ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಒಮಿಕ್ರಾನ್ ಎಂಬ ಕೊರೊನಾ ರೂಪಾಂತರಿ ವೈರಸ್ನಿಂದಾಗಿ ಭಾರತದಲ್ಲಿ ಮತ್ತೆ ಕೊವಿಡ್ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣದ ನಿರ್ಬಂಧಗಳನ್ನು ಮುಕ್ತಗೊಳಿಸುವ ಬಗ್ಗೆ ಮರು ಪರಿಶೀಲನೆ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಇಂದು ನಿರ್ದೇಶನ ನೀಡಿದ್ದಾರೆ.
ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ನರೇಂದ್ರ ಮೋದಿ ದೇಶದ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ಪರೀಕ್ಷೆ ಮಾಡಬೇಕು. ಹಾಗೇ, ಈ ಕುರಿತ ಹೊರಡಿಸಲಾಗಿರುವ ಮಾರ್ಗಸೂಚಿಗಳ ಅಗತ್ಯವನ್ನು ಮರು ಪರಿಶೀಲಿಸಬೇಕು ಎಂದಿದ್ದಾರೆ.
ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ ಬೆನ್ನಲ್ಲೇ ಒಮಿಕ್ರಾನ್ ಸೋಂಕಿನ ಆರ್ಭಟ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆ ಆದೇಶವನ್ನು ಪರಿಶೀಲಿಸುವಂತೆ ಉನ್ನತ ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಿನ್ನೆಯಷ್ಟೇ ಡಿಸೆಂಬರ್ 15ರಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡುವುದಾಗಿ ಸರ್ಕಾರ ಘೋಷಿಸಿತ್ತು.
ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿರುವ ಕೊರೊನಾ ಹೊಸ ರೂಪಾಂತರಿ, ಒಮಿಕ್ರಾನ್ ತುಂಬಾ ಪ್ರಬಲವಾಗಿದ್ದು ಮತ್ತು ಅದು ಲಸಿಕೆಯನ್ನೂ ಸೋಲಿಸಿ ಜನರಿಗೆ ಮತ್ತೆ ಕಾಡಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ, ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಮೂರು ಪ್ರಮುಖ ನಿರ್ದೇಶನ ನೀಡಿದ್ದಾರೆ. ಒಂದು, ಕೊವಿಡ್ ಲಸಿಕಾಕರಣವನ್ನು ಚುರುಕುಗೊಳಿಸಿ, ಎರಡನೇ ಡೋಸ್ ಆಗದಿರುವವರನ್ನು ಕರೆತಂದು ಲಸಿಕೆ ಕೊಡುವುದು; ರಾಜ್ಯಗಳ ಜೊತೆ ನಿರಂತರ ಸಂಪರ್ಕ ಬೆಳೆಸಿ ಕೊವಿಡ್ ನಿಯಂತ್ರಣ ಮತ್ತು ಲಸಿಕಾಕರಣ ಪೂರೈಸುವುದು ಮತ್ತು ಕೊವಿಡ್ ಪರೀಕ್ಷೆಯನ್ನು ಹೆಚ್ಚಿಸುವುದು.
ಹೊಸ COVID-19 ರೂಪಾಂತರ ಒಮಿಕ್ರಾನ್ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆದೇಶ ಬಂದಿದೆ. ಈ ಹೊಸ ಕೊರೊನಾ ರೂಪಾಂತರಿ ದಕ್ಷಿಣ ಆಫ್ರಿಕಾದಲ್ಲಿ ಮೊದಲು ವರದಿಯಾಗಿತ್ತು. ನಂತರ ಬೋಟ್ಸ್ವಾನಾ, ಬೆಲ್ಜಿಯಂ, ಇಸ್ರೇಲ್ ಮುಂತಾದ ದೇಶಗಳಲ್ಲಿ ಕಂಡುಬಂದಿತ್ತು.
