ಹೊಸದಿಲ್ಲಿ: ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದ್ದ ಬಹು ರೂಪಾಂತರಿ ಓಮಿಕ್ರಾನ್ ಕೋವಿಡ್ ತಳಿ ಭಾರತದಲ್ಲಿಯೂ ಕಾಣಿಸಿಕೊಂಡಿದೆ. ದೇಶದಲ್ಲಿ ಎರಡು ಓಮಿಕ್ರಾನ್ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಎರಡೂ ಪ್ರಕರಣಗಳು ಕರ್ನಾಟಕದಲ್ಲಿ ದೃಢಪಟ್ಟಿದೆ.
ಕೇಂದ್ರ ಆರೋಗ್ಯ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯದ 46 ವರ್ಷದ ವ್ಯಕ್ತಿ ಹಾಗೂ 66 ವರ್ಷದ ವೃದ್ಧರೊಬ್ಬರಲ್ಲಿ ಓಮಿಕ್ರಾನ್ ತಳಿ ಇದೆ ಎಂದು ಗುರುವಾರ ತಿಳಿಸಿದೆ. ಈ ಇಬ್ಬರೂ ಬೆಂಗಳೂರಿನ ನಿವಾಸಿಗಳು ಎಂದು ಹೇಳಲಾಗಿದೆ. ಇಬ್ಬರಲ್ಲಿಯೂ ಲಘು ಪ್ರಮಾಣದ ಕೋವಿಡ್ ಲಕ್ಷಣಗಳು ಇವೆ. ಯಾವುದೇ ಅಪಾಯಕಾರಿ ಗಂಭೀರ ಲಕ್ಷಣಗಳು ಕಾಣಿಸಿಲ್ಲ ಎಂದು ಸರ್ಕಾರ ತಿಳಿಸಿದೆ.
ಈ ಇಬ್ಬರೂ ವ್ಯಕ್ತಿಗಳು ಆಫ್ರಿಕಾದಿಂದ ಕರ್ನಾಟಕಕ್ಕೆ ಮರಳಿದ್ದರು ಎನ್ನಲಾಗಿದೆ. ಅವರ ಕೋವಿಡ್ ಪರೀಕ್ಷೆ ವರದಿಯಲ್ಲಿ ಪಾಸಿಟಿವ್ ಕಂಡುಬಂದಿದ್ದು, ವಿಭಿನ್ನ ಸ್ವರೂಪ ಕಾಣಿಸಿಕೊಂಡಿದ್ದರಿಂದ ಜಿನೋಮ್ ಸೀಕ್ವೆನ್ಸಿಂಗ್ಗಾಗಿ ಮಾದರಿಗಳನ್ನು ರವಾನಿಸಲಾಗಿತ್ತು. ಈಗ ಅವರಲ್ಲಿ ಓಮಿಕ್ರಾನ್ ತಳಿ ಇರುವುದು ದೃಢಪಟ್ಟಿದೆ. ಇಬ್ಬರೂ ಸೋಂಕಿತರ ಎಲ್ಲ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ. ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಂಪರ್ಕಿತರ ಖಾಸಗಿತನ ಕಾಪಾಡುವ ಉದ್ದೇಶದಿಂದ ಇಬ್ಬರೂ ರೋಗಿಗಳ ಗುರುತುಗಳನ್ನು ಸರ್ಕಾರ ಬಹಿರಂಗಪಡಿಸಿಲ್ಲ. ‘ಓಮಿಕ್ರಾನ್ ಪತ್ತೆಗೆ ಸಂಬಂಧಿಸಿದಂತೆ ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಇದರ ಬಗ್ಗೆ ಜಾಗೃತಿ ಬಹಳ ಅವಶ್ಯಕವಾಗಿದೆ. ಜನರು ಕೋವಿಡ್ ಶಿಷ್ಟಾಚಾರಗಳನ್ನು ಸಮರ್ಪಕವಾಗಿ ಪಾಲಿಸಬೇಕು. ಗುಂಪುಗಳಲ್ಲಿ ಸೇರುವುದನ್ನು ತಡೆಯಬೇಕು’ ಎಂದು ಸಲಹೆ ನೀಡಿದ್ದಾರೆ.
