#ಸ್ನೇಹಜೀವಿ ಅಡ್ಕ
ಬೆಳಿಗ್ಗೆ ಮದ್ರಸ ಬಿಟ್ಟು ಮನೆಯ ಕಡೆ ಹೊರಟ ಸುಳ್ಯ ಸಮೀಪದ ಅರಂಬೂರು ನ ಆಯಿಷಾ ರಿಫಾ ಎಂಬ ಆರರ ಹರೆಯದ ಪುಟ್ಟ ಪುಟಾಣಿಯೊಂದು ರಸ್ತೆ ದಾಟುವ ಧಾವಂತದಲ್ಲಿ ಬೈಕ್ ಅಪಘಾತಕ್ಕೊಳಗಾಗಿ ಈ ಲೋಕದಿಂದ ಮರೆಯಾದಳು ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿವೂನ್.
ಏನೂ ಅರಿಯದ ಆ ಮಗ್ಧ ಕಂದಮ್ಮಳನ್ನು ಕಳೆದುಕೊಂಡ ದುಃಖ ಸಹಿಸಲಾಗದೆ ಇಡೀ ಊರೇ ಕಂಬನಿ ಮಿಡಿಯಿತು.
ಅವಳಿ ಮಕ್ಕಳ ಪೈಕಿ ಒಬ್ಬಳನ್ನು ಕಳೆದುಕೊಂಡ ಆ ಹೆತ್ತ ಜೀವದ ನೋವು, ಆರ್ತನಾದಗಳು ಊಹಿಸಲಸಾಧ್ಯ. ಕಣ್ಣೀರಧಾರೆಯೊಂದಿಗೆ ಮೊಗರ್ಪಣೆ ಮಸೀದಿಯ ದಫನ ಭೂಮಿಯಲ್ಲಿ ರಿಫಾಳನ್ನು ಅಂತಿಮವಾಗಿ ಬೀಳ್ಕೊಡಲಾಯಿತು.
ಮರಣಕ್ಕೆ ಹೇಳಲು ನೂರಾರು ಕಾರಣಗಳು ಇರಬಹುದು.
ಇತ್ತೀಚೆಗೆ ಕೇರಳದ ಪೊಲೀಸ್ ಸಬ್ ಇನ್ಸ್‌ಪೆಕ್ಟರೊಬ್ಬರ ಪ್ರಸಂಗವೊಂದು ವ್ಯಾಪಕವಾಗಿ ವೈರಲಾಗಿತ್ತು.
ಬೆಳಗ್ಗಿನ ರೌಂಡ್ಸ್ ಹೊರಟ ಪೊಲೀಸರ ಜೀಪ್ ನ ಮುಂದೆ ಮದ್ರಸಾಗೆ ಹೋಗುವ ಪುಟ್ಟ ಪುಟಾಣಿಯೊಂದು ಬರುತ್ತಿರುವುದನ್ನು ಗಮನಿಸಿ, ಜೀಪ್ ನಿಲ್ಲಿಸಿ ವಿಚಾರಿಸುವಾಗ ಆ ಮಗು ನಿದ್ದೆ ಕಣ್ಣಿನಲ್ಲೇ ಇತ್ತು.
ಆ ಸಣ್ಣ ಪ್ರಾಯದ ಮದ್ರಸಕ್ಕೆ ಬರುವ ಪುಟಾಣಿಯನ್ನು ಕರೆದುಕೊಂಡು ಅವರ ಮನೆಗೆ ಹೋಗಿ ಬಾಗಿಲು ತಟ್ಟಿ ಮಕ್ಕಳನ್ನು ಮದ್ರಸಾಗೆ ಕಳುಹಿಸುವಾಗ ಜಾಗೃತೆ ವಹಿಸಬಾರದೇ ಅಂತ ಕೇಳುವಾಗ ಮಗುವಿನ ತಾಯಿ ಹೇಳಿದ ಉತ್ತರ “ಮಗುವನ್ನು ದೇವನು ನೋಡುತ್ತಾನೆ ” ಎಂಬುದಾಗಿತ್ತಂತೆ!
ಬಹಳಷ್ಟು ಹೆತ್ತವರ ಪರಿಸ್ಥಿತಿಗಳೂ ಇದೇ ರೀತಿಯಾಗಿದೆ.
ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ನೀಟಾಗಿ ವಸ್ತ್ರ ಧರಿಸಿ ಕಳುಹಿಸುವ ಹೆತ್ತವರು, ಮದ್ರಸಾಗೆ ಕಳುಹಿಸುವಾಗ ಮಾತ್ರ ಬೇಕಾಬಿಟ್ಟಿಯಾಗಿ ಕಳುಹಿಸಿ ಕೊಡುವುದು ಬಹಳಷ್ಟು ಕಡೆ ನಡೆಯುತ್ತದೆ.
ಬೆಳಗೆದ್ದು ಮುಖ ತೊಳೆಯದೆ ಹಾಗೇ ಮದ್ರಸಾಗಳಿಗೆ ಬರುವಂತಹ ವಿದ್ಯಾರ್ಥಿಗಳೂ ಕೂಡ ಇದ್ದಾರೆ.
ಮದ್ರಸಾ ಅಂದರೆ ಹೇಗೂ ನಡೆಯುತ್ತದೆ ಎನ್ನುವಂತಹ ತಾತ್ಸಾರ ಭಾವನೆಗಳೇ ಇದಕ್ಕೆಲ್ಲ ಕಾರಣವಾಗಿದೆ.
ರಾಜ್ಯ ಹೆದ್ದಾರಿಗಳ ಬದಿಗಳಲ್ಲಿ ಇರುವ ಮದ್ರಸಾಗಳಿಗೆ ಬರುವ ಮಕ್ಕಳನ್ನು ಹೆಚ್ಚಾಗಿ ಜಾಗೃತೆವಹಿಸಬೇಕಾದ ಅನಿವಾರ್ಯತೆಯಿದೆ.
ರಸ್ತೆ ದಾಟುವಾಗ ಮಕ್ಕಳಿಗೆ ಎರಡು ಕಡೆ ಗಮನಹರಿಸುವುದು ಕಷ್ಟವಾಗಬಹುದು ಆದುದರಿಂದ ಹೆತ್ತವರು ಮಕ್ಕಳನ್ನು ಮದ್ರಸಾಗಳಿಗೆ ತಲುಪಿಸಿ, ಕರೆದುಕೊಂಡು ಬರುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗಿದೆ.
ಇನ್ನಿತರ ವಾಹನಗಳಲ್ಲಿ ಕಳುಹಿಸುವಾಗಲೂ ಮಕ್ಕಳನ್ನು ರಸ್ತೆ ದಾಟಿಸಿದ ನಂತರವೇ ಚಾಲಕರು ಹೊರಡಬೇಕಿದೆ.
ನಮ್ಮ ಕೆಲವೊಂದು ನಿರ್ಲಕ್ಷ್ಯಗಳು ಕೂಡ ಜೀವನಪೂರ್ತಿ ನಮ್ಮನ್ನು ಕಣ್ಣೀರಲ್ಲಾಗಿಸಬಹುದು.