ಬೆಂಗಳೂರು: ದೇಶ ಮತ್ತು ಹಿಂದುಗಳ ರಕ್ಷಣೆ ಮಾಡಲು ಆರ್ ಎಸ್ ಎಸ್ ನಾಯಕರಿಗೆ ಗುತ್ತಿಗೆ ಕೊಟ್ಟವರಾರು? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ. ಈ ಕುರಿತಾಗಿ ಸರಣಿ ಟ್ವೀಟ್ ಮಾಡಿದ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹಾಗೂ ಆರ್‌ಎಸ್‌ಎಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆರ್ ಎಸ್ ಎಸ್ ಎಂದ ಕೂಡಲೇ ಉರಿದುಬೀಳುವ ಸಿಟಿ ರವಿ ಅವರೇ, ಆರ್ ಎಸ್ ಎಸ್ ಎಂದರೆ ಏನು? ಅದರ ಜೊತೆ ಸಂಬಂಧ ಏನು? ಆರ್ ಎಸ್ ಎಸ್ ಎಂದರೆ ಏನು ಸಾಮಾಜಿಕ ಸೇವಾ ಸಂಘಟನೆಯೇ? ಸಾರ್ವಜನಿಕ ದತ್ತಿಯೇ? ಇಲ್ಲವೇ ಬಿಜೆಪಿ ಎಂಬ ರಾಜಕೀಯ ಪಕ್ಷಕ್ಕೆ ನಾಯಕರನ್ನು ಉತ್ಪಾದಿಸಿ ಕೊಡುವ ಕಾರ್ಖಾನೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಆರ್ ಎಸ್ ಎಸ್ ಎನ್ನುವುದು ಹಿಂದುಗಳ ಸಂಘಟನೆ ಎಂದು ನೀವು ಹೇಳುವುದಾದಾರೆ ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೇ? ಬೇರೆ ಪಕ್ಷದವರು ಹಿಂದೂಗಳಲ್ಲವೇ? ದೆಹಲಿಯಲ್ಲಿ 10 ತಿಂಗಳಿಂದ ಬೀದಿಯಲ್ಲಿರುವವರು ಹಿಂದುಗಳಲ್ಲವೇ? ವಾರದ ಹಿಂದೆ ಉತ್ತರಪ್ರದೇಶದಲ್ಲಿ ಅತ್ಯಾಚಾರಕ್ಕೀಡಾದ ದಲಿತ ಯುವತಿ ಹಿಂದು ಅಲ್ಲವೇ?
ಆರ್ ಎಸ್ ಎಸ್ ಸಾಂಸ್ಕೃತಿಕ ಸಂಘಟನೆ ಎಂದಾದರೆ ಅದರ ಸಂಸ್ಕೃತಿಯ ವ್ಯಾಖ್ಯಾನವೇನು? ನಿನ್ನೆ ತಾನೆ ಮಂಗಳೂರಿನಲ್ಲಿ ಅಮಾಯಕ ವಿದ್ಯಾರ್ಥಿ-ವಿದ್ಯಾರ್ಥಿನಿಗಳ ಮೇಲೆ ನಿಮ್ಮ ಪರಿವಾರದ ಗೂಂಡಾಗಳು ನಡೆಸಿದ ದೌರ್ಜನ್ಯ ಕೂಡಾ ಈ ಸಂಸ್ಕೃತಿಯಲ್ಲಿ ಸೇರಿದೆಯೇ? ಎಂದು ಕೇಳಿದ್ದಾರೆ.
ದೇಶ ಮತ್ತು ಹಿಂದುಗಳ ರಕ್ಷಣೆ ಮಾಡಲು ಆರ್ ಎಸ್ ಎಸ್ ನಾಯಕರಿಗೆ ಗುತ್ತಿಗೆ ಕೊಟ್ಟವರಾರು? ಆರ್ ಎಸ್ ಎಸ್ ನಾಯಕರೇನು ಜನರಿಂದ ಚುನಾಯಿತರಾದ ನಾಯಕರೇ? ಅವರು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು?ನಿಮ್ಮ ಎರಡು ಸಂಘಟನೆಗಳ ನಡುವೆ ಮುಖ ಯಾವುದು? ಮುಖವಾಡ ಯಾವುದು?
ನಾನು ಮತ್ತು ನನ್ನಂತಹ ಕೋಟ್ಯಂತರ ಜನ ನಿರ್ಭೀತಿ ಮತ್ತು ಆತ್ಮಗೌರವದಿಂದ ಬದುಕುತ್ತಿರುವುದು ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ. ನಿಮ್ಮ ಪರಿವಾರದ ತಾಲಿಬಾನ್ ಗಿರಿಯನ್ನು ಅದೇ ಸಂವಿಧಾನದಿಂದ ಹಿಮ್ಮೆಟ್ಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಿಟಿ ರವಿ ಅವರೇ, ನಿಮ್ಮನ್ನು ರೈತನ ಮಗ ಎನ್ನುತ್ತೀರಿ,ನಾನು ಉಡುವ ರೈತ ಮಕ್ಕಳ ಪಂಚೆಯನ್ನು ಗೇಲಿ ಮಾಡುತ್ತೀರಿ.ನಿಮ್ಮ ತಂದೆ ಕೂಡಾ ಪಂಚೆ ಉಡುವವರು ಎಂದು ಅಂದುಕೊಳ್ತೀನಿ. ನಿಮ್ಮಂತಹ ಮಗನ ಬಗ್ಗೆ ಅವರೇನು ಅಂದುಕೊಳ್ಳಬಹುದು ಯೋಚಿಸಿದ್ದೀರಾ? ಈ ರೀತಿ ನಾಲಿಗೆ ಸಡಿಲ ಬಿಟ್ಟು ಮನೆಗೆ ಹೋಗುವಾಗ ಹುಷಾರಾಗಿರಿ ಎಂದು ತಿವಿದಿದ್ದಾರೆ.
ಕೊನೆಯದಾಗಿ ಸಿಟಿ ರವಿ ಅವರೇ? ಕಣ್ಣಿಗೆ ಪೊರೆ ಬಂದವರು ಕತ್ತಲಲ್ಲಿ ಕಾರು ಚಲಾಯಿಸಬಾರದು, ಅಪಘಾತವಾಗಿ ಅಮಾಯಕರು ಜೀವ ಕಳೆದುಕೊಳ್ಳುತ್ತಾರೆ. ಪೊರೆ ಬಂದಿದ್ದರೆ ಕ್ಯಾಟಾರಕ್ಟ್ ಮಾಡಿಸಿಕೊಳ್ಳಿ. ಸಾರ್ವಜನಿಕರ ಜೀವ ಮುಖ್ಯ ಎಂದು ಟ್ವಿಟ್ಟರ್‌ನಲ್ಲಿ ಸಿಟಿ ರವಿಗೆ ತಿರುಗೇಟು ನೀಡಿದ್ದಾರೆ.
















ಇನ್ನಷ್ಟು ಸುದ್ದಿಗಳು
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