janadhvani

Kannada Online News Paper

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ರಾಷ್ಟ್ರಪತಿಯಿಂದ ಪದ್ಮಶ್ರೀ ಪ್ರದಾನ

ತಾನು ಅಕ್ಷರ ಕಲಿಯದಿದ್ದರೂ ತನ್ನೂರಿನ ಮಕ್ಕಳು ಅಕ್ಷರದಿಂದ ವಂಚಿತರಾಗಬಾರದೆಂದು ಭಗೀರಥ ಪ್ರಯತ್ನಪಟ್ಟು ತನ್ನೂರಿಗೆ ಸರಕಾರಿ ಶಾಲೆಯನ್ನು ತರಿಸಿದ್ದರು

ನವದೆಹಲಿ,ನ.8: ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ರಾಷ್ಟ್ರಪತಿ ರಾಮನಾಥ್ ಗೋವಿಂದ್ ಅವರು ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಇಂದು ಪ್ರದಾನ ಮಾಡಿದರು.

ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಚಿವ ಸಂಪುಟದ ಹಿರಿಯ ಸಹೋದ್ಯೋಗಿಗಳು ಉಪಸ್ಥಿತರಿದ್ದರು.

ಹಾಜಬ್ಬ ಅವರು ಭಾನುವಾರ ದೆಹಲಿ ಪ್ರಯಾಣ ನಡೆಸಿದ್ದರು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರು ಸ್ಪೈಸ್ ಜೆಟ್ ವಿಮಾನದಲ್ಲಿ ಮುಂಬಯಿ ಮೂಲಕ ದೇಶದ ರಾಜಧಾನಿ ತಲುಪಿದ್ದರು. ಎಂದಿನಂತೆ ಮೊಣ ಕಾಲಿನಿಂದ ಮೇಲೆ ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಕೈಯಲ್ಲೊಂದು ಕಪ್ಪು ಬ್ಯಾಗ್ ಹಿಡಿದುಕೊಂಡು ಅವರು ವಿಮಾನ ಏರಿದರು. ಇದೀಗ ರಾಷ್ಟ್ರಪತಿಭವನಕ್ಕೂ ಅದೇ ರೀತಿಯ ಮಾಸಿದ ಬಿಳಿ ಪಂಚೆ ಮತ್ತೆ ಬಿಳಿ ಶರ್ಟ್ ತೊಟ್ಟು ಕೈಲ್ಲಿ ಪ್ಲಾಸ್ಟಿಕ್ ಬ್ಯಾಗ್ ಹಿಡಿದುಕೊಂಡು ತೆರಳಿದ್ದರು.

ಕಿತ್ತಳೆ ಮಾರಿ ಜೀವನ ಸಾಗಿಸುತ್ತಿದ್ದ ಹರೇಕಳ ಹಾಜಬ್ಬ ಅವರು ಶಿಕ್ಷಣ ಕ್ಷೇತ್ರದಲ್ಲಿ ಇಡೀ ದೇಶದಲ್ಲೇ ದೊಡ್ಡ ಹೆಸರುವಾಸಿಯಾಗಿದ್ದಾರೆ. ತಾನು ಅಕ್ಷರ ಕಲಿಯದಿದ್ದರೂ ತನ್ನೂರಿನ ಮಕ್ಕಳು ಅಕ್ಷರದಿಂದ ವಂಚಿತರಾಗಬಾರದೆಂದು ಭಗೀರಥ ಪ್ರಯತ್ನಪಟ್ಟು ತನ್ನೂರಿಗೆ ಸರಕಾರಿ ಶಾಲೆಯನ್ನು ತರಿಸಿದ್ದರು. ಅವರ ಪ್ರಯತ್ನದ ಫಲವಾಗಿ ಪ್ರಾಥಮಿಕ ಶಾಲೆ ಪ್ರೌಢಶಾಲೆಯಾಗಿ ರೂಪುಗೊಂಡಿದೆ.

error: Content is protected !! Not allowed copy content from janadhvani.com