ಗಾಝಾ| ‘ನಾವೀಗ ಏಳನೇ ಸ್ವರ್ಗದಲ್ಲಿದ್ದೇವೆ. ಅಲ್ಲಿ ಹೊಸ ನಗರ ನಿರ್ಮಾಣವಾಗಲಿದೆ. ಅಲ್ಲಿ ಅಮರ ಪ್ರೇಮದ ಬಗ್ಗೆ ಹಾಡುವವರೆಲ್ಲ ಗಾಝಾದವರಾಗಿರುತ್ತಾರೆ’. ಗಾಝಾ ಮೇಲಿನ ಇಸ್ರೇಲ್ ದಾಳಿಯಲ್ಲಿ ಕೊನೆಯುಸಿರೆಳೆಯುವ ಮುನ್ನ ಪ್ಯಾಲೆಸ್ತೀನ್ ಕವಿ ಹಿಬಾ ಕಮಾಲ್ ಅಬು ನಾದಾ ಬರೆದ ಸಾಲುಗಳಿವು. ಮರಣವನ್ನು ಎದುರು ನೋಡುತ್ತಾ ಹಿಬಾ ಬರೆದಿರುವ ಸಾಹಿತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಸ್ರೇಲಿ ದಾಳಿಯಿಂದ ಕೊಲ್ಲಲ್ಪಟ್ಟ, ಸೆರೆಹಿಡಿಯಲ್ಪಟ್ಟ ಮತ್ತು ಕಠಿಣ ಯಾತನೆ ಅನುಭವಿಸಿದ ತನ್ನ ಪ್ಯಾಲೆಸ್ತೀನ್ ಸಹೋದರ ಸಹೋದರಿಯರ ಮುಂದೆ ಹಿಬಾ ಹೀಗೆ ಬರೆದರು.
“ನಾವೀಗ ಏಳನೇ ಸ್ವರ್ಗದಲ್ಲಿದ್ದೇವೆ. ಅಲ್ಲಿ ಹೊಸ ನಗರ ನಿರ್ಮಾಣವಾಗಲಿದೆ. ರಕ್ತದಿಂದ ತೊಯ್ದ ಬಟ್ಟೆಯಲ್ಲಿ ಕಿರುಚುವ ರೋಗಿಗಳು ಮತ್ತು ವೈದ್ಯರಿಲ್ಲ. ಮಕ್ಕಳ ಮೇಲೆ ಕೋಪಗೊಳ್ಳುವ ಶಿಕ್ಷಕರಿಲ್ಲ, ದುಃಖಿಸುವ ಮತ್ತು ನೋಯುತ್ತಿರುವ ಕುಟುಂಬಗಳಿಲ್ಲ. ವರದಿಗಾರರು ಆ ಸ್ವರ್ಗಲೋಕವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಿದ್ದಾರೆ. ಅಮರ ಪ್ರೇಮದ ಬಗ್ಗೆ ಹಾಡುವವರೆಲ್ಲರೂ ಗಾಝಾದ ನಿವಾಸಿಗಳಾಗಿರುತ್ತಾರೆ. ಅವರು ಒಟ್ಟಾಗಿ ಸ್ವರ್ಗದಲ್ಲಿ ಹೊಸ ಗಾಝಾವನ್ನು, ದಿಗ್ಬಂಧನವಿಲ್ಲದ ಗಾಝಾವನ್ನು ನಿರ್ಮಿಸುತ್ತಾರೆ”
ಹಿಬಾ ಈಗ ಸ್ವರ್ಗದಲ್ಲಿರುವ ಗಾಝಾದಲ್ಲಿ ಅಮರ ಪ್ರೇಮದ ಬಗ್ಗೆ ಬರೆಯುತ್ತಿರಬಹುದು ಎಂದು ಹಲವರು ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಗಾಝಾದ ಖಾನ್ ಯೂನಿಸ್‌ನಲ್ಲಿ ನಿನ್ನೆ ಇಸ್ರೇಲಿ ದಾಳಿಯಲ್ಲಿ 32 ವರ್ಷದ ಹಿಬಾ ಕೊಲ್ಲಲ್ಪಟ್ಟರು. ‘ಮರಣ ಹೊಂದಿದವರಿಗಲ್ಲ ಆಕ್ಸಿಜನ್’ ಕಾದಂಬರಿಗಾಗಿ ಹಿಬಾ ಶಾರ್ಜಾ ಪ್ರಶಸ್ತಿ ಪಡೆದಿದ್ದರು.