janadhvani

Kannada Online News Paper

ಪುಟ್ಟ ಬಾಲಕಿಯ ಅತ್ಯಾಚಾರ, ಹತ್ಯೆ: ಆರೋಪಿಗೆ ಮರಣ ದಂಡನೆಯಾಗಲಿ- ಸಹಪಾಠಿಗಳ ಪೋಷಕರ ಆಗ್ರಹ

"ಬಾಲಕಿಯನ್ನು ಹತ್ಯೆಗೈದಿರುವ ರೀತಿಯಲ್ಲೇ ಆತನನ್ನೂ ಕೊಲ್ಲಬೇಕು. ಒಂದು ವೇಳೆ ಇದನ್ನು ಮಾಡಲು ಸರ್ಕಾರಕ್ಕೆ ಸಾಧ್ಯವಿಲ್ಲದಿದ್ದರೆ, ಆತನನ್ನು ನಮ್ಮ ವಶಕ್ಕೆ ಒಪ್ಪಿಸಲಿ” ಎಂದು ಬಾಲಕಿಯ ಸಹಪಾಠಿಗಳ ಪೋಷಕರು ಆಗ್ರಹಿಸಿದ್ದಾರೆ.

ಕೊಚ್ಚಿ: ಐದು ವರ್ಷ ಪ್ರಾಯದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಆಕೆಯ ಕುತ್ತಿಗೆಯನ್ನು ಸೀಳಿ ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆಯೊಂದು ಕೊಚ್ಚಿಯ ಆಲುವಾದಲ್ಲಿ ನಡೆದಿದ್ದು ರವಿವಾರ ಬಾಲಕಿಯ ಮೃತದೇಹವಿರಿಸಿದ್ದ ಶಾಲೆಯಲ್ಲಿ ನೂರಾರು ಮಂದಿ ಶ್ರದ್ಧಾಂಜಲಿ ಸಲ್ಲಿಸಿದರು ಹಾಗೂ ಆರೋಪಿಗೆ ಕಠಿಣ ಶಿಕ್ಷೆ, ವಿಶೇಷವಾಗಿ ಮರಣ ದಂಡನೆ ವಿಧಿಸಬೇಕು ಎಂದು ಆಗ್ರಹಿಸಿದರು. ವಯೋಮಾನದವರು ಹಾಗೂ ಎಲ್ಲ ವರ್ಗದವರು ಅಂತಿಮ ವಿದಾಯ ಸಲ್ಲಿಸಲು ಧಾವಿಸಿದ್ದರು.

“ಬಾಲಕಿಯನ್ನು ಹತ್ಯೆಗೈದಿರುವ ರೀತಿಯಲ್ಲೇ ಆತನನ್ನೂ ಕೊಲ್ಲಬೇಕು. ಒಂದು ವೇಳೆ ಇದನ್ನು ಮಾಡಲು ಸರ್ಕಾರಕ್ಕೆ ಸಾಧ್ಯವಿಲ್ಲದಿದ್ದರೆ, ಆತನನ್ನು ನಮ್ಮ ವಶಕ್ಕೆ ಒಪ್ಪಿಸಲಿ” ಎಂದು ಬಾಲಕಿಯ ಸಹಪಾಠಿಗಳ ಪೋಷಕರು ಆಗ್ರಹಿಸಿದ್ದಾರೆ.

ಶುಕ್ರವಾರ ಅಪರಾಹ್ನ ಅಪಹರಣಕ್ಕೊಳಗಾಗಿದ್ದ ಆ ಬಾಲಕಿಯ ಮೇಲೆ ಆ ಬಾಲಕಿ ವಾಸಿಸುತ್ತಿದ್ದ ಕಟ್ಟಡದಲ್ಲೇ ನೆಲೆಸಿದ್ದ ಅಸ್ಫಾಕ್ ಆಲಂ ಎಂಬ ಬಿಹಾರದ ವಲಸೆ ಕಾರ್ಮಿಕ ಕ್ರೂರವಾಗಿ ಅತ್ಯಾಚಾರವೆಸಗಿ, ನಂತರ ಕತ್ತು ಸೀಳಿ ಹತ್ಯೆಗೈದಿದ್ದ. ಆ ಬಾಲಕಿಯ ಕುಟುಂಬದವರೂ ಬಿಹಾರ ಮೂಲದವರೇ ಆಗಿದ್ದಾರೆ.

