ಸೂರಲ್ಪಾಡಿ ಮಸೀದಿ ಹೊರಾಂಗಣದಲ್ಲಿ ಇಟ್ಟಿದ್ದ ಸನ್ಮಿತ್ರ ನೌಶಾದ್ ಹಾಜಿಯವರ ಮಯ್ಯಿತ್ ನೋಡಿ ಬಂದೆ. ಹ್ರಸ್ವ ಜೀವನಾವಧಿಯಲ್ಲಿ ತಾನು ಮಾಡಿದ ಅನನ್ಯ ಸಮಾಜ ಸೇವೆಗಳ ಪಾರತ್ರಿಕ ಪ್ರತಿಫಲವನ್ನು ನೇರವಾಗಿ ದರ್ಶಿಸುತ್ತಾ ಆ ಮುಖ ಪ್ರಕಾಶಮಾನವಾಗಿ ಮಂದಹಾಸ ಬೀರುತ್ತಿತ್ತು.
ಅಲ್ಲಿ ಜಮಾಯಿಸಿದ್ದ ಸಾವಿರಾರು ಜನರ ಸಾನಿಧ್ಯವು ನೌಶಾದ್ ಹಾಜಿಯ ನಿಷ್ಕಳಂಕ ದೀನೀ ಚಟುವಟಿಕೆಗಳನ್ನು ಅಲ್ಲಾಹು ಖಬೂಲ್ ಮಾಡಿರುವುದರ ನೇರ ಸಾಕ್ಷ್ಯದಂತೆ ಭಾಸವಾಗುತ್ತಿತ್ತು.
ಕಳೆದ ಶನಿವಾರ, ಡಿಸೆಂಬರ್ 24ರಂದು ಪ್ರತ್ಯೇಕ ಕಾರ್ಯಕ್ರಮಗಳಿಗೆ ತೆರಳಿದ್ದ ನಾವು ಮಂಗಳೂರು ಪುರಭವನದ ಹೊರಗೆ ಭೇಟಿಯಾಗಿದ್ದೆವು. ಅದೇ ಮುಗುಳ್ನಗು,ಅದೇ ಸೌಮ್ಯತೆಯೊಂದಿಗೆ ಮಾತುಮುಗಿಸಿ ತೆರಳಿದ್ದರು. ಅದು ನಮ್ಮ ಕೊನೆಯ ಭೇಟಿ.
*ಗಂಜಿಮಠ ಝರಾ ಹಾಲ್‌ನ ಉಧ್ಘಾಟನೆಗೆ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಆಗಮಿಸಿದ್ದಾಗ ತನ್ನ ಸೂರಲ್ಪಾಡಿಯ ಮನೆಗೆ ಆಹ್ವಾನಿಸಿ ವಿಶೇಷ ಆತಿಥ್ಯ ನೀಡಿದ್ದರು.
*ನೌಶಾದ್ ಹಾಜಿಯು ಭೌತಿಕವಾಗಿ ನಮ್ಮಿಂದ ದೂರವಾಗಿದ್ದಾರೆ. ಆದರೆ ‘ನಂಡೆ ಪೆಂಙಳ್’ ಮುಂತಾದ ಅವರ ಸೇವಾ ಕಾರ್ಯ, ಸರಳ ಸಜ್ಜನಿಕೆ ಮತ್ತು ಹೃದ್ಯ ಒಡನಾಟಗಳು ಮನಸ್ಸುಗಳಿಂದ ಎಂದಿಗೂ ಮಾಸಿ ಹೋಗದು.
ಅಲ್ಲಾಹು ಸ್ವರ್ಗೋದ್ಯಾನಗಳ ಉನ್ನತಿಗಳಲ್ಲಿ ಅವರಿಗೊಂದು ಜಾಗ ಒದಗಿಸಲಿ. ಪತ್ನಿ ಮಕ್ಕಳಿಗೆ ಸಹನಾಶಕ್ತಿ ಮತ್ತು ಜೀವನ ವೈಶಾಲ್ಯತೆಗಳನ್ನು ಪ್ರದಾನ ಮಾಡಲಿ.ಅರಳ ನೌಶಾದ್ ಉರಿಸಿಟ್ಟ ಬೆಳಕಿನಲ್ಲಿ ಸಾವಿರಾರು ಯುವ ನೌಶಾದ್‌ಗಳು ಅರಳಿಬರಲಿ ಆಮೀನ್.