ವಿಶ್ವದ ಹಲವು ದೇಶಗಳಲ್ಲಿ ಕೊರೊನಾದ ಹೊಸ ತಳಿ B.1.1.529 ವೈರಸ್ ಪತ್ತೆಯಾಗಿದ್ದು ವಿಶ್ವ ಆರೋಗ್ಯ ಸಂಸ್ಥೆ ಅದನ್ನು ಓಮಿಕ್ರಾನ್ ಎಂದು ಹೆಸರಿಸಿದೆ. ಹೀಗಾಗಿ ಕೇಂದ್ರ ಸರ್ಕಾರವೂ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಿದೆ. ಐರೋಪ್ಯ ರಾಷ್ಟ್ರಗಳು, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸ್ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಸಿಂಗಾಪುರ, ಹಾಂಗ್‌ಕಾಂಗ್, ಇಸ್ರೆಲ್‌ನಿಂದ ಭಾರತಕ್ಕೆ ಬರುವವರಿಗೆ ಕೊವಿಡ್ ಟೆಸ್ಟ್ ಸೇರಿ ಹೆಚ್ಚುವರಿ ಕ್ರಮ ಅನುಸರಿಸಲು ಸೂಚನೆ ನೀಡಲಾಗಿದೆ.
ಜಗತ್ತಿನಾದ್ಯಂತ ಕೋವಿಡ್-19 ಸೋಂಕುಗಳು ಮತ್ತು ಪ್ರಕರಣಗಳ ಸ್ಥಿತಿಗತಿಯ ವಿವರ ನೀಡಲಾಯಿತು. ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಪ್ರಪಂಚದಾದ್ಯಂತದ ದೇಶಗಳು COVID-19ರ ಹೊಸ ಅಲೆಯ ಕಾರಣದಿಂದಾಗಿ, ಮತ್ತೆ ತುಂಬಾ ಪ್ರಕರಣ ವರದಿಯಾಗುತ್ತಿವೆ ಎಂದು ಅಧಿಕಾರಿಗಳು ಹೈಲೈಟ್ ಮಾಡಿದ್ದಾರೆ. ಪ್ರಧಾನಮಂತ್ರಿಯವರು ಕೋವಿಡ್-19 ಪ್ರಕರಣಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಪರಿಸ್ಥಿತಿ ಮತ್ತು ಕೊವಿಡ್ ಪರೀಕ್ಷೆ ನಡೆಸಿದಾಗ ಎಷ್ಟು ಧನಾತ್ಮಕ ದರ ಭಾರತದಲ್ಲಿ (positivity rate) ವರದಿಯಾಗುತ್ತಿದೆ ಎಂಬುದನ್ನು ಮೋದಿ ಪರಿಶೀಲಿಸಿದರು.
ಹೊಸ ವೇರಿಯಂಟ್ ‘ಓಮಿಕ್ರಾನ್’ ಅದರ ಗುಣಲಕ್ಷಣಗಳು ಮತ್ತು ವಿವಿಧ ದೇಶಗಳಲ್ಲಿ ಕಂಡುಬಂದ ಅದರ ಪ್ರಭಾವದ ಬಗ್ಗೆ ಅಧಿಕಾರಿಗಳು ಪ್ರಧಾನಿಗೆ ವಿವರಿಸಿದರು. ಭಾರತಕ್ಕೆ ಇದರ ಪರಿಣಾಮಗಳ ಬಗ್ಗೆಯೂ ಚರ್ಚಿಸಲಾಯಿತು. ಹೊಸ ರೂಪಾಂತರಿ ಬಂದಿರುವ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಧಾನಮಂತ್ರಿ ಮಾತನಾಡಿದರು. ಹೊಸ ರೂಪಾಂತರಿ ತಂದೊಡ್ಡಿರುವ ಸಂಕಟದ ಹಿನ್ನೆಲೆಯಲ್ಲಿ ಜನರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಕೊವಿಡ್ ಲಕ್ಷಣ ಮರೆಮಾಚುವಿಕೆ ಮಾಡಬಾರದು, ಮತ್ತು ಸಾಮಾಜಿಕ ಅಂತರದಂತಹ ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು. ‘ಅಪಾಯದಲ್ಲಿರುವ’ ಎಂದು ಗುರುತಿಸಲಾದ ದೇಶಗಳ ಮೇಲೆ ನಿರ್ದಿಷ್ಟ ಗಮನವನ್ನು ಕೇಂದ್ರೀಕರಿಸಿ, ಎಲ್ಲಾ ಅಂತರಾಷ್ಟ್ರೀಯ ಯಾತ್ರಿಕರ ಆಗಮನದ ಮೇಲ್ವಿಚಾರಣೆ, ಮಾರ್ಗಸೂಚಿಗಳ ಪ್ರಕಾರ ಅವರ ಪರೀಕ್ಷೆಯ ಅಗತ್ಯವನ್ನು ಪ್ರಧಾನಿ ಎತ್ತಿ ತೋರಿಸಿದರು
ಬಿ 1.1.529 ಎಂದು ಸಂಕೇತಿಸಲಾದ ಹೊಸ ರೂಪಾಂತರಿ ಕೊರೊನಾ ಬೋಟ್ಸ್ವಾನಾದಲ್ಲಿ ಮೂರು, ದಕ್ಷಿಣ ಆಫ್ರಿಕಾದಲ್ಲಿ ಆರು, ಹಾಂಕ್‍ಕಾಂಗ್‍ನಲ್ಲಿ ಎರಡು ಪ್ರಕರಣಗಳು ನಿನ್ನೆ ಪತ್ತೆಯಾಗಿವೆ. ದಕ್ಷಿಣ ಆಫ್ರಿಕಾದ ಮೂರು ಪ್ರಾಂತ್ಯಗಳಲ್ಲಿ ಒಟ್ಟು 22 ಪ್ರಕರಣಗಳು ಪತ್ತೆಯಾಗಿವೆ. ಈ ಹೊಸ ಕೊರೊನಾ ಸೋಂಕು ಅತ್ಯಂತ ಅಪಾಯಕಾರಿ ಎನ್ನಲಾಗಿದ್ದು, ಇದಕ್ಕೆ ಲಸಿಕೆಯೂ ಲಭ್ಯವಿಲ್ಲ. ಹೀಗಾಗಿ, ವಿಶ್ವದ ಹಲವು ರಾಷ್ಟ್ರಗಳು ಕಟ್ಟೆಚ್ಚರ ವಹಿಸಿದ್ದು, ಹೊಸ ಸೋಂಕು ಪತ್ತೆಯಾದ ಆರು ರಾಷ್ಟ್ರಗಳಿಂದ ವಿಮಾನ ಸಂಚಾರಕ್ಕೆ ಬ್ರಿಟನ್ ತಾತ್ಕಾಲಿಕ ಕಡಿವಾಣ ಹಾಕಿದೆ. ಬೋಟ್ಸ್ವಾನ, ಜಿಂಬಾಂಬೆ ಮೋಜಬಿಕ್ಯೂ, ನಂಬಿಯಾ, ಇಸ್ಟವಾನಿ, ದಕ್ಷಿಣ ಆಫ್ರಿಕಾ, ಲೆಸೋಥೋ ರಾಷ್ಟ್ರಗಳ ವಿಮಾನಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಆಫ್ರಿಕಾದಲ್ಲಿ ದೈನಂದಿನ ಕೊರೊನಾ ಸೋಂಕುಗಳ ಸಂಖ್ಯೆ ಈ ತಿಂಗಳ ಆರಂಭದಿಂದ ಹತ್ತು ಪಟ್ಟು ಹೆಚ್ಚಾಗಿದೆ. ಹಠಾತ್ ಸ್ಪೈಕ್ ಮತ್ತು ಹೊಸ ರೂಪಾಂತರಕ್ಕೆ ಪ್ರತಿಕ್ರಿಯಿಸಿದ ಬ್ರಿಟನ್ ದೇಶ ಮತ್ತು ಇತರ 5 ದಕ್ಷಿಣ ಆಫ್ರಿಕಾದ ರಾಷ್ಟ್ರಗಳಿಂದು ಬೇರೆ ದೇಶಗಳಿಗೆ ಪ್ರಯಾಣವನ್ನು ನಿಷೇಧಿಸಲಾಗಿದೆ. ಈ ರೂಪಾಂತರವು ಡೆಲ್ಟಾಕ್ಕಿಂತ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ
ಇಂದಿನ ಸಭೆಯಲ್ಲಿ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ, ನೀತಿ ಆಯೋಗದ ಸದಸ್ಯ ವಿ.ಕೆ. ಪಾಲ್, ಗೃಹ ಕಾರ್ಯದರ್ಶಿ ಎ.ಕೆ. ಭಲ್ಲಾ; ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಇತರರು ಪಾಲ್ಗೊಂಡಿದ್ದರು.