janadhvani

Kannada Online News Paper

ನಾಮಪತ್ರ ಸಲ್ಲಿಸಲು ದಿನಗಣನೆ: ಟಿಕೆಟ್ ಆಕಾಂಕ್ಷಿಗಳ ಆತಂಕ

ಬೆಂಗಳೂರು, ಏ. 11- ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ದಿನಗಣನೆ ಸಮೀಪಿಸುತ್ತಿರುವ ಬೆನ್ನಲ್ಲೆ ಟಿಕೆಟ್ ಆಕಾಂಕ್ಷಿಗಳ ಎದೆಬಡಿತ ಜೋರಾಗಿದೆ. ಟಿಕೆಟ್ ಕೈತಪ್ಪುವ ಆತಂಕದಲ್ಲಿ ಕೆಲ ಅಭ್ಯರ್ಥಿಗಳು ತಮ್ಮ ಗಾಡ್‌ಫಾದರ್‌ಗಳ ಮೂಲಕ ಒತ್ತಡ ಹೇರಿ ಟಿಕೆಟ್ ಪಡೆಯಲು ಮುಗಿ ಬಿದಿದ್ದಾರೆ.

  • ಟಿಕೆಟ್‌ಗಾಗಿ ಆಕಾಂಕ್ಷಿಗಳ ಪೈಪೋಟಿ.
  • ಗಾಡ್‌ಫಾದರ್‌ಗಳ ಮೂಲಕ ಒತ್ತಡ.
  • ಶತಾಯ-ಗತಾಯ ಟಿಕೆಟ್ ಪಡೆಯುವ ಹಠ.
  • ಬೆಂಗಳೂರು-ದೆಹಲಿಯಲ್ಲಿ ನಾಯಕರ ಮನೆ ಬಾಗಿಲಲ್ಲಿ ಆಕಾಂಕ್ಷಿಗಳು.
  • 2ನೇ ಪಟ್ಟಿಗೆ ಬಿಜೆಪಿ ಕಸರತ್ತು.
  • ಮೊದಲ ಪಟ್ಟಿ ಅಂತಿಮಗೊಳಿಸಲು ಕಾಂಗ್ರೆಸ್ ಹರಸಾಹಸ.
  • ದೆಹಲಿಯಿಂದ ಬೆಂಗಳೂರಿಗೆ ಟಿಕೆಟ್ ಆಯ್ಕೆ ವಿಷಯ ವರ್ಗಾವಣೆ.

ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆದಿದ್ದು, ಟಿಕೆಟ್ ಖಾತರಿಯಾಗಿರುವ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಚುನಾವಣೆಗೆ ಪ್ರಚಾರಕ್ಕೆ ಸಿದ್ಧತೆ ಮಾಡಿಕೊಂಡು ಮತದಾರರ ಮನಗೆಲ್ಲುವ ಕಸರತ್ತು ನಡೆಸಿದ್ದಾರೆ.

ಮತ್ತೊಂದೆಡೆ ಟಿಕೆಟ್ ಸಿಗುವ ಬಗ್ಗೆ ಡೋಲಾಯಮಾನ ಸ್ಥಿತಿಯಲ್ಲಿರುವ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ತಮ್ಮ ತಮ್ಮ ಪಕ್ಷದ ಹಿರಿಯ ನಾಯಕರ ಮನೆ ಮುಂದೆ ಟಿಕೆಟ್‌ಗಾಗಿ ಯಡತಾಕುತ್ತಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಹೇಗಾದರು ಮಾಡಿ ಟಿಕೆಟ್ ಪಡೆಯಬೇಕೆನ್ನುವ ಹರಸಾಹಸ ನಡೆಸಿದ್ದು, ಶತಾಯ-ಗತಾಯ ಟಿಕೆಟ್ ಪಡೆದೇ ತೀರಬೇಕೆನ್ನುವ ಹಠದೊಂದಿಗೆ ಬೆಂಗಳೂರು ಮತ್ತು ದೆಹಲಿಯಲ್ಲಿ ಅಭ್ಯರ್ಥಿಗಳು ಬೀಡುಬಿಟ್ಟಿದ್ದು, ರಾಜಕೀಯ ಲಾಭಿ ಬಿರುಸುಗೊಳಿಸಿದ್ದಾರೆ.

ಬಿಜೆಪಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ 2ನೇ ಪಟ್ಟಿ ಸಿದ್ಧಪಡಿಸಲು ತಮ್ಮ ನಿವಾಸ ಹಾಗೂ ಪಕ್ಷದ ಕಚೇರಿಯಲ್ಲಿ ಹಿರಿಯ ಮುಖಂಡರೊಂದಿಗೆ ಸಭೆ ನಡೆಸಿ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಗೆಲುವೇ ಮಾನದಂಡ: ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ನೇತೃತ್ವದ ಪರಿಶೀಲನಾ ಸಮಿತಿ ಗೆಲುವಿನ ಮಾನದಂಡವನ್ನು ಪ್ರಧಾನವಾಗಿಟ್ಟುಕೊಂಡು ಎಲ್ಲವನ್ನೂ ಅಳೆದು-ತೂಗಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ್ದಾರೆ. ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿಯವರು ಪರಿಶೀಲಿಸಿದ ನಂತರ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ.

