ನವದೆಹಲಿ, ಏ.6:-ನಿಮಗೆ ಪ್ರತಿಯೊಂದಕ್ಕೂ ಆಧಾರ್ ಬೇಕು. ನೀವು 144 ಅಧಿಸೂಚನೆಗಳನ್ನು ಹೊರಡಿಸಿದ್ದೀರಿ. ಮೊಬೈಲ್ ಫೋನ್ ಸಂಖ್ಯೆಯನ್ನೂ ಆಧಾರ್ ಜತೆ ಜೋಡಿಸಬೇಕೆಂದು ಏಕೆ ಬಯಸುತ್ತೀರಿ? ಎಲ್ಲರನ್ನೂ ಉಗ್ರವಾದಿಗಳು ಅಥವಾ ಕಾನೂನು ಉಲ್ಲಂಘಕರೆಂದು ಅಂದುಕೊಂಡಿದ್ದೀರಾ?ಪ್ರತಿಯೊಂದು ವ್ಯವಹಾರ ಗಳಿಗೂ ಆಧಾರ್ ಕಡ್ಡಾಯಗೊಳಿಸುವುದು ಸಾಧ್ಯವೇ? ಇದು ಸುಪ್ರೀಂಕೋರ್ಟ್ ನ್ಯಾಯಾಧೀಶ ಡಿ.ವೈ.ಚಂದ್ರ ಚೂಡ್ ಕೇಂದ್ರ ಸರ್ಕಾರಕ್ಕೆ ಕೇಳಿರುವ ಪ್ರಶ್ನೆಗಳು.
ಆಧಾರ್ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ದಾಖಲಿಸಲ್ಪಟ್ಟಿರುವ 27 ಅಪೀಲುಗಳ ಮೇಲಿನ ವಿಚಾರಣೆ ನಡೆಸುತ್ತಿರುವ ಪಂಚ ನ್ಯಾಯಾಧೀಶರ ಪೀಠದಲ್ಲಿ ನ್ಯಾ.ಚಂದ್ರಚೂಡ್, ಸರಕಾರ ಕೊಡಮಾಡುವ ವಿವಿಧ ಸವಲತ್ತುಗಳನ್ನು ಬಡವರಿಗೆ ತಲುಪಿಸಲು, ಅಕ್ರಮ ಹಣ ವ್ಯವಹಾರಗಳನ್ನು ತಡೆಯಲು ಹಾಗೂ ತೆರಿಗೆ ಸಂಗ್ರಹದಲ್ಲಿ ಸುಧಾರಣೆ ತರಲು ಆಧಾರ್ ಜೋಡಣೆ ಅರ್ಥವಾಗುವಂತಹುದ್ದಾದರೂ ಪ್ರತಿಯೊಂದಕ್ಕೂ ಆಧಾರ್ ಜೋಡಣೆ ಏಕೆ ಬಯಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ನ್ಯಾಯಾಧೀಶರಿಗೆ ಕೂಡಲೇ ಪ್ರತಿಕ್ರಿಯೆ ನೀಡಿದ ಕೇಂದ್ರ ಪರ ವಕೀಲ ಕೆ ಕೆ ವೇಣುಗೋಪಾಲ್, ಜಮ್ಮು ಕಾಶ್ಮೀರದಲ್ಲಿ ಉಗ್ರವಾದಿಗಳು ಸುಲಭವಾಗಿ ಸಿಮ್ ಕಾರ್ಡ್‍ಗಳನ್ನು ಪಡೆಯುತ್ತಿರು ವುದರಿಂದ ಮೊಬೈಲ್ ಸಂಖ್ಯೆಯನ್ನೂ ಆಧಾರ್ ಜತೆ ಜೋಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಈ ಉತ್ತರದಿಂದ ಸಮಾಧಾನಗೊಳ್ಳದ ನ್ಯಾಯಾಧೀಶರು, ನಾವೇನೂ ಸರಕಾರದ ಜಾಣ್ಮೆಯನ್ನು ಪ್ರಶ್ನಿಸುತ್ತಿಲ್ಲ. ಆದರೆ ಉಗ್ರರು ಸಿಮ್ ಕಾರ್ಡ್‍ಗಳನ್ನು ಉಪಯೋಗಿಸುತ್ತಾರೆಂದು ನಮಗನಿಸುತ್ತಿಲ್ಲ. ಅವರು ಸ್ಯಾಟಲೈಟ್ ಫೋನುಗಳನ್ನು ಬಳಸುತ್ತಾರೆ ಎಂದು ತಿಳಿಸಿದರು. ಮಾರ್ಚ್ ಅಂತ್ಯದೊಳಗೆ ಮೊಬೈಲ್ ಫೋನ್ ಸಂಖ್ಯೆಗಳನ್ನು ಆಧಾರ್ ಜತೆ ಜೋಡಿಸಬೇಕೆಂದು ಸರಕಾರ ಹೊರಡಿಸಿದ್ದ ಸೂಚನೆಯನ್ನು ಕಳೆದ ತಿಂಗಳು ಸುಪ್ರೀಂ ಕೋರ್ಟ್ ತಡೆಹಿಡಿದಿತ್ತು.