ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ತನ್ನ ಐವತ್ತನೇ ವರ್ಷದ ಸಂಭ್ರಮಾಚರಣೆಯನ್ನು “ನಾವು ಭಾರತೀಯರು” ಎಂಬ ಧ್ಯೇಯದೊಂದಿಗೆ ಸೆಪ್ಟೆಂಬರ್ 10 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದೆ.
ಕಾರ್ಯಕ್ರಮದ ಪ್ರಚಾರ ಭಾಗವಾಗಿ ಕೊಪ್ಪ ಪಟ್ಟಣದಲ್ಲಿ ಎಸ್ಸೆಸ್ಸೆಫ್ ಕೊಪ್ಪ ಡಿವಿಷನ್ ಮಟ್ಟದ ಬೃಹತ್ ಬೈಕ್ ಜಾಥವು ಕೊಪ್ಪದ ವಾಟರ್ ಟ್ಯಾಂಕ್ ನಿಂದ ಹೊರಟು ಬಸ್ಸು ನಿಲ್ದಾಣದವರೆಗೆ ತಲುಪಿತು. ತದನಂತರ ಬಸ್ಸು ನಿಲ್ದಾಣದ ಮುಂಭಾಗದಲ್ಲಿ ಪೀಪಲ್ ಕಾನ್ಫರೆನ್ಸ್ ಕಾರ್ಯಕ್ರಮವು ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಕೊಪ್ಪ ಡಿವಿಷನ್ ಅಧ್ಯಕ್ಷರು ಉಸ್ಮಾನ್ ಅವರು ನೆರವೇರಿಸಿದರು. ಸ್ವಾಗತ ಭಾಷಣವನ್ನು ಶರ್ಫುದ್ದೀನ್ ನೆರವೇರಿಸಿದರು. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ನಿಕಟಪೂರ್ವ ಸದಸ್ಯರು ಸಫ್ವಾನ್ ಸಖಾಫಿ ಶಾಂತಿಪುರ ಅವರು ಮಾತನಾಡಿ ನಾವೆಲ್ಲರೂ ಭಾರತೀಯರು ಎಂಬ ಧ್ಯೇಯವು ದೇಶದಾದ್ಯಂತ ಮೊಳಗಲಿ, ಕೋಮುವಾದವನ್ನು ಅಳಿಸಬೇಕು, ಭವ್ಯ ಪರಂಪರೆಯಿರುವ ಭಾರತ ದೇಶದ ಮುಂದೆ ಜಗತ್ತು ಮಂಡಿಯೂರುವಂತೆ ಚಂದ್ರಯಾನ-3 ಮೂಲಕ ವಿಜಯಶಾಲಿಯಾಗಿದ್ದೇವೆ. ಸಂವಿಧಾನದ ಆಶಯವನ್ನು ಸಂವಿಧಾನದ ಪೀಠಿಕೆಯ ಮಹತ್ವವನ್ನು ದೇಶ ಮೂಲೆ ಮೂಲೆಗಳಲ್ಲಿ ಪಸರಿಸುವುದು ಹಾಗೂ ಗಾಂಜಾ,ಮಧ್ಯಮುಕ್ತ ಭಾರತವನ್ನಾಗಿಸುವುದೇ ಎಸ್ಸೆಸ್ಸೆಫ್ ನ ಮುಖ್ಯ ಆಶಯವೆಂದು ತಿಳಿಸಿದರು.

ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ನಾಯಕರು ಶರೀಫ್ ಕುದುರೆಗುಂಡಿ ಅವರು ಮಾತನಾಡಿ ಎಸ್ಸೆಸ್ಸೆಫ್ ತನ್ನ ಐವತ್ತು ವರ್ಷದಲ್ಲಿ ಸಾರ್ವಜನಿಕರಿಗೆ ತೊಂದರೆಕೊಡದೆ, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಉಂಟು ಮಾಡದೇ, ಟಯರ್ ಗಳಿಗೆ ಬೆಂಕಿ ಹಚ್ಚದೆ, ಪೋಲೀಸ್ ಸಿಬ್ಬಂದಿಯ ಮೇಲೆ ಕೈ ಮಾಡದೇ ಹಲವು ಪ್ರತಿಭಟನೆಗಳನ್ನು, ಜಾಥಗಳನ್ನು, ಸಮ್ಮೇಳನವನ್ನು ಆಯೋಜಿಸಿದ ಹೆಗ್ಗಳಿಕೆ ಎಸ್ಸೆಸ್ಸೆಫ್ ಸಂಘಟನೆಗಿದೆ ಎಂದು ತಿಳಿಸಿದರು. ಸೆಪ್ಟೆಂಬರ್ 10 ರಂದು ನಡೆಯುವ ಗೋಲ್ಡನ್ ಫಿಫ್ಟಿ ಮಹಾಸಮ್ಮೇಳನಕ್ಕೆ ಕೊಪ್ಪದ ಸಮಸ್ತ ನಾಗರಿಕರಿಗೆ ಆಹ್ವಾನ ನೀಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಕೊಪ್ಪದ ಮುಹಿಯದ್ದೀನ್ ಜುಮ್ಮಾ ಮಸೀದಿಯ ಉಸ್ತಾದರುಗಳು, ಕೊಪ್ಪ ಝೋನ್ ಸುನ್ನೀ ಯುವಜನ ಸಂಘ ಅಧ್ಯಕ್ಷರು ಹುಸೈನ್ ಸ ಅದಿ , SYS ಕರ್ನಾಟಕ ರಾಜ್ಯ ಸದಸ್ಯರು ಸುಲೈಮಾನ್, ಶೃಂಗೇರಿ ಝೋನ್ ಸುನ್ನೀ ಯುವಜನ ಸಂಘ ಅಧ್ಯಕ್ಷರು ಸ್ವಾದಿಕ್, ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ ಸಲೀಮ್, ಪಟ್ಟಣದ ಮುಖಂಡರು,ಹಿರಿಯ ನಾಯಕರು ಹಾಗೂ ಕಾರ್ಯಕ್ರಮದ ಕೇಂದ್ರ ಬಿಂದುವಾದ ಎಸ್ಸೆಸ್ಸೆಫ್ ಕೊಪ್ಪ ಡಿವಿಷನ್ ವ್ಯಾಪ್ತಿಯ ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆಯನ್ನು ಎಸ್ಸೆಸ್ಸೆಫ್ ಕೊಪ್ಪ ಡಿವಿಷನ್ ಪ್ರಧಾನ ಕಾರ್ಯದರ್ಶಿ ಬಾಕಿರ್ ಅವರು ನೆರವೇರಿಸಿ ಆಗಮಿಸಿದ ಎಲ್ಲಾ ನಾಯಕರಿಗೂ, ಹಿರಿಯರಿಗೂ, ಕೊಪ್ಪ ಪೋಲೀಸ್ ಠಾಣಾ ಸಿಬ್ಬಂದಿವರ್ಗದವರಿಗೂ, ಗ್ರಾಮಸ್ಥರಿಗೂ, ವಂದನೆಗಳನ್ನು ಅರ್ಪಿಸಿದರು.