ಪುಟಾಣಿಯ ಮೃತದೇಹವು ಶನಿವಾರದಂದು ಆಲುವ ಪ್ರದೇಶದ ಸಮೀಪವಿರುವ ಸ್ಥಳೀಯ ಮಾರುಕಟ್ಟೆಯೊಂದರ ಹಿಂಬದಿಯಲ್ಲಿನ ಜವುಳು ಪ್ರದೇಶದಲ್ಲಿ ಗೋಣಿ ಚೀಲವೊಂದರಲ್ಲಿ ಪತ್ತೆಯಾಗಿತ್ತು. ಆರೋಪಿಯನ್ನು ಶುಕ್ರವಾರದಂದೇ ಬಂಧಿಸಲಾಗಿದ್ದರೂ, ಆತ ಪಾನಮತ್ತ ಸ್ಥಿತಿಯಲ್ಲಿದ್ದುದರಿಂದ ಆತನನ್ನು ವಿಚಾರಣೆಗೊಳಪಡಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗೆ ಮರಣ ದಂಡನೆಯಂಥ ಗರಿಷ್ಠ ಶಿಕ್ಷೆಯಾಗುವುದನ್ನು ಸರ್ಕಾರ ಹಾಗೂ ಪೊಲೀಸರು ಖಾತ್ರಿಗೊಳಿಸಬೇಕು ಎಂದು ಕಾಂಗ್ರೆಸ್ ಶಾಸಕ ಅನ್ವ‌ರ್ ಸಾದತ್ ಒತ್ತಾಯಿಸಿದ್ದಾರೆ.

“ಓರ್ವ ಜನಪ್ರತಿನಿಧಿ ಮತ್ತು ತಂದೆಯಾಗಿ ನಾನು ಇದನ್ನಷ್ಟೆ ಬಯಸುವುದು. ನಾನು ನಿನ್ನೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದು, ಇದನ್ನು ಪ್ರತ್ಯೇಕ ಪ್ರಕರಣವೆಂದು ಪರಿಗಣಿಸಿ, ತನಿಖೆಯನ್ನು ಇಲ್ಲಿಗೇ ಮುಕ್ತಾಯಗೊಳಿಸಬಾರದು ಎಂದು ಅವರಿಗೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದ್ದಾರೆ.

“ಈ ಘಟನೆಯ ನಂತರ, ಎಲ್ಲ ಕಡೆಯ ಪೋಷಕರು ಆತಂಕಗೊಂಡಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಹಾಗೂ ಪೊಲೀಸರು ಹೆಚ್ಚು ಜಾಗೃತರಾಗಿರಬೇಕಾದ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುವಾಗ ಭಾವುಕರಾದ ಶಾಸಕ ಅನ್ವರ್ ಸಾದತ್, ಆ ಬಾಲಕಿಯು ಈ ರೀತಿ ಹತ್ಯೆಗೊಳಗಾಗಬಹುದು ಎಂದು ನಾನೂ ಸೇರಿದಂತೆ ಯಾರೂ ಭಾವಿಸಿರಲಿಲ್ಲ ಮತ್ತು ನಾವೆಲ್ಲ ಆಕೆಯನ್ನು ಜೀವಂತವಾಗಿ ರಕ್ಷಿಸಬಹುದು ಎಂಬ ಆಶಾವಾದ ಹೊಂದಿದ್ದೆವು ಎಂದು ತಿಳಿಸಿದ್ದಾರೆ.

ಘಟನೆಯ ನಂತರ, ರಾಜ್ಯ ಪೊಲೀಸರ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿರುವ ವಿರೋಧ ಪಕ್ಷವಾದ ಕಾಂಗ್ರೆಸ್, ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಲೋಪವೆಸಗಿದ್ದಾರೆ ಎಂದು ಆರೋಪಿಸಿದೆ.

ಆದರೆ, ಈ ಆರೋಪಗಳನ್ನು ನಿರಾಕರಿಸಿರುವ ಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥ ಶೇಖ್ ದರ್ವೇಶ್, ತನಿಖಾಧಿಕಾರಿಗಳಿಂದ ಯಾವುದೇ ಲೋಪವಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಬಾಲಕಿಯನ್ನು ಆಕೆಯ ಪೋಷಕರೊಂದಿಗೆ ಒಂದುಗೂಡಿಸುವ ನಮ್ಮೆಲ್ಲ ಪ್ರಯತ್ನಗಳು ವಿಫಲವಾದವು ಎಂದು ಕೇರಳ ಪೊಲೀಸರು ಸಂತ್ರಸ್ತ ಬಾಲಕಿಯ ಕುಟುಂಬದವರ ಕ್ಷಮೆ ಕೋರಿ ತಮ್ಮೆಲ್ಲ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಕ್ಷಮಾಪಣೆಯನ್ನು ಪೋಸ್ಟ್ ಮಾಡಿದ್ದಾರೆ.

error: Content is protected !! Not allowed copy content from janadhvani.com