ಪರಿಶೀಲನಾ ಸಮಿತಿ ಅಂತಿಮಗೊಳಿಸಿದ ಪಟ್ಟಿಯ ಬಗ್ಗೆ ಇದೇ ತಿಂಗಳ 13 ರಂದು ನಡೆಯಲಿರುವ ಕಾಂಗ್ರೇಸ್‌ನ ಕೇಂದ್ರಿಯ ಚುನಾವಣಾ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗುತ್ತದೆ.

ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ನೇತೃತ್ವದ ಕೇಂದ್ರೀಯ ಚುನಾವಣಾ ಸಮಿತಿ ಅಭ್ಯರ್ಥಿಗಳ ಆಯೋಗ ಸಂಬಂಧಿಸಿದಂತೆ ಬದಲಾವಣೆ ಮಾಡುವ ಪರಮಾಧಿಕಾರ ಹೊಂದಿದ್ದು, ಈಗಿರುವ ಪಟ್ಟಿಯಲ್ಲಿ ಕೆಲ ಬದಲಾವಣೆಗಳಾದರೂ ಅಚ್ಚರಿಪಡುವಂತಿಲ್ಲ.

ಪಕ್ಷದ ಕೇಂದ್ರಿಯ ಚುನಾವಣಾ ಸಮಿತಿ ಸಭೆಯಲ್ಲಿರುವ ಕೆಲ ಕೇಂದ್ರ ನಾಯಕರು `ಕೈ` ಚಳಕ ತೋರಿದರೆ ಪಟ್ಟಿ ಪರಿಷ್ಕರಣೆ ಆಗುತ್ತದೆ ಈ ಹಿಂದೆ ಕೇಂದ್ರಿಯ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಲವು ಮಾರ್ಪಾಡುಗಳಾದ ಉದಾಹರಣೆಗಳು ಸಾಕಷ್ಟಿವೆ. ಹಾಗಾಗಿ ಪರಿಶೀಲನಾ ಸಮಿತಿ ಅಂತಿಮಗೊಳಿಸಿರುವ ಪಟ್ಟಿ ಬದಲಾವಣೆ ಸಹಜ ಎಂದು ಹೇಳಲಾಗಿದೆ.

ಕೇಂದ್ರ ಚುನಾವಣಾ ಸಮಿತಿ ಸಭೆ ನಂತರ ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿಯವರ ಅವಗಾಹನೆ ನಂತರವೇ ಪಟ್ಟಿ ಬಿಡುಗಡೆಯಾಗಲಿದ್ದು, ಕಾಂಗ್ರೆಸ್ ಮೂಲಗಳ ಪ್ರಕಾರ ಇನ್ನು 2-3 ದಿನಗಳ ನಂತರವೇ ಪಟ್ಟಿ ಬಿಡುಗಡೆಯಾಗಲಿದೆ.

ಮೊದಲ ಹಂತದಲ್ಲಿ ಸುಮಾರು 120 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ ಎಂದು ಮೂಲಗಳು ಹೇಳಿವೆ.

ಅಭ್ಯರ್ಥಿಗಳ ಆಯ್ಕೆ ಸಂಬಂಧ ಪರಿಶೀಲನಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಎರಡು ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸೇರಿದಂತೆ ಪ್ರಮುಖ ಮುಖಂಡರು ನಿನ್ನೆ ರಾತ್ರಿಯೇ ನಗರಕ್ಕೆ ವಾಪಸ್ ಆದರು.

ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿ ನೇತೃತ್ವದಲ್ಲಿ ಈ ತಿಂಗಳ 13 ರಂದು ನಡೆಯಲಿರುವ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಈ ಎಲ್ಲಾ ಮುಖಂಡರು ನಾಳೆ ರಾತ್ರಿ ಮತ್ತೆ ದೆಹಲಿಗೆ ತೆರಳುವರು.

ಆಕಾಂಕ್ಷಿಗಳ ದಂಡು

ದೆಹಲಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರು ವಾಪಾಸ್ ಆದ ಹಿನ್ನೆಲೆಯಲ್ಲಿ ಅವರ ನಿವಾಸದಲ್ಲಿ ಟಿಕೆಟ್ ಆಕಾಂಕ್ಷಿಗಳ ದಂಡು ನೆರೆದಿದ್ದು, ಟಿಕೆಟ್‌ಗಾಗಿ ದುಂಬಾಲು ಬಿದ್ದು ಪರಿಪರಿಯಾಗಿ ಬೇಡಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

ರಾಹುಲ್ ತೀರ್ಮಾನ

ಮುಖ್ಯಮಂತ್ರಿ ಸಿದ್ದರಾಮಯ್ಯರವರಂತೆ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸಹ ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಯ ಬಯಿಸಿದ್ದು, ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

error: Content is protected !! Not allowed copy content from janadhvani.com