ಮಂಗಳೂರು: ಮಂಗಳವಾರ ಬೆಳಗ್ಗೆ ಹೈಕೋರ್ಟ್ ಹಿಜಾಬ್ ಕುರಿತಾಗಿ ತೀರ್ಪು ನೀಡುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗುತ್ತಿದ್ದು, ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ನಾವು ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುತ್ತಿದ್ದೇವೆ. ಬಾಹ್ಯ ಪರೀಕ್ಷೆಗಳು ವೇಳಾಪಟ್ಟಿಯಂತೆ ಇರುತ್ತವೆ.ಎಲ್ಲಾ ಶಾಲಾ-ಕಾಲೇಜುಗಳ ಆಂತರಿಕ ಪರೀಕ್ಷೆಗಳನ್ನು ಮುಂದೂಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ವರು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲೂ ರಜೆ
ಉಡುಪಿ ಜಿಲ್ಲೆಯಲ್ಲೂ ಶಾಲೆ ಕಾಲೇಜುಗಳಿಗೆ ರಜೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮ ರಾವ್ ಅವರು ತಿಳಿಸಿದ್ದಾರೆ. ಉಭಯ ಜಿಲ್ಲೆಗಳಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ಮಂಗಳವಾರ ಒಂದು ದಿನದ ರಜೆ ನೀಡಲಾಗುವುದು. ಶಾಲಾ ಕಾಲೇಜುಗಳ ಸುತ್ತಮುತ್ತಲಿನ 200ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144ರಂತೆ ನಿಷೇಧಾಜ್ಞೆ ಈಗಾಗಲೇ ಜಾರಿಯಲ್ಲಿದ್ದು, ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.
ಅಲ್ಲದೆ ಜಿಲ್ಲೆಯಲ್ಲಿ ತೀರ್ಪಿಗೆ ಸಂಬಂಧಿಸಿ ಯಾವುದೇ ಪ್ರತಿಭಟನೆಯಾಗಲಿ, ಸಂಭ್ರಮಾಚರಣೆಯಾಗಲಿ ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಶಿವಮೊಗ್ಗ ಸೇರಿ ರಾಜ್ಯದ ಇತರ ಸೂಕ್ಷ್ಮ ಜಿಲ್ಲೆಗಳಲ್ಲೂ ರಜೆ ನೀಡುವ ಸಾಧ್ಯತೆಗಳಿದ್ದು, ಈ ಬಗ್ಗೆ ಇನ್ನಷ್ಟೇ ಅಧಿಕೃತ ಆದೇಶ ಹೊರಬರಬೇಕಿದೆ.