ಜಗತ್ತಿನಾದ್ಯಂತ ಈವರೆಗೂ 29 ದೇಶಗಳಲ್ಲಿ ಓಮಿಕ್ರಾನ್ ತಳಿ ಪತ್ತೆಯಾಗಿದ್ದು, 373 ಪ್ರಕರಣಗಳು ಖಚಿತವಾಗಿದೆ. ಕೊರೊನಾ ವೈರಸ್ ಸೋಂಕಿನ ಇತರೆ ಪರಿಚಿತ ತಳಿಗಳಿಗೆ ಹೋಲಿಸಿದರೆ ಓಮಿಕ್ರಾನ್ ತಳಿ ಐದು ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
‘ವಿದೇಶದಿಂದ ಮರಳಿದ ಕರ್ನಾಟಕದ ಇಬ್ಬರಲ್ಲಿ ಓಮಿಕ್ರಾನ್ ತಳಿ ಪತ್ತೆಯಾಗಿದೆ. ಆರೋಗ್ಯ ಸಚಿವಾಲಯ ಸ್ಥಾಪಿಸಿರುವ INSACOG 37 ಲ್ಯಾಬೊರೇಟರಿಗಳ ಒಕ್ಕೂಟವು ಜೆನೋಮ್ ಸೀಕ್ವೆನ್ಸಿಂಗ್ ಮೂಲಕ ಇದನ್ನು ಪತ್ತೆಹಚ್ಚಿದೆ. ಇವು ಭಾರತದಲ್ಲಿ ದೃಢಪಟ್ಟ ಮೊದಲ ಪ್ರಕರಣಗಳಾಗಿವೆ’ ಎಂದು ಅಗರ್ವಾಲ್ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಒಬ್ಬ ವ್ಯಕ್ತಿ, ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಆಗ ಅವರಲ್ಲಿ ಕೋವಿಡ್ ಪಾಸಿಟಿವ್ ಬಂದಿತ್ತು. ಅವರು ಕ್ವಾರೆಂಟೈನ್ಗೆ ಒಳಗಾಗಿದ್ದರು. ಮೂರು ದಿನಗಳ ಬಳಿಕ ಮತ್ತೆ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಆಗ ಅವರ ವರದಿ ನೆಗೆಟಿವ್ ಬಂದಿತ್ತು ಎನ್ನಲಾಗಿದೆ. ಹೀಗಾಗಿ ಅವರು ಕ್ವಾರೆಂಟೈನ್ ಮುಗಿಸಿ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ.
66 ವರ್ಷದ ವ್ಯಕ್ತಿ ನ. 20ರಂದು ರಾಜ್ಯಕ್ಕೆ ಮರಳಿದ್ದು, ಅವರಲ್ಲಿ ಡೆಲ್ಟಾ ತಳಿ ಸೋಂಕು ಇದೆ ಎಂದು ಭಾವಿಸಲಾಗಿತ್ತು. ಆದರೆ ಜೆನೋಮ್ ಸೀಕ್ವೆನ್ಸಿಂಗ್ನಿಂದ ಅವರಲ್ಲಿ ಹೊಸ ತಳಿ ಇರುವುದು ಪತ್ತೆಯಾಗಿದೆ.
















ಇನ್ನಷ್ಟು ಸುದ್ದಿಗಳು
ವಲಸಿಗರಿಗೆ ಶುಭ ಸುದ್ದಿ: ಜಿದ್ದಾ–ಕೋಝಿಕ್ಕೋಡ್ ನಡುವೆ ಫ್ಲೈನಾಸ್ ನೇರ ವಿಮಾನ ಸೇವೆ ಆರಂಭ
ಸಮಸ್ತ ಉಪಾಧ್ಯಕ್ಷ ಸಯ್ಯಿದ್ ಅಲಿ ಬಾಫಖಿ ತಂಙಳ್ ವಫಾತ್
ದಕ್ಷಿಣ ಕನ್ನಡ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ ಬಹರೈನ್: ನೂತನ ಪದಾಧಿಕಾರಿಗಳು
ಇಕ್ಬಾಲ್ ಬಾಳಿಲರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಹಾಲು–ಮೊಸರಿನ ದರ ಏರಿಕೆ: ಪರ್ಯಾಯದ ಹೆಸರಿನಲ್ಲಿ ಕಲಬೆರಕೆಯ ಅಪಾಯ
ಅಲ್ ಮದೀನದಲ್ಲಿ ವಿಜೃಂಭಿಸಿದ ವಿದ್ಯಾರ್ಥಿಗಳ ಸಾಹಿತ್ಯ–ಸಾಂಸ್ಕೃತಿಕ ಸಂಗಮ ‘ಗುಲ್ಶನ್’
ಮೀರಾಸ್ ಎಜು ಗೋಲ್ – ನೂತನ ಕಾರ್ಯನಿರ್ವಾಹಕ ಸಮಿತಿ ಅಸ್ತಿತ್ವಕ್ಕೆ
ಜೈಲು ಕಂಬಿಗಳ ಹಿಂದೆ ನರಳುವ ಜೀವಗಳು: ಕರಾಳ ಮಾದಕವಸ್ತು ಜಾಲದ ಕ್ರೂರ ಮುಖ
ಯೆನೆಪೋಯ ವಿಶ್ವವಿದ್ಯಾಲಯದಿಂದ ಕಾಂತಪುರಂ ಉಸ್ತಾದರಿಗೆ ಗೌರವ ಡಾಕ್ಟರೇಟ್
ಇಂದು ಕಾಪುವಿನಲ್ಲಿ ಐತಿಹಾಸಿಕ ಸಮಸ್ತ ತಾತ್ವಿಕ ಸಮಾವೇಶ- ಎಸ್ಸೆಸ್ಸೆಫ್ ಕಾಪು ಡಿವಿಷನ್ ಯಶಸ್ವಿಗೆ ಕರೆ