿ ಕಾರ್ಡ್ ನ್ನು ಬಳಸಬಹುದೆಂದು ಜವಾಝಾತ್ ವಕ್ತಾರ ಮೇಜರ್ ನಾಸಿರ್ ಅಲ್ ಉತೈಬಿ ಹೇಳಿದರು.
ಸೌದಿ ಪ್ರಜೆಗಳು,ಸೌದಿ ಅರೇಬಿಯಾದಲ್ಲಿ ಕಾನೂನುಬದ್ಧವಾಗಿ ನೆಲೆಸಿರುವ ವಲಸಿಗರು ಮತ್ತು ಸಂದರ್ಶಕರಿಗೆ ಜವಾಝಾತ್ ಒದಗಿಸಿದ ಡಿಜಿಟಲ್ ಮತ್ತು ತಂತ್ರಜ್ಞಾನದ ಪರಿಹಾರಗಳಲ್ಲಿ ಒಂದಾಗಿ ವಿಸಿಟರ್ಸ್ ಡಿಜಿಟಲ್ ಐಡಿ ಸೇವೆಯನ್ನು ಪ್ರಾರಂಭಿಸಲಾಗಿದೆ.
ಸೌದಿ ಅರೇಬಿಯಾಕ್ಕೆ ಭೇಟಿ ವೀಸಾದಲ್ಲಿ ಬರುವವರಿಗೆ ದೇಶದೊಳಗೆ ಪ್ರಯಾಣ ಮತ್ತು ವಹಿವಾಟುಗಳನ್ನು ಸುಲಭಗೊಳಿಸುವ ಗುರಿಯೊಂದಿಗೆ ವಿಸಿಟರ್ಸ್ ಡಿಜಿಟಲ್ ಐಡಿಯನ್ನು ಆರಂಭಿಸಲಾಗಿದೆ. ವಿಸಿಟ್ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಪ್ರವೇಶಿಸುವ ವಿದೇಶಿಯರಿಗೆ ಏಕೀಕೃತ ಸಂಖ್ಯೆಯನ್ನು ನೀಡಲಾಗುತ್ತದೆ. ಈ ಸಂಖ್ಯೆಯನ್ನು ಬಳಸಿಕೊಂಡು, ಸಂದರ್ಶಕರು ಗೃಹ ವ್ಯವಹಾರಗಳ ಸಚಿವಾಲಯದ ಆನ್‌ಲೈನ್ ಸೇವಾ ವೇದಿಕೆಯಾದ ಅಬ್ಶೀರ್‌ಗೆ ಲಾಗ್ ಇನ್ ಆಗಬಹುದು ಮತ್ತು ಡಿಜಿಟಲ್ ಐಡಿಯನ್ನು ಪಡೆಯಬಹುದು.
ಸೌದಿ ಅರೇಬಿಯಾದ ಯಾವುದೇ ಸ್ಥಳಗಳಿಗೆ ಪ್ರಯಾಣಿಸಲು ಸಂದರ್ಶಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಡಿಜಿಟಲ್ ಐಡಿಯನ್ನು ಬಳಸಬಹುದು. ಡಿಜಿಟಲ್ ಐಡಿ ಪಡೆಯುವ ಪ್ರವಾಸಿಗರು ಸೌದಿ ಅರೇಬಿಯಾದಲ್ಲಿ ಪ್ರಯಾಣಿಸಲು ಪಾಸ್‌ಪೋರ್ಟ್ ಹೊಂದುವ ಅಗತ್ಯವಿಲ್ಲ ಎಂದು ಜವಾಝಾತ್ ವಕ್ತಾರರು ತಿಳಿಸಿದ್ದಾರೆ